ನಿಧಿಗಾಗಿ ಅಗೆದ ಅಂತರ್ರಾಜ್ಯ ದರೋಡೆಕೋರರ ಬಂಧನ
ವಿಟ್ಲ : ಕರೋಪಾಡಿ ಗ್ರಾಮದಲ್ಲಿ ನಡೆದಿದ್ದ ಮನೆಯವರ ಕಟ್ಟಿಹಾಕಿ ನಿಧಿಗಾಗಿ ಅಗೆತ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರ ವಿಶೇಷ ತಂಡ ಯಶಸ್ವಿಯಾಗಿದ್ದು ಈ ಸಂಬಂಧ ಅಂತರ್ರಾಜ್ಯ ದರೋಡೆ ತಂಡದ ಐವರನ್ನು ಬಂಧಿಸಿ ಎರಡು ಕಾರುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಕರೋಪಾಡಿ ಗ್ರಾಮದ ಅರಸಳಿಕೆಯ ಕೃಷಿಕ ವಿಘ್ನರಾಜ ಭಟ್ಟರ ಮನೆಗೆ ಕಳೆದ ತಿಂಗಳ 24ರ ಮುಂಜಾನೆ ಎರಡು ಕಾರುಗಳಲ್ಲಿ ಮಾರಕಾಸ್ತ್ರಗಳ ಜೊತೆ ತಂಡವೊಂದು ದಾಳಿ ನಡೆಸಿತ್ತು. ಮನೆಯಲ್ಲಿದ್ದ ವಿಘ್ನರಾಜ ಭಟ್ ಮತ್ತು ಅಳಿಯ ವಿಖ್ಯಾತನನ್ನು ಕಟ್ಟಿ ಹಾಕಿದ ತಂಡ ಸೀಸಿಟೀವಿ, ಡಿವಿಆರ್ ಮತ್ತು ಮೊಬೈಲ್ ಸಿಮ್ ಕಸಿದು ಮುಂಜಾನೆ 4.30ರ ತನಕ ನಿಧಿಗಾಗಿ ಶೋಧ ನಡೆಸಿ ಪರಾರಿಯಾಗಿತ್ತು. ಘಟನಾ ಸ್ಥಳಕ್ಕೆ ಆಗಮಿಸಿದ್ದ ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ಹಿರಿಯ ಅಧಿಕಾರಿಗಳು ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ್ದಲ್ಲದೇ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿದ್ದರು. ಸುಮಾರು ಹತ್ತು ದಿನಗಳ ಕಾಲ ಮಾಹಿತಿ ಕಲೆ ಹಾಕಿದ ಪೊಲೀಸರ ವಿಶೇಷ ತಂಡಗಳು ಪ್ರಕರಣದಲ್ಲಿ ಶಾಮೀಲಾದ 12 ಖದೀಮರ ಪೈಕಿ 5 ಜನ ಅಂತರ್ರಾಜ್ಯ ದರೋಡೆಕೋರರನ್ನು ಬಂಧಿಸಿ ಎರಡು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಾದ ಕನ್ಯಾನ ಗ್ರಾಮದ ಪೊಯ್ಯಗದ್ದೆ ಇಬ್ರಾಹಿಂನ ಪುತ್ರ ಇಕ್ಕು ಯಾನೆ ಇಕ್ಬಾಲ್ (22), ಕರೋಪಾಡಿ ಗ್ರಾಮದ ಕೋಡ್ಲ ಮೊಯ್ದು ಕುಟ್ಟಿ ಹಾಜಿಯ ಪುತ್ರ ಮಹಮ್ಮದ್ ಆಲಿ ಯಾನೆ ಅಲಿ ಮೋನು (29), ಮೂಲತಃ ಕನ್ಯಾನ ಮಂಡ್ಯೂರು ನಿವಾಸಿಯಾಗಿದ್ದು ಇದೀಗ ಬಾಕ್ರಬೈಲು ಸಮೀಪದ ಪಾತೂರು ಬದಿಮಾರು ನಿವಾಸಿ ಕುಂಞಮೋನು ಪುತ್ರ ಅಬ್ಬಾಸ್ (26), ಕೊಳ್ನಾಡು ಗ್ರಾಮದ ಕುಳಾಲು ಕೋಡಿ ನಿವಾಸಿ ಕಾಯರಡ್ಕ ಮಸೀದಿ ಅಧ್ಯಕ್ಷನಾಗಿರುವ ಬಿಜೆಪಿ ಇಬ್ರಾಹಿಂನ ಪುತ್ರ ಎಲ್‍ಟಿಟಿ ಅಶ್ರಫ್ (21) ಮತ್ತು ಪೈವಳಿಕೆ ಬಾಯಿಕಟ್ಟೆ ನಿವಾಸಿ ಹಕೀಂ ಪುತ್ರ ಆಶಿಕ್ ಪಿ (19) ಬಂಧಿತರು. ತಲೆಮರೆಸಿಕೊಂಡ ಶಾಫಿ ಕೆ ಯಾನೆ ಖಲಂದರ್ ಶಾಫಿ ಯಾನೆ ಎಂ ಎಲ್ ಎ ಶಾಫಿ, ಚೋಟು ಶಾಫಿ, ಮಿತ್ತನಡ್ಕ ಆರಿಸ್ ಹಾಗೂ ಇತರ ನಾಲ್ವರಿಗಾಗಿ ಪೊಲೀಸರ ಶೋಧ ಮುಂದುವರಿದಿದೆ.
ಖದೀಮರ ಜಾತಕ
ಬಂಧಿತ ಆರೋಪಿಗಳ ಪೈಕಿ ಪೊಯ್ಯಗದ್ದೆ ಇಕ್ಕು ಯಾನೆ ಇಕ್ಬಾಲ್ 2015ರಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿದ ಪ್ರಕರಣ, ಕನ್ಯಾನದಲ್ಲಿ ಈ ಹಿಂದೆ ನಡೆದಿದ್ದ ಆಸಿಫ್ ಯಾನೆ ಬಾಯಿಕಟ್ಟೆ ಆಸಿಫ್ ಕೊಲೆ ಪ್ರಕರಣ ಮತ್ತು 2015ರಲ್ಲಿ ಜಿಲ್ಲಾ ಕಾರಾಗೃಹದಲ್ಲಿ ನಡೆದಿದ್ದ ಗಣೇಶ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಮತ್ತೋರ್ವ ಆರೋಪಿ ಕೋಡ್ಲ ಅಲಿ ಯಾನೆ ಮಹಮ್ಮದ್ ಆಲಿ 2014ರಲ್ಲಿ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಹಲ್ಲೆ ಪ್ರಕರಣ, ಪುತ್ತೂರು ಸಂಪ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಿಡ್ನಾಪ್ ಪ್ರಕರಣ, 2015ರಲ್ಲಿ ಕನ್ಯಾನದಲ್ಲಿ ನಡೆದಿದ್ದ ಆಸಿಫ್ ಕೊಲೆ ಪ್ರಕರಣ ಮತ್ತು ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಯತ್ನ ಪ್ರಕರಣಗಳಲ್ಲಿ ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ತಂಡಕ್ಕೆ ಜಿಲ್ಲಾ ಎಸ್ಪಿಯವರು ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನ ಘೋಷಿಸಿದ್ದಾರೆ.
via karavali ale
loading...
No comments