ಸೌಜನ್ಯಾ ಅತ್ಯಾಚಾರ-ಕೊಲೆ ಪ್ರಕರಣ ತನಿಖೆಯಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ : ವಿಠಲ ಗೌಡ
ಬೆಳ್ತಂಗಡಿ : “ಸೌಜನ್ಯಾ ಅತ್ಯಾಚಾರ-ಕೊಲೆ ಪ್ರಕರಣದ ನೈಜ ಆರೋಪಿಗಳ ಪತ್ತೆಯಾಗಲಿ, ಶಿಕ್ಷೆಯಾಗಲಿ ಎಂದು ನಾಲ್ಕು ವರ್ಷಗಳಲ್ಲಿ ಹೋರಾಡಿದರೂ ನ್ಯಾಯ ಸಿಗಲೇ ಇಲ್ಲ, ನಮ್ಮ ಕಣ್ಣೀರು ಕೊನೆಯಾಗಲೇ ಇಲ್ಲ, ಇಡೀ ಪ್ರಕರಣವನ್ನು ಮುಚ್ಚಿ ಹಾಕಲಾಯಿತೇ ಎಂಬ ಆತಂಕ, ಆಕ್ರೋಶ ನಮ್ಮಲ್ಲಿ ಮೂಡಿತ್ತು. ಆದರೆ ಸೌಜನ್ಯಾ ಪ್ರಕರಣದ ಸಿಬಿಐ ತನಿಖೆ ಸಮರ್ಪಕವಾಗಿ ನಡೆದಿಲ್ಲ, ತನಿಖೆ ಮುಂದುವರಿಯಲೆಂಬ ನಮ್ಮ ದೂರಿಗೆ ಸ್ಪಂದಿಸಿದ ಸಿಬಿಐ ವಿಶೇಷ ನ್ಯಾಯಾಲಯವು ತನಿಖೆಗೆ ಆದೇಶಿಸಿರುವುದು ನಮ್ಮಲ್ಲಿ ಮತ್ತೆ ನ್ಯಾಯದ ಭರವಸೆ ಮೂಡಿಸಿದೆ, ಮುಂದೆ ಉತ್ತಮ ವಿಶ್ವಾಸಾರ್ಹ ತನಿಖೆ ನಡೆಯಲಿದೆ ಎಂಬ ಭರವಸೆಯಿದೆ, ಸದ್ಯದಲ್ಲೇ ಆರಂಭಗೊಳ್ಳಲಿರುವ ಮುಂದಿನ ತನಿಖೆಯಲ್ಲಿ ನೈಜ ಆರೋಪಿಗಳೇ ಪತ್ತೆಯಾಗಿ ಶಿಕ್ಷೆ ಅನುಭವಿಸಲಿದ್ದಾರೆ” ಎಂದು ಸೌಜನ್ಯಾರ ಮಾವ ಪಾಂಗಾಳ ವಿಠಲ ಗೌಡ ತಿಳಿಸಿದ್ದಾರೆ.
ಸಿಬಿಐ ವಿಶೇಷ ನ್ಯಾಯಾಲಯ ಸೌಜನ್ಯಾ ಅತ್ಯಾಚಾರ-ಕೊಲೆ ಪ್ರಕರಣದ ತನಿಖೆ ಮುಂದುವರಿಸಲು ಆದೇಶಿಸಿದ ಬಗ್ಗೆ ಹೆತ್ತವರ ಪರವಾಗಿ ವಿಠಲ ಗೌಡ ಪ್ರತಿಕ್ರಿಯಿಸಿದರು. “ಮುಂದುವರಿಯಲಿರುವ ತನಿಖೆಯಲ್ಲಿ ಮಗಳನ್ನು ಮುಕ್ಕಿದ ಕ್ರೂರಿಗಳು ಪತ್ತೆಯಾಗಲೇಬೇಕು, ಅವರಿಗೆ ಶಿಕ್ಷೆಯಾಗುವುದನ್ನು ನಾವು ಕಾಣಬೇಕು, ಇಲ್ಲವಾದರೆ ನಾವು ಸತ್ತರೂ ಮಣ್ಣಾಗೆವು ಎಂಬ ಭಾವನೆ ಸೌಜನ್ಯಾ ತಂದೆ ಚಂದಪ್ಪ ಗೌಡ ಹಾಗೂ ತಾಯಿ ಕುಸುಮಾವತಿ ಅವರದ್ದಾಗಿದೆ. ಇದೇ ನಂಬಿಕೆಯಲ್ಲಿ ಮಗಳ ಸಾವಿಗೆ ನ್ಯಾಯ ಸಿಗುವವರೆಗೂ ಹೋರಾಡುವ ಛಲ ಅವರಲ್ಲಿದೆ, ನಮ್ಮ ಛಲಕ್ಕೆ ಹಲವು ಹೋರಾಟಗಾರರೂ, ಬೇರೆ ಬೇರೆ ಸಂಘಟನೆಗಳ ಮುಖಂಡರುಗಳೂ ಮಾರ್ಗದರ್ಶನ, ಬೆಂಬಲ ನೀಡುತ್ತಿದ್ದಾರೆ.
ದಕ್ಷ ತನಿಖಾಧಿಕಾರಿಗಳ ತಂಡದಿಂದ ತನಿಖೆ ನಡೆಯಲಿದ್ದು, ಮಹತ್ವದ ತನಿಖಾ ವರದಿಯೂ ಸಲ್ಲಿಕೆಯಾಗುವ ಭರವಸೆ ನಮಗಿದೆ” ಎಂದು ವಿಠಲ ಗೌಡ ಅಭಿಪ್ರಾಯಪಟ್ಟಿದ್ದಾರೆ.
loading...
No comments