Breaking News

ಭಟ್ಕಳ ಉಪನ್ಯಾಸಕಿಯರು ಬುರ್ಖಾ ಧರಿಸಿ ತರಗತಿ ನಡೆಸುವುದನ್ನು ವಿರೋಧಿಸಿ ಕೇಸರಿ ಶಾಲು ಧರಿಸಿ ತರಗತಿಗೆ ಬಂದ ವಿದ್ಯಾರ್ಥಿಗಳು


ಭಟ್ಕಳ : ನಾಲ್ಕು ಮಂದಿ ಉಪನ್ಯಾಸಕಿಯರು ಬುರ್ಖಾ ಧರಿಸಿ ತರಗತಿ ನಡೆಸುವುದನ್ನು ವಿರೋಧಿಸಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 50ಕ್ಕೂ ಅಧಿಕ ವಿದ್ಯಾರ್ಥಿಗಳು ಸೋಮವಾರ ಕೇಸರಿ ಶಾಲುಗಳನ್ನು ಧರಿಸಿ ಕಾಲೇಜಿಗೆ ಬರುವುದರ ಮೂಲಕ ಪ್ರತಿಭಟನೆ ನಡೆಸಿದ್ದು, ಪ್ರಕರಣ ಇತ್ಯರ್ಥಗೊಳ್ಳುವವರೆಗೂ ಕೇಸರಿ ಶಾಲು ಧರಿಸುವುದನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ. ಇದರಿಂದ ಶಿರಸಿ ಮುಂತಾದ ಕಡೆಯ ಕಾಲೇಜುಗಳಲ್ಲಿ ತಲೆದೋರಿದ್ದ ಬುರ್ಖಾ ಮತ್ತು ಕೇಸರಿ ಶಾಲು ವಿವಾದ ಭಟ್ಕಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲೂ ಆರಂಭವಾದಂತಾಗಿದೆ.

ಪಟ್ಟಣದ ರಂಗೀಕಟ್ಟೆಯ ಬಾಡಿಗೆ ಕಟ್ಟಡದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಟ್ಟೂ 856 ಮಂದಿ ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ 5 ಮಂದಿ ಖಾಯಂ ಉಪನ್ಯಾಸಕರು, 2 ಮಂದಿ ಸಿಬ್ಬಂದಿ ಹಾಗೂ 54 ಮಂದಿ ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. 54 ಅತಿಥಿ ಉಪನ್ಯಾಸಕರಲ್ಲಿ 4 ಮಂದಿ ಉಪನ್ಯಾಸಕಿಯರು ದಿನಂಪ್ರತಿ ಕಾಲೇಜು ತರಗತಿ ನಡೆಸುವಾಗ ಬುರ್ಖಾ ಧರಿಸಿಯೇ ಇರುತ್ತಾರೆ ಎನ್ನುವುದು ವಿದ್ಯಾರ್ಥಿಗಳ ಗಂಭೀರ ಆರೋಪವಾಗಿದೆ.

ಬುರ್ಖಾ ಧರಿಸಿ ಉಪನ್ಯಾಸ ಮಾಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೇ ತರಗತಿ ನಡೆಸುವಾಗ 4 ಮಂದಿ ಉಪನ್ಯಾಸಕಿಯರು ಬುರ್ಖಾ ತೆಗೆದು ಉಪನ್ಯಾಸ ಮಾಡಬೇಕು ಎಂದು ವಿದ್ಯಾರ್ಥಿಗಳು ಶುಕ್ರವಾರ ಪ್ರಾಂಶುಪಾಲರಿಗೆ ದೂರು ನೀಡಿದ್ದರು. ಈ ಬಗ್ಗೆ ಆಡಳಿತ ಮಂಡಳಿ ಹಾಗೂ ಮೇಲಧಿಕಾರಿಗಳ ಜೊತೆ ಚರ್ಚಿಸಿ ನಿರ್ಧಾರ ತಿಳಿಸುವುದಾಗಿ ಪ್ರಾಂಶುಪಾಲರು ಹೇಳಿದ್ದಾರೆನ್ನಲಾಗಿದೆ. ಸೋಮವಾರದೊಳಗೆ ಸಮಸ್ಯೆ ಬಗೆಹರಿಸದೇ ಇದ್ದಲ್ಲಿ ತಾವೂ ಕೂಡ ಕಾಲೇಜಿಗೆ ಬರುವಾಗ ಕೇಸರಿ ಶಾಲು ಧರಿಸಿ ಬರುವುದಾಗಿಯೂ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ತಿಳಿಸಿದ್ದರು. ಆದರೆ ಪ್ರಾಂಶುಪಾಲರು ಸೋಮವಾರ ಕಾಲೇಜಿಗೆ ಆಗಮಿಸಲೇ ಇಲ್ಲ. ಪ್ರಾಂಶುಪಾಲರ ಗೈರಿನಿಂದಾಗಿ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಸೋಮವಾರ ತರಗತಿಯಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಯೇ ಪಾಠ ಕೇಳಿದರು.

