Breaking News

ನಿಮ್ಮ ಮುಖ ಚೆಂದ ಕಾಣ ಬೇಕೇ ?



ಭಾರತೀಯ ಸಂಸ್ಕೃತಿಯಲ್ಲಿ ಚಂದನಕ್ಕೆ ಅಥವಾ ಶ್ರೀಗಂಧಕ್ಕೆ ಪ್ರಮುಖ ಸ್ಥಾನವಿದ್ದು ನೂರಾರು ವರ್ಷಗಳಿಂದ ಪ್ರಮುಖ ಸೌಂದರ್ಯ ಪ್ರಸಾಧನದ ರೂಪದಲ್ಲಿ ಬಳಸಲಾಗುತ್ತಾ ಬರಲಾಗಿದೆ. ವಿಶೇಷವಾಗಿ ಮದುಮಗಳನ್ನು ಸಿಂಗರಿಸುವಲ್ಲಿ ಚಂದನ ಮತ್ತು ಅರಿಶಿನ ಪ್ರಮುಖ ಪಾತ್ರ ವಹಿಸುತ್ತಿವೆ. ಚಂದನದ ಲೇಪನದಿಂದ ಕಂಗೊಳಿಸುವ ವದನ ಮದುಮಗಳ ಚೆಲುವನ್ನು ಇನ್ನಿಲ್ಲದಷ್ಟು ಹೆಚ್ಚಿಸುತ್ತದೆ. ನಿಮ್ಮ ಅಂದದ ತ್ವಚೆಗೆ ಚಂದನದ ಆರೈಕೆ

ಇಂತಹ ಸಾಂಪ್ರಾದಾಯಿಕ ಮುಖಲೇಪಗಳನ್ನು ಬಳಸುವ ಮೂಲಕ ಇಂದಿಗೂ ಮದುಮಗಳ ಸಹಿತ ಇತರರೂ ಕಾಂತಿಯುಕ್ತ ಸೌಂದರ್ಯವನ್ನು ಪಡೆಯಬಹುದು. ವೃತ್ತಿಪರ ಮಳಿಗೆಗಳಲ್ಲಿಯೂ ಉತ್ತಮ ಕಾಂತಿ ಪಡೆಯಬಹುದಾದರೂ ಇವರು ಇದಕ್ಕಾಗಿ ಚಂದನ ಬಳಸಿರುವ ಗುಟ್ಟನ್ನು ಮಾತ್ರ ಹೇಳುವುದಿಲ್ಲ.

ಸುಂದರ, ನೈಸರ್ಗಿಕ, ಕಾಂತಿಯುಕ್ತ ವದನ ಮತ್ತು ಇದರ ಮೂಲಕ ಪಡೆಯಬಹುದಾದ ಆತ್ಮವಿಶ್ವಾಸಕ್ಕಾಗಿ ಕೆಳಗೆ ವಿವರಿಸಿರುವ ಯಾವುದಾದರೊಂದು ವಿಧಾನವನ್ನು ಅನುಸರಿಸಿ, ಮದುಮಗಳಂತೆ ಕಂಗೊಳಿಸಿ.

