ಸ್ಟೇಟ್ ಬ್ಯಾಂಕ್ ಪರಿಸರದ ಅಕ್ರಮ ಗೂಡಂಗಡಿಗಳ ತೆರವು
ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ನಗರದ ಸ್ಟೇಟ್ ಬ್ಯಾಂಕ್ ಮತ್ತು ರಾವ್ ಅಂಡ್ ರಾವ್ ಸರ್ಕಲ್ ಬಳಿಯ ಅಕ್ರಮ ಗೂಡಂಗಡಿಗಳನ್ನು ಸೋಮವಾರ ಮುಂಜಾನೆ ತೆರವುಗೊಳಿಸಿದರು.
ನಗರ ಪಾಲಿಕೆ ಕಂದಾಯ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಪೊಲೀಸ್ ರಕ್ಷಣೆಯಲ್ಲಿ ಜೆಸಿಬಿ ಬಳಸಿ ತೆರವು ಕಾರ್ಯ ನಡೆಸಿದರು. ಈ ಸಂದರ್ಭ ಮೊದಲೇ ಮಾಹಿತಿ ಪಡೆದುಕೊಂಡ ಕೆಲವು ಗೂಡಂಗಡಿಗಳ ಮಾಲಕರು ತಮ್ಮ ಅಂಗಡಿಗಳನ್ನು ಕ್ಷಿಪ್ರವಾಗಿ ತೆರವುಗೊಳಿಸಿ ಬೇರೆ ಕಡೆಗೆ ಸ್ಥಳಾಂತರ ಮಾಡಿದರು.
ಮಂಗಳೂರು ಪುರಭವನ ಪಕ್ಕದಲ್ಲೇ ಬೀದಿಬದಿ ವ್ಯಾಪಾರಿಗಳ ವಲಯ ಎಂದು ನಿರ್ಮಿಸಲಾಗಿದ್ದರೂ ವ್ಯಾಪಾರಿಗಳು ಅಲ್ಲಿಗೆ ತೆರಳದೇ ಮತ್ತೆ ನಗರದ ಎಲ್ಲೆಂದರಲ್ಲಿ ಖಾಲಿ ಇರುವ ಜಾಗದಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಸೋಮವಾರ ಬೆಳಿಗ್ಗೆ ಮಂಗಳೂರು ನಗರ ಪಾಲಿಕೆ ಅಧಿಕಾರಿಗಳು ಏಕಾಏಕಿ ಕಾರ್ಯಾಚರಣೆ ನಡೆಸಿ ಗೂಡಂಗಡಿ ಹಾಗೂ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಿದರು. ಈ ಸಂದರ್ಭ ಕೆಲವು ಕಡೆ ವ್ಯಾಪಾರಿಗಳು ವಿರೋಧ ತೋರಿದರೂ ಅಧಿಕಾರಿಗಳು ಕ್ಯಾರೇ ಅನ್ನದೇ ಎಲ್ಲಾ ಗೂಡಂಗಡಿಗಳನ್ನು ತೆರವು ಮಾಡಿ ಲಾರಿಗಳಲ್ಲಿ ಎತ್ತಾಕಿಕೊಂಡು ಹೋದರು.
ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗು ಬಂದೋಬಸ್ತ್ ಏರ್ಪಡಿಸಿದ್ದರು.
loading...
No comments