Breaking News

ಬುರ್ಖಾ-ಕೇಸರಿ ಶಾಲು ವಿವಾದ ಕಾಲೇಜಿನಲ್ಲಿ ಮಾರಾಮಾರಿ


ಶಿವಮೊಗ್ಗ : ಇಲ್ಲಿನ ಸರ್ಕಾರಿ ಪದವಿ ಕಾಲೇಜೊಂದರ ಆವರಣದಲ್ಲಿ ವಿದ್ಯಾರ್ಥಿಯೊಬ್ಬ ಕೇಸರಿ ಶಾಲು ತೆರವುಗೊಳಿಸಲು ನಿರಾಕರಿಸಿದ ಕಾರಣಕ್ಕಾಗಿ ವಿದ್ಯಾರ್ಥಿಗಳ ಮತ್ತೊಂದು ಗುಂಪೊಂದು ಆತನ ಮೇಲೆ ದಾಳಿ ನಡೆಸಿದೆ.

ಕಾಲೇಜಿನ ಪ್ರಥಮ ವರ್ಷದ ಬಿಬಿಎಂ ವಿದ್ಯಾರ್ಥಿ ಶರತ್ ಎಂಬವ, ಕಾಲೇಜಿನಲ್ಲಿ ಒಂದು ವರ್ಗದ ವಿದ್ಯಾರ್ಥಿನಿಯರು ತರಗತಿಯಲ್ಲಿ ಬುರ್ಖಾ ಧರಿಸುವುಕ್ಕೆ ಪ್ರತಿಭಟನಾರ್ಥವಾಗಿ ಕೇಸರಿ ಶಾಲು ಧರಿಸಿಕೊಂಡು ಬಂದಿದ್ದ. ಆ ಬಳಿಕ ಕಾಲೇಜಿನಲ್ಲಿ ಸಂಘರ್ಷಮಯ ವಾತಾವರಣ ಸೃಷ್ಟಿಯಾಗಿತ್ತು ಎಂದು ಕಾಲೇಜಿನ ಅಧಿಕಾರಿಗಳು ಹೇಳಿದ್ದಾರೆ.

ಇದರಿಂದ ಕುಪಿತಗೊಂಡ ಮುಸ್ಲಿಂ ವಿದ್ಯಾರ್ಥಿಗಳು, ಕಾಲೇಜು ಆವರಣದಲ್ಲಿ ಕೇಸರಿ ಶಾಲು ಧರಿಸದಂತೆ ಶರತನಿಗೆ ಸೂಚಿಸಿದರು. ಆದರೆ ಶರತ್ ಅವರ ಮಾತಿಗೆ ಬೆಲೆ ಕೊಡದೆ, ವಿದ್ಯಾರ್ಥಿನಿಯರು ಬುರ್ಖಾ ತೆರವುಗೊಳಿಸಿದರೆ ಮಾತ್ರ ತಾನು ಕೇಸರಿ ಶಾಲು ಧರಿಸುವುದಿಲ್ಲ ಎಂದ. ಈ ಮಾತು ಪರಸ್ಪರ ವಿದ್ಯಾರ್ಥಿ ಗುಂಪಿನಲ್ಲಿ ಗಲಾಟೆಗೆ ಕಾರಣವಾಯಿತು ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳು ಶರತನಿಗೆ ಹಲ್ಲೆ ನಡೆಸಿದರು.

ಘಟನೆ ಬಗ್ಗೆ ಕಾಲೇಜು ಆಡಳಿತ ಪೊಲೀಸರಿಗೆ ದೂರು ನೀಡಿದ್ದು, ತಕ್ಷಣ ಕಾಲೇಜಿಗೆ ಧಾವಿಸಿದ ಪೊಲೀಸರು ಪರಿಸ್ಥಿತಿ ಕೈಮೀರದಂತೆ ನೋಡಿಕೊಂಡಿದ್ದಾರೆ.

ವಿದ್ಯಾರ್ಥಿಗಳ ದಾಳಿಯಲ್ಲಿ ಶರತ್ ಗಾಯಗೊಂಡಿದ್ದಾನೆ.

ಘಟನೆಗೆ ಸಂಬಂಧಿಸಿ ಸೈಯ್ಯದ್ ಅಹ್ಮದ್, ಫೈಜುಲ್ಲಾ ಬೇಗ್, ಇರ್ಷಾದ್, ಶರತ್, ಶತೀಶ್ ಮತ್ತು ವಿನಯ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.



loading...

No comments