Breaking News

"ಕಪ್ಪ"ಸಿಬಿಐ ಮೂಲಕ ಸಿದ್ದರಾಮಯ್ಯನವರಿಗೆ ಚಾಟಿ ಬೀಸಲು ಯಡ್ಡಿ ಸಿದ್ಧತೆ


ಕಲಬುರಗಿ-ವಿಧಾನಪರಿಷತ್ ಸದಸ್ಯ ಗೋವಿಂದರಾಜು ನಿವಾಸದ ಮೇಲೆ ಐಟಿ ದಾಳಿ ನಡೆದ ವೇಳೆ ಸಿಕ್ಕಿ ಬಿದ್ದಿರುವ ಪ್ರಮುಖ ಮಾಹಿತಿಯನ್ನು ಬಹಿರಂಗಪಡಿಸುವಂತೆ ಸಿಬಿಐಗೆ ಪತ್ರ ಬರೆಯಲಾಗುವುದು ಎಂದು ಬಿ.ಎಸ್.ಯಡಿಯೂರಪ್ಪ ಹೇಳುವ ಮೂಲಕ ಕಾಂಗ್ರೆಸ್ ವಿರುದ್ದ ನೇರವಾಗಿಯೇ ಸಮರ ಸಾರಿದ್ದಾರೆ. ನನ್ನ ಅಧಿಕಾರಾವಧಿಯಲ್ಲಿ ಹಗರಣ ನಡೆದಿದ್ದರೆ ನೀವೇ ಮುಖ್ಯಮಂತ್ರಿ. ನಿಮ್ಮ ಬಳಿ ಎಲ್ಲ ತನಿಖೆ ಸಂಸ್ಥೆಗಳಿವೆ. ದಾಖಲೆಗಳಿದ್ದರೆ ಬಹಿರಂಗಪಡಿಸಿ ನನ್ನನ್ನು ಬೆತ್ತಲು ಮಾಡಲಿ. ನಿಮ್ಮನ್ನು ಯಾವ ಕೈಗಳು ಕಟ್ಟಿ ಹಾಕಿವೆ ಎಂದು ಬಿಎಸ್‍ವೈ ಪ್ರಶ್ನಿಸಿದರು. ಕಾಂಗ್ರೆಸ್ ಹೈಕಮಾಂಡ್‍ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಸಾವಿರ ಕಪ್ಪ ಕಾಣಿಕೆ ನೀಡಿರುವುದು ವಿಧಾನಪರಿಷತ್ ಸದಸ್ಯ ಗೋವಿಂದರಾಜು ಅವರ ಡೈರಿಯಲ್ಲಿ ಉಲ್ಲೇಖವಾಗಿದೆ. ಇದರ ಮಾಹಿತಿ ನೀಡುವಂತೆ ಸಿಬಿಐಗೆ ನಮ್ಮ ಸಂಸದರಿಂದ ಪತ್ರ ಬರೆಯಲಾಗುವುದು. ಸತ್ಯಾಂಶ ಆಗಲಾದರೂ ಗೊತ್ತಾಗಲಿ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಾನು ಈ ಹಿಂದೆ ಹೇಳಿದ ಎಲ್ಲ ಹೇಳಿಕೆಗೆ ಬದ್ಧನಾಗಿದ್ದೇನೆ. ತಮ್ಮ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಹೈಕಮಾಂಡ್‍ಗೆ ಒಂದು ಸಾವಿರ ಕೋಟಿ ಕಪ್ಪ ಕಾಣಿಕೆ ನೀಡಿರುವುದು ಡೈರಿಯಲ್ಲಿ ಉಲ್ಲೇಖವಾಗಿದೆ. ಸ್ವತಃ ಗೋವಿಂದರಾಜು ಅವರೇ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ಸಿಗರು ನನ್ನ ಆರೋಪಕ್ಕೆ ಉತ್ತರ ನೀಡುವ ಬದಲು ನನ್ನನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಯಡಿಯೂರಪ್ಪ ಜಗ್ಗುವುದಿಲ್ಲ ಎಂದು ಗುಡುಗಿದರು.ಐಟಿ, ಇಡಿ ಹಾಗೂ ಸಿಬಿಐ ಅಧಿಕಾರಿಗಳಿಗೆ ಡೈರಿ ಸಿಕ್ಕಿದೆಯೇ ಇಲ್ಲ ಎಂಬುದನ್ನು ಗೋವಿಂದರಾಜು ಬಹಿರಂಗಪಡಿಸಬೇಕು. ನಾನು ಈಗಲೂ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತರ ಮೂಲಕ ಎಐಸಿಸಿ ವರಿಷ್ಠರಿಗೆ ಒಂದು ಸಾವಿರ ಕೋಟಿ ಹಣ ನೀಡಿರುವುದು ನಿಜ. ನನ್ನ ಆರೋಪ ಸುಳ್ಳು ಎಂದಾದರೆ ಈಗಲೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಎಸೆದರು.
sanjevani
loading...

No comments