Breaking News

ಅಂಬ್ಯುಲೆನ್ಸ್ ಇಲ್ಲದ ಕಾರಣ ಮೋಪೆಡ್ ನಲ್ಲಿ ಪುತ್ರಿಯ ಶವ ಸಾಗಿಸಿದ ತಂದೆ.

ತುಮಕೂರು : ಒಡಿಸ್ಸಾದಲ್ಲಿ ವ್ಯಕ್ತಿ ಹಣವಿಲ್ಲದೆ ಪತ್ನಿಯ ಶವವನ್ನು ಹೆಗಲ ಮೇಲೆ ಹೊತ್ತು ಸಾಗಿಸಿದ್ದು ದೇಶ ವಿದೇಶಗಳಲ್ಲಿ ಸುದ್ದಿಯಾಗಿತ್ತು. ಅಂತದ್ದೇ ಪ್ರಕರಣವೊಂದು ನಮ್ಮದೇ ರಾಜ್ಯದ ತುಮಕೂರಿನಲ್ಲಿ ನಡೆದಿದೆ. ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದ ಬಾಲಕಿಯೋರ್ವಳ ಮೃತದೇಹವನ್ನು ಬಡ ಕೂಲಿ ಕಾರ್ಮಿಕ ತಂದೆ ಅಂಬ್ಯುಲೆನ್ಸ್ ಇಲ್ಲದ ಕಾರಣ ತನ್ನ ಮೋಪೆಡ್ ನಲ್ಲಿ ಮನೆಗೆ ಕೊಂಡು ಹೋದ ಹೃದಯ ವಿದ್ರಾವಕ ಘಟನೆ ನಡೆದಿದೆ.
ತುಮಕೂರಿನ ವೀರಪುರ ಗ್ರಾಮ ನಿವಾಸಿ ತಿಮ್ಮಪ್ಪ ಎಂಬ ವ್ಯಕ್ತಿ ತನ್ನ ಮಗಳು 20 ವರ್ಷದ ರತ್ನಮ್ಮ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಳು. ಈ ಸಂಬಂಧ ಅವಳನ್ನು ಮಧುಗಿರಿ ತಾಲ್ಲೂಕಿನ ಕೊಡುಗೇನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆ ತರಲಾಗಿದೆ. ಆದರೆ ಅಲ್ಲಿ ವೈದ್ಯರೂ ಸಹ ಇಲ್ಲದ ಕಾರಣ ಆಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.
ಆದರೆ ಯುವತಿಯ ಮೃತದೇಹ ಸಾಗಿಸಲು ಸರ್ಕಾರಿ​ ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಆಂಬುಲೆನ್ಸ್ ಇರಲಿಲ್ಲ, ಖಾಸಗೀ ವಾಹನಕ್ಕೆ ದುಡ್ಡು ನೀಡುವಷ್ಟು ಹಣ ಹೊಂದಿಸಲಾಗದೆ ಕೊನೆಗೆ ಬಡ ಕೂಲಿ ಕಾರ್ಮಿಕ ತನ್ನ ಮಗಳ ಮೃತದೇಹವನ್ನು ಸ್ಥಳೀಯರೊಬ್ಬರ ಸಹಾಯ ಪಡೆದು ಟಿವಿಎಸ್ ಮೊಪೆಡ್ ನಲ್ಲಿ ತನ್ನ ಗ್ರಾಮ ವೀರಪುರಕ್ಕೆ ಸಾಗಿಸಿದ್ದಾನೆ.
ಆದರೆ ಇಬ್ಬರು ಪ್ರಭಾವಿ ಸಚಿವರ ತವರು ಜಿಲ್ಲೆ,  ತಮ್ಮನ್ನು ತಾವು ದಕ್ಷ, ಅಭಿವೃದ್ಧಿ ಪರ ಶಾಸಕ ಎಂದು ಕರೆಯುವ ಕೆ. ಎನ್ ರಾಜಣ್ಣ ಅವರ ಕ್ಷೇತ್ರದಲ್ಲಿಯೇ ಈ ಘಟನೆ ನಡೆದಿರುವುದು ನಮ್ಮ ರಾಜಕಾರಣಿಗಳ ಅಭಿವೃದ್ಧಿಯ ನೈಜ ಮುಖ ಅನಾವರಣ ಮಾಡುತ್ತದೆ.
loading...

No comments