ಚಂದನ ಮತ್ತು ಹಾಲು : ಗಂಧದ ಕೊರಡನ್ನು ಕೊಂಚ ಹಾಲಿನೊಂದಿಗೆ ತೇದಿ ದಪ್ಪನೆಯ ಲೇಪ ತಯಾರಿಸಿ. ಕೊರಡು ಇಲ್ಲದಿದ್ದರೆ ಚಂದನದ ಪುಡಿಯನ್ನೂ ಬಳಸಬಹುದು. ಆದರೆ ಇದರಲ್ಲಿ ಕಲಬೆರಕೆ ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಈಗ ತಾನೇ ತೊಳೆದುಕೊಂಡ ಮುಖಕ್ಕೆ ಈ ಲೇಪನವನ್ನು ಅತಿ ತೆಳ್ಳಗೂ ಅಲ್ಲ, ಅತಿ ದಪ್ಪನೆಯೂ ಅಲ್ಲವೆಂಬಂತೆ ಹಚ್ಚಿ ಹಾಗೇ ಒಣಗಲು ಬಿಡಿ.
ತೆಳ್ಳಗಿದ್ದರೆ ತಕ್ಷಣ ಒಣಗುತ್ತದೆ. ದಪ್ಪಗಿದ್ದರೆ ಚರ್ಮದಲ್ಲಿ ಉರಿಯುಂಟಾಗಬಹುದು. ಆದ್ದರಿಂದ ಸೂಕ್ತವಾದಷ್ಟು ದಪ್ಪನಾಗಿ ಹಚ್ಚಿ. ಚೆನ್ನಾಗಿ ಒಣಗಿದ ಬಳಿಕ ಕೇವಲ ತಣ್ಣೀರಿನಿಂದ ಮಾತ್ರ ತೊಳೆದುಕೊಂಡು ದಪ್ಪ ಟವೆಲ್ಲಿನಿಂದ ಒತ್ತಿ ಒರೆಸಿಕೊಳ್ಳಿ. ಉಜ್ಜಲು ಹೋಗಬೇಡಿ.
ಚಂದನ ಮತ್ತು ಲೋಳೆಸರ : ಕೊಂಚ ಲೋಳೆಸರ (ಆಲೋವೆರಾ) ದ ರಸ ಮತ್ತು ಒಂದು ದೊಡ್ಡ ಚಮಚ ಚಂದನದ ಪುಡಿಯನ್ನು ಬೆರೆಸಿ ದಪ್ಪನೆಯ ಲೇಪನ ತಯಾರಿಸಿ. ಈಗ ತಾನೇ ತೊಳೆದುಕೊಂಡ ಮುಖಕ್ಕೆ ಈ ಲೇಪನವನ್ನು ಅತಿ ತೆಳ್ಳಗೂ ಅಲ್ಲ, ಅತಿ ದಪ್ಪನೆಯೂ ಅಲ್ಲವೆಂಬಂತೆ ಹಚ್ಚಿ.
ಈ ವಿಧಾನ ಬಿಸಿಲಿಗೆ ಕಪ್ಪಾದ ಅಥವಾ ಬೇರಾವುದೋ ಕಾರಣದಿಂದ ಚರ್ಮ ತೀರಾ ಒಣಗಿದ್ದು ಪಕಳೆ ಎದ್ದಿದ್ದಾಗ ಅತ್ಯಂತ ಸೂಕ್ತವಾಗಿದೆ. ಕೊಂಚ ಹೊತ್ತು ಒಣಗಲು ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ವಾರಕ್ಕೊಂದು ಅಥವಾ ಎರಡು ಬಾರಿ ಮಾತ್ರ ಈ ವಿಧಾನ ಅನುಸರಿಸಿ.
ಚಂದನ ಮತ್ತು ಅರಿಶಿನ : ಚಂದನದ ಮುಖಲೇಪಗಳಲ್ಲಿಯೇ ಅತ್ಯಂತ ಜನಪ್ರಿಯ ಮತ್ತು ಫಲಪ್ರದವಾದ ಈ ಮಿಶ್ರಣ ಮದುಮಗಳಿಗೆಂದೇ ವಿಶೇಷವಾಗಿ ಭಾರತದೆಲ್ಲೆಡೆ ತಯಾರಾಗುತ್ತದೆ. ಹೆಚ್ಚೂ ಕಡಿಮೆ ಎಲ್ಲಾ ಬಗೆಯ ಚರ್ಮಕ್ಕೆ ಸೂಕ್ತವಾದ ಈ ಲೇಪನಕ್ಕಾಗಿ ಮೊದಲು ಸಮಪ್ರಮಾಣದಲ್ಲಿ ಅರಿಶಿನ ಮತ್ತು ಚಂದನದ ಪುಡಿಗಳನ್ನು ಬೆರೆಸಿ ಅಗತ್ಯಕ್ಕೆ ತಕ್ಕಷ್ಟು ಹಸಿ ಹಾಲು ಅಥವಾ ಮೊಸರನ್ನು ಬೆರೆಸಿ ಲೇಪನ ತಯಾರಿಸಿ.

ಈಗ ತಾನೇ ತಣ್ಣೀರಿನಿಂದ ತೊಳೆದುಕೊಂಡ ಮುಖ, ಕುತ್ತಿಗೆ ಕೈಗಳಿಗೆ ಹಚ್ಚಿ ಕೊಂಚ ಹೊತ್ತು ಹಾಗೇ ಬಿಡಿ. ಬಳಿಕ ಮೊದಲು ತಣ್ಣೀರಿನಿಂದ, ಬಳಿಕ ಹಳದಿ ಬಣ್ಣವನ್ನು ನಿವಾರಿಸಲು ಕೊಂಚವೇ ಉಗುರುಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಬೇಡಿ.
ಚಂದನ ಮತ್ತು ಬೇವು : ಒಂದು ವೇಳೆ ನಿಮ್ಮ ಮುಖದಲ್ಲಿ ಮೊಡವೆಗಳ ಕಾಟವಿದ್ದರೆ ಈ ಮುಖಲೇಪ ನಿಮಗೆ ಸೂಕ್ತವಾಗಿದೆ. ಇದಕ್ಕಾಗಿ ಬೇವಿನ ಮತ್ತು ಚಂದನದ ಪುಡಿಗಳನ್ನು ಸಮಪ್ರಮಾಣದಲ್ಲಿ ನೀರಿನೊಂದಿಗೆ ಬೆರೆಸಿ ಲೇಪನ ತಯಾರಿಸಿ.

ಈಗತಾನೇ ತೊಳೆದುಕೊಂಡ ಮುಖಕ್ಕೆ ಈ ಲೇಪನವನ್ನು ಹಚ್ಚಿ, ಮೊಡವೆಗಳಿರುವಲ್ಲಿ ಹೆಚ್ಚು ದಪ್ಪನಾಗಿ ಹಚ್ಚಿ. ಬೇವಿನ ಬ್ಯಾಕ್ಟೀರಿಯಾ ನಿವಾರಕ ಗುಣ ಮತ್ತು ಚಂದನದ ಪೋಷಣೆಯ ಗುಣಗಳು ಒಂದಾದಲ್ಲಿ ಅದ್ಭುತವಾದ ಪರಿಣಾಮಗಳನ್ನೇ ಪಡೆಯಬಹುದು.
loading...

No comments