ಮರು ಮದುವೆಯ ಆಸೆಯಿಂದ ಮಾಟ ಮಂತ್ರದ ಮೊರೆ ಹೋಗಿ ಸುಟ್ಟು ಕರಕಲಾದಳು.
ಕಾಸರಗೋಡು : ಎರಡನೇ ಮದುವೆಯಾಗುವ ಇಚ್ಛೆಯಿಂದ ವಿಚ್ಛೇದಿತ ಮಹಿಳೆಯೊಬ್ಬರು ಮಾಟಮಂತ್ರಕ್ಕೆ ಮೊರೆಹೋಗಿ ಸುಟ್ಟು ಕರಕಲಾದ ಘಟನೆ ಕಾಸರಗೋಡಿನ ಪುರಮೇರಿಗೆ ಎಂಬಲ್ಲಿ ನಡೆದಿದೆ.ಪುತ್ತಿಯ ಕಡವು ಗ್ರಾಮದ ಶಮೀನ(29) ಎಂಬಾಕೆಯೇ ಮಾಟಮಂತ್ರಕ್ಕೆ ಬಲಿಯಾದ ಮಹಿಳೆ.ಗಂಭೀರವಾಗಿ ಸುಟ್ಟ ಗಾಯಗೊಂಡಿದ್ದ ಶಮೀನಾಳನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಕೊನೆಯುಸಿರೆಳೆದಳು.
ಮೊದಲ ಗಂಡನಿಂದ ವಿಚ್ಚೇದನ ಪಡೆದಿದ್ದ ಶಮೀನ ಮತ್ತೆ ವಿವಾಹವಾಗುವ ಉದ್ದೇಶದಿಂದ ತನಗೆ ಮದುವೆ ಪ್ರಸ್ತಾಪಗಳು ಬರುವಂತೆ ಮಾಡಲು ಕುಟ್ಟಿಯಾಡಿಯ ಕೂವೊತ್ತಪೊಯಿಲ್ ಎಂಬಲ್ಲಿನ ಮಾಟಗಾತಿ ನಜ್ಮಾ (35) ಅವಳನ್ನು ಪುರಮೇರಿ ಎಂಬಲ್ಲಿ ಸಂಪರ್ಕಿಸಿದ್ದಳು. ಹೀಗೆ ನಜ್ಮಾ ಮಾಟಮಂತ್ರ ನಡೆಸುತ್ತಿದ್ದಾಗ ಸೀಮೆ ಎಣ್ಣೆ ಬದಲು ಪೆಟ್ರೋಲ್ ಉಪಯೋಗಿಸಿದ್ದರಿಂದ ಬೆಂಕಿ ಕೋಣೆ ಸುತ್ತ ವ್ಯಾಪಿಸಿ ಶಮೀನಾ ಸುಟ್ಟಗಾಯಗಳಿಗೊಳಗಾಗಿದ್ದಳು. ಆ ಕೊಠಡಿಯಿಂದ ಸುಟ್ಟು ಕರಕಲಾದ ಕುರ್ಚಿ ಮತ್ತಿತರ ಪೀಠೋಪಕರಣಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಘಟನೆ ನಡೆದ ಕೂಡಲೇ ನಜ್ಮಾ ಕೋಣೆಯನ್ನು ಶುಚಿಗೊಳಿಸಿ, ಗೋಡೆಗಳಿಗೆ ಬಣ್ಣ ಬಳಿದಿದ್ದಳಲ್ಲದೆ, ಶಮೀನಾಳ ಸುಟ್ಟ ಬಟ್ಟೆಗಳನ್ನೂ ಹೂತಿದ್ದಳು.ಪೊಲೀಸರು ಆಕೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆಕೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕೊಲೆ ಹಾಗೂ ಸಾಕ್ಷ್ಯ ನಾಶಪಡಿಸಿದ ಆರೋಪ ಆಕೆಯ ಮೇಲಿದೆ. ಸ್ಥಳೀಯರ ಪ್ರಕಾರ ನಾಲ್ಕು ವರ್ಷಗಳ ಹಿಂದೆ ತನ್ನ ಹುಟ್ಟೂರು ಕುಟ್ಟಿಯಾಡಿಯಲ್ಲಿ ಮಾಟಮಂತ್ರ ಆರಂಭಿಸಿದ್ದ ನಜ್ಮಾ ಜನರ ವಿರೋಧಕ್ಕೆ ಹೆದರಿ ಪುರಮೇರಿಗೆ ಸ್ಥಳಾಂತರಗೊಂಡಿದ್ದಳು.
K ale
loading...
No comments