ಘಟನೆಯ ಸುದ್ದಿ ತಿಳಿದು ನಗರ ಠಾಣೆಯ ಪೊಲೀಸರು, ಮಾಧ್ಯಮದವರು ಕಾಲೇಜಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ವಿದ್ಯಾರ್ಥಿಗಳು, “ತರಗತಿಯಲ್ಲಿ ವಿದ್ಯಾರ್ಥಿನಿಯರು ಬುರ್ಖಾ ತೆಗೆದಿಟ್ಟು ಬರುತ್ತಾರೆ. ಆದರೆ ಉಪನ್ಯಾಸಕಿಯರು ಮಾತ್ರ ಬುರ್ಖಾ ಹಾಕಿಕೊಂಡೇ ಉಪನ್ಯಾಸ ಮಾಡುತ್ತಾರೆ. ಬುರ್ಖಾ ತೆಗೆದು ಪಾಠ ಮಾಡಿ ಎಂದು ನಾವು ಆಗ್ರಹಿಸುತ್ತೇವೆ. ನಮ್ಮ ದೂರನ್ನು ನಾವು ಪ್ರಾಂಶುಪಾಲರಿಗೆ ನೀಡಿದ್ದೇವೆ. ಎಲ್ಲಿಯವರೆಗೆ ಅವರು ಪಾಠ ಮಾಡುವಾಗ ಬುರ್ಖಾ ತೆಗೆಯುವುದಿಲ್ಲವೋ ಅಲ್ಲಿಯವರೆಗೆ ನಾವು ಕೇಸರಿ ಶಾಲನ್ನು ಧರಿಸುವುದನ್ನು ಬಿಡುವುದಿಲ್ಲ. ಕಾಲೇಜಿನಲ್ಲಿ ಸಮವಸ್ತ್ರ ಸಂಹಿತೆ ಜಾರಿ ಮಾಡಲು ನಮ್ಮದೇನೂ ತಕರಾರಿಲ್ಲ. ಪರೀಕ್ಷೆ ಹತ್ತಿರ ಬಂದರೂ ಗುರುತಿನ ಚೀಟಿ ಇನ್ನೂ ವಿತರಿಸಿಲ್ಲ” ಎಂದರು.

ಪ್ರಭಾರೆ ಪ್ರಾಚಾರ್ಯೆ ಭಾಗಿರಥಿ ನಾಯ್ಕ ಮಾಧ್ಯಮದವರೊಂದಿಗೆ ಮಾತನಾಡಿ, “ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬರುತ್ತಿರುವುದರ ಬಗ್ಗೆ ನಾವು ಈಗಾಗಲೇ ಕಾಲೇಜು ಶಿಕ್ಷಣದ ಜಂಟಿ ನಿರ್ದೇಶಕರು, ಕಮಿಷನರರಿಗೆ ಹಾಗೂ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರಿಗೆ ಮಾಹಿತಿ ನೀಡಿದ್ದೇವೆ. ಪ್ರಾಂಶುಪಾಲರು ಅನಾರೋಗ್ಯದ ಪ್ರಯುಕ್ತ ರಜೆ ಹಾಕಿದ್ದು, ಅವರು ಬಂದ ನಂತರ ಮುಂದಿನ ನಿರ್ಧಾರ ಕೈಗೊಳ್ಳುತ್ತಾರೆ” ಎಂದರು.


loading...

No comments