Breaking News

ಕರ್ನಾಟಕದ ಹೆಮ್ಮೆ ಮುಧೋಳ ನಾಯಿಗಳು


ಭಾರತೀಯ ಸೇನೆಯ ಶ್ವಾನ ದಳದ ಭಾಗವಾಗಿರುವ ಪ್ರಪ್ರಥಮ ದೇಶೀ ತಳಿಯ ನಾಯಿಗಳು ಎಂಬ ಖ್ಯಾತಿಗೆ ಪಾತ್ರವಾಗಿರುವ ಮುಧೋಳ ನಾಯಿಗಳು ಕರ್ನಾಟಕದ ಪಾಲಿನ ಹೆಮ್ಮೆಯೆಂದೇ ಹೇಳಬಹುದು. ಹೆಚ್ಚಾಗಿ ಉತ್ತರ ಕರ್ನಾಟಕದ ಭಾಗಗಳಲ್ಲಿ, ದಕ್ಷಿಣ ಮಹಾರಾಷ್ಟ್ರ ಹಾಗೂ ಆಂಧ್ರ ಪ್ರದೇಶದ ಕೆಲ ಭಾಗಗಳಲ್ಲಿ ಈ ಜಾತಿಯ ನಾಯಿಗಳನ್ನು ಕಾಣಬಹುದಾಗಿದೆ.

ಮಧ್ಯ ಪೂರ್ವ ರಾಷ್ಟ್ರಗಳು ಈ ಜಾತಿಯ ನಾಯಿಗಳ ಮೂಲವೆಂದು ತಿಳಿಯಲಾಗಿದ್ದು ಅಫ್ಘಾನಿಸ್ತಾನ, ಟರ್ಕಿ ಹಾಗೂ ಪರ್ಷಿಯಾದ ಆಕ್ರಮಣಕಾರರು ಭಾರತಕ್ಕೆ ಆಗಮಿಸಿದಾಗ ಅವರೊಂದಿಗೆ ಸಲುಕಿ, ಸ್ಲೌಘಿ ಹಾಗೂ ಗ್ರೇಹೌಂಡ್ ಜಾತಿಯ ನಾಯಿಗಳನ್ನು ಕರೆತಂದಿದ್ದರು. ಈ ಜಾತಿಯ ನಾಯಿಗಳಿಂದಲೇ  ಇಂದಿನ ಮುಧೋಳ ನಾಯಿಗಳು ಹುಟ್ಟಿಕೊಂಡವು ಎಂದು ತಿಳಿಯಲಾಗಿದೆ.



ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಆರಂಭದಲ್ಲಿ ಹೆಚ್ಚು ಜನಪ್ರಿಯಗೊಂಡಿದ್ದರಿಂದಲೇ ಇವುಗಳಿಗೆ ಮುಧೋಳ ನಾಯಿಗಳೆಂಬ  ಹೆಸರು ಬರಲು ಕಾರಣ. ಮುಧೋಳ ನಾಯಿಗಳನ್ನು ಕ್ಯಾರವಾನ್ ಹೌಂಡ್ ಎಂದೂ ಕರೆಯಲಾಗುತ್ತಿದ್ದು ಗ್ರಾಮಗಳಲ್ಲಿ ಕರ್ವಾನಿ ಎಂಬ ಹೆಸರೂ ಈ ಜಾತಿಯ ನಾಯಿಗಳಿಗಿವೆ.

ಕೆನ್ನಲ್ ಕ್ಲಬ್ ಆಫ್ ಇಂಡಿಯಾ ಈ ಜಾತಿಯ ನಾಯಿಗಳನ್ನು ಕ್ಯಾರವಾನ್ ಹೌಂಡ್ ಎಂದು ಪರಿಗಣಿಸಿದರೆ, ಇಂಡಿಯನ್ ನ್ಯಾಶನಲ್ ಕೆನ್ನಲ್ ಕ್ಲಬ್ ಅವುಗಳನ್ನು ಮುಧೋಳ ನಾಯಿಗಳು ಎಂದು ಕರೆಯುತ್ತದೆ.

ಮರಾಠಾ ದೊರೆ ಛತ್ರಪತಿ ಶಿವಾಜಿಯ ಜತೆಗಿದ್ದ ಈ ನಾಯಿಗಳನ್ನು ಮರಾಠಾ ಹೌಂಡ್ ಎಂದೂ ಕರೆಯಲಾಗುತ್ತದೆ. ಶಿವಾಜಿ ಸಾಕಿದ ಈ ನಾಯಿಗಳನ್ನು ರಾಯಗಢ ಕೋಟೆಯ ಪಕ್ಕದಲ್ಲಿರುವ ಆತನ ಸಮಾಧಿಯ ಹತ್ತಿರದಲ್ಲಿಯೇ ಸಮಾಧಿ ಮಾಡಲಾಗಿತ್ತು.

ಬ್ರಿಟಿಷರ ಕಾಲದಲ್ಲಿ ಯುರೋಪಿಯನ್  ಜಾತಿಯ ನಾಯಿಗಳು ಜನಪ್ರಿಯವಾಗಲಾರಂಭಿಸಿದಾಗ ಮುಧೋಳ ನಾಯಿಗಳು ತೆರೆಮರೆಗೆ ಸರಿಯಬಹುದು ಎಂದಂದುಕೊಳ್ಳುವಾಗಲೇ  ಮುಧೋಳದ ಘೋರ್ಪಡೆ ಅರಸರು ಮುಧೋಳ ನಾಯಿಗಳ ಸಂರಕ್ಷಕರಾದರು. ಮುಧೋಳ ಅರಸ ಶ್ರೀಮಂತ್ ರಾಜಾಸಾಹೇಬ್ ಮಾಲೋಜಿರಾವ್ ಘೋರ್ಪಡೆ ಮುಧೋಳ ಜಾತಿಯ ನಾಯಿಗಳನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗೆ ರಾಜಮನೆತನದ ಬೆಂಬಲ ಪಡೆದ ಮುಧೋಳ ನಾಯಿಗಳನ್ನು ಮುಂದೆ ಇದೇ ಮನೆತನದ ಹಲವರು ಸಾಕಿ ಸಲಹಿದ್ದರು.

