Breaking News

ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು : ಯಶ್



ಜೇವರ್ಗಿ : ಎಲ್ಲಾ ಸಮಸ್ಯೆಗಳಿಗೂ ಆತ್ಮಹತ್ಯೆ ಒಂದೇ ಪರಿಹಾರವಲ್ಲ, ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ನಟ ಯಶ್ ರೈತರಿಗೆ ಹೇಳಿದರು.

ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ರವಿವಾರ ಜಿಪಂ ಮಾಜಿ ಸದಸ್ಯ ಅಶೋಕ ಸಾಹು ಗೋಗಿ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ರೈತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲಾ ಸಮಸ್ಯೆಗಳಿಗೂ ದೇವರಿದ್ದಾನೆ ಆದರೆ ಪ್ರತಿಯೊಬ್ಬರು ಸ್ವಾಭಿಮಾನ ಬೆಳೆಸಿಕೊಂಡು ನಮ್ಮ ಬದುಕನ್ನು ನಾವೇ ರೂಪಿಸಿಕೊಳ್ಳಬೇಕು. ದೇವರು ಕಷ್ಟ ಕೊಡುತ್ತಿದ್ದಾನೆ ಎಂದರೆ ಭವಿಷ್ಯದಲ್ಲಿ ಅವನಿಗೆ ಒಳ್ಳೆಯದಾಗುತ್ತದೆ ಎಂದರ್ಥ. ನಾನು ಸಹ ಅನೇಕ ಕಷ್ಟಗಳನ್ನು ಎದುರಿಸಿ ಮೇಲೆ ಬಂದಿದ್ದೇನೆ. ಉತ್ತರ ಕರ್ನಾಟಕದ ಜನರು ನಾನು ಕಷ್ಟದಲ್ಲಿದ್ದಾಗ ಕೈಹಿಡಿದು ಮೇಲೆಕ್ಕೆತ್ತಿದ್ದಾರೆ. ಈ ಭಾಗದ ಜನರಿಗೆ ನಾನು ಸದಾ ಚಿರಋಣಿಯಾಗಿರುತ್ತೇನೆ.

ಸತತವಾಗಿ ಕಾಡುತ್ತಿರುವ ಬರವನ್ನು ನೀಗಿಸಲು ಕೆರೆ ಸಂರಕ್ಷಣೆ ಹಾಗೂ ಕೆರೆಯ ಅಭಿವೃದ್ಧಿಯೇ ಪರಿಹಾರ. ರಾಜ್ಯದ ಪ್ರತಿ ಗ್ರಾಮಗಳಲ್ಲಿ ಕೆರೆಗಳು ಹಾಗೂ ಕೃಷಿ ಹೊಂಡಗಳನ್ನು ನಿರ್ಮಿಸಬೇಕು. ಪ್ರತಿಯೊಬ್ಬರಲ್ಲಿ ಮಳೆ ನೀರಿನ ಮಹತ್ವ ಅದರ ಸಂರಕ್ಷಣೆ ಹಾಗೂ ಕೆರೆಯ ಅಗತ್ಯತೆಯ ಕುರಿತು ಜಾಗ್ರತಿ ಮೂಡಿಸುವ ಕಾರ್ಯವಾಗಬೇಕು. ರೈತರಿಗೆ ಸರಕಾರ ನೀರು ಕೊಟ್ಟರೆ, ರೈತರೇ ಸರಕಾರಕ್ಕೆ ಸಾಲ ಕೊಡಲು ಮುಂದಾಗುತ್ತಾರೆ. ರೈತರು ಸಮಸ್ಯೆಗೆ ಸಿಲುಕಿದಾಗ ಧೈರ್ಯ ತುಂಬುವ ಜವಾಬ್ದಾರಿ ಪ್ರತಿಯೊಬ್ಬ ಕಲಾವಿದರ ಮೇಲಿರುತ್ತದೆ. ಜೇವರ್ಗಿ ಜನತೆ ನನ್ನ ಮೇಲೆ ಇಷ್ಟೊಂದು ಅಭಿಮಾನ ಇಟ್ಟು ನಿರೀಕ್ಷೆಗೂ ಮೀರಿ ಇಲ್ಲಿ ಸೇರಿದ್ದಾರೆ. ನಿಮ್ಮ ಈ ಪ್ರೀತಿಯ ಅಭಿಮಾನ ನಾನು ಎಂದಿಗೂ ಮರೆಯೋದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ಅಶೋಕ ಸಾಹು ಗೋಗಿ, ಕರವೇ ರಾಜ್ಯ ಸಂಚಾಲಕ ಬಸವರಾಜ ಪಡಕೋಟೆ, ಮುಖಂಡರಾದ ಮಲ್ಲಶೆಟ್ಟೆಪ್ಪಗೌಡ ಹಿರೇಗೌಡ, ಎಂ.ಎಸ್.ಪಾಟೀಲ ಹರವಾಳ, ವಿಎಚ್‍ಪಿ ಮುಖಂಡ ಮಲ್ಲಿಕಾರ್ಜುನ ಆದ್ವಾನಿ, ಕರವೇ ಅಧ್ಯಕ್ಷ ಶಿವಲಿಂಗ ಹಳ್ಳಿ, ಧರ್ಮು ಚೀನಿ ರಾಠೋಡ, ಅಂಬರೀಶ ಪತಂಗೆ, ನವೀನ ಗುತ್ತೇದಾರ, ಸಿದ್ದು ಕಲ್ಲೂರ, ಮಹೇಶ ಆಲೂರ, ಸಂತೋಷ, ಮಲ್ಲಾಬಾದ, ಸಿದ್ದು ಸಾಹು ಗೋಗಿ, ಭಿಮು ಹಳ್ಳಿ, ಈಶ್ವರ ಹಿಪ್ಪರಗಿ, ಬಸವರಾಜ ಸೂಗೂರ, ಬಸವರಾಜ ಕೋಳಕೂರ, ಬಸವರಾಜ ಕೀರಣಗಿ, ಗುರುಬಸಯ್ಯ ಸ್ಥಾವರಮಠ, ಕಾಳೇಶ ಪತ್ತಾರ ಸೇರಿದಂತೆ ಇತರರು ಇದ್ದರು.
-sanje vani
loading...

No comments