Breaking News

ಸುರತ್ಕಲ್ಲಲ್ಲಿ ಸದ್ಯವೇ ಆರ್ ಟಿ ಒ ಕಚೇರಿ ಕಾರ್ಯಾರಂಭ



ಮಂಗಳೂರು : ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಘೋಷಣೆ ಮಾಡಿದ ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಸುರತ್ಕಲ್ ಪ್ರದೇಶದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ (ರೀಜನಲ್ ಟ್ರಾನ್ಸ್‍ಪೋರ್ಟ್ ಆಫೀಸ್-ಆರ್‍ಟಿಒ) ಕಾರ್ಯಾರಂಭಿಸಲಿದೆ. ಈ ಮೂಲಕ ಸುರತ್ಕಲ್ ವ್ಯಾಪ್ತಿಯ ಜನರ ಬಹುದಿನಗಳ ಬೇಡಿಕೆ ಈಡೇರುತ್ತಿದೆ. ಸುರತ್ಕಲ್ ನೀಲಗಿರಿ ಸೂಪರ್ ಮಾರ್ಕೆಟ್ ಪಕ್ಕದಲ್ಲೇ ಆರ್‍ಟಿಒ ಕಚೇರಿಯನ್ನು ಕಾರ್ಯಾರಂಭಿಸುವ ಬಗ್ಗೆ ಶಿವಮೊಗ್ಗ ಸಾರಿಗೆ ಇಲಾಖೆಯ ಜಂಟಿ ಆಯುಕ್ತ ಶಿವರಾಜ್ ಬಿ ಪಾಟೀಲ್ ಗುರುವಾರದಂದು ಸಮೀಕ್ಷೆ ನಡೆಸಿದ್ದಾರೆ.

ತರೀಕೆರೆ, ಮಧುಗಿರಿ, ರಾಮನಗರ, ದಾಂಡೇಲಿ, ಹುಬ್ಬಳ್ಳಿ ಮತ್ತು ದೇವನಹಳ್ಳಿಗೆ ಮಂಜೂರಾಗಿರುವ ಆರು ಆರ್‍ಟಿಒಗಳು ಈಗಾಗಲೇ ಕಾರ್ಯಾರಂಭಿಸಿವೆ. ಆದರೆ ಹಲವು ತಾಂತ್ರಿಕ ಮತ್ತು ಆಡಳಿತಾತ್ಮಕ ಕಾರಣಗಳಿಂದಾಗಿ ಸುರತ್ಕಲ್ ಆರ್‍ಟಿಒ ಕಚೇರಿ ಇನ್ನೂ ಕಾರ್ಯಾರಂಭಿಸಿಲ್ಲ. ಈ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಒತ್ತಡ ಹಾಕಿ ಸುರತ್ಕಲ್ ಕಚೇರಿಯ ಕೆಲಸವನ್ನೂ ಪೂರ್ಣಗೊಳಿಸಲಾಗಿದ್ದು, ಮುಂದಿನ 20 ದಿನಗಳೊಳಗೆ ಇದರ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಗೊತ್ತಾಗಿದೆ.

ಮಂಗಳೂರು ಆರ್‍ಟಿಒ ಕಚೇರಿ ಕೂಡಾ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಲಿದೆ. ಜೊತೆಗೆ ಈಗ ಇರುವ ಶೇ 30 ಮಂದಿ ಸಿಬ್ಬಂದಿಗಳಿಂದಲೇ ಈ ಕಚೇರಿಯನ್ನು ಪ್ರಾರಂಭಿಸಲಾಗುವುದು. ಸುರತ್ಕಲ್ ನೂತನ ಆರ್‍ಟಿಒ ಕಾರ್ಯ ಅಂತಿಮ ಹಂತದಲ್ಲಿದ್ದು, ಸರಕಾರ ಶೀಘ್ರ ಅನುಮೋದನೆ ನೀಡಲಿದೆ ಎಂದು ಶಿವರಾಜ್ ಪಾಟೀಲ್ ಹೇಳಿದ್ದಾರೆ.

loading...

No comments