ತೀಕ್ಷ್ಣ ದೃಷ್ಟಿ

ಮುಧೋಳ ನಾಯಿಗಳ ದೃಷ್ಟಿ ಬಹಳ ತೀಕ್ಷ್ಣವಾಗಿದ್ದು  ಬೇಟೆಯ ಸಮಯದಲ್ಲಿ ಇವುಗಳು ಅತ್ಯುತ್ತಮ ಸಂಗಾತಿಗಳಾಗಿವೆ. ಅವುಗಳ ದೇಹ ರಚನೆ ಅಷ್ಟೊಂದು  ದಷ್ಟಪುಷ್ಟವಲ್ಲದೇ ಇದ್ದರೂ ಅವುಗಳ ಮಾಂಸಖಂಡಗಳ ಬಹಳಷ್ಟು ಬಲಯುತವಾಗಿವೆ. ಅವುಗಳಿಗೆ ಉದ್ದನೆಯ ಸಪೂರ ಮುಖ,  ಸಪೂರ ಹಾಗು ಜೋತುಬೀಳುವ ಕಿವಿಗಳಿವೆ. ಮುಧೋಳ ನಾಯಿಗಳ ಹಲ್ಲುಗಳು ಕತ್ತರಿಯಂತೆಯೇ ಇವೆ. ಅವುಗಳಿಗೆ ಸಾಕಷ್ಟು ವ್ಯಾಯಾಮ ಹಾಗೂ ಜಾಗದ ಅಗತ್ಯವಿರುವುದರಿಂದ ಅಪಾರ್ಟಮೆಂಟುಗಳಲ್ಲಿರುವವರು ಈ ಜಾತಿಯ ನಾಯಿಗಳನ್ನು ಸಾಕುವುದು ಅಸಾಧ್ಯ.

ಕೆನೈನ್ ರಿಸರ್ಚ್ ಎಂಡ್ ಇನ್ಫಾರ್ಮೇಶನ್ ಸೆಂಟರ್ ಕರುಣಾ ಅನಿಮಲ್ಸ್ ವೆಲ್ಫೇರ್ ಅಸೋಸಿಯೇಶನ್  ಆಫ್ ಕರ್ನಾಟಕ  ಹಾಗೂ ಸೊಸೈಟಿ ಫಾರ್ ಇಂಡಿಂiÀiನ್ ಬ್ರೀಡ್ ಆಫ್ ಡಾಗ್ಸ್  ಕೂಡ ಈ ಜಾತಿಯ ನಾಯಿಗಳ ಜನಪ್ರಿಯತೆಯಲ್ಲಿ ದೊಡ್ಡ ಪಾತ್ರ ವಹಿಸಿವೆ.

2005ರಲ್ಲಿ ಮುಧೋಳ ನಾಯಿಗಳ ಚಿತ್ರವಿರುವ  ಐದು ರೂಪಾಯಿ ಮುಖಬೆಲೆಯ ಅಂಚೆ ಚೀಟಿಯನ್ನೂ ಅಂಚೆ ಇಲಾಖೆ ಹೊರತಂದಿತ್ತು. ಮುಧೋಳದ ತಿಮ್ಮಾಪುರದ ಸಮೀಪವಿರುವ ಕೆನೈನ್ ರಿಸರ್ಚ್ ಇನ್ಫಾರ್ಮೇಶನ್ ಸೆಂಟರ್ ಮುಧೋಳ ನಾಯಿಗಳ ಸಂರಕ್ಷಣೆ ಹಾಗೂ ತಳಿ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ತನ್ನ ಕಾರ್ಯಕ್ರಮದ ಅಂಗವಾಗಿ ಈ ಜಾತಿಯ ನಾಯಿಮರಿಗಳನ್ನು  ಭೂರಹಿತ ಹಾಗೂ ಸಣ್ಣ ರೈತರಿಗೆ ಸಾಕಲು ಈ ಕೇಂದ್ರ ತರಬೇತಿ ನೀಡುತ್ತಿದೆ. ಇಲ್ಲಿಯ ತನಕ 184 ಫಲಾನುಭವಿಗಳು ಈ ಯೋಜನೆಯ ಲಾಭ ಪಡೆದಿದ್ದಾರೆ.

ಕಳೆದ ವರ್ಷ ಆರು ಮುಧೋಳ ನಾಯಿಮರಿಗಳನ್ನು  ಸ್ಫೋಟಕ ಪತ್ತೆ ಮುಂತಾದ ಕಾರ್ಯಗಳಲ್ಲಿ ತರಬೇತಿ ನೀಡಿ ಭಾರತೀಯ ಸೇನೆಗೆ ಸೇರ್ಪಡೆಗೊಳಿಸಿದ್ದು ಮುಧೋಳ ನಾಯಿಗಳ ವೈಶಿಷ್ಟ್ಯ ಹಾಗೂ ಚಾಕಚಕ್ಯತೆಗೆ ಸಾಕ್ಷಿಯಾಗಿದೆ.
-source karvali ale 

loading...

No comments