ಜಮಾ ನಮಾಝ್ ವಿವಾದ : ಒಬ್ಬಗೆ 20 ವರ್ಷ ಕಠಿಣ ಸಜೆ, 8 ಮಂದಿ ಖುಲಾಸೆ
ಮಂಗಳೂರು : ಉಳ್ಳಾಲದ ದರ್ಗಾ ಸಮೀಪದ ಮಸೀದಿ ಮತ್ತು ಉಳ್ಳಾಲ ಮೇಲಂಗಡಿ ಹೊಸಪಳ್ಳಿಯ ಜುಮಾ ನಮಾಝ್ ವಿಚಾರದಲ್ಲಿ ಉಂಟಾಗಿದ್ದ ಹಲ್ಲೆ, ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ಅಪರಾದಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಇಲ್ಲಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಎರಡು ಪ್ರಕರಣಗಳಲ್ಲಿ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಇತರ 8 ಮಂದಿ ವಿರುದ್ಧ ಪ್ರಬಲ ಸಾಕ್ಷಿಗಳು ಇಲ್ಲ ಕಾರಣ ಅವರನ್ನು ಖುಲಾಸೆಗೊಳಿಸಲಾಗಿದೆ.
ಉಳ್ಳಾಲ ಆಝಾದ್ ನಗರದ ಇಮ್ತಿಯಾಝ್ (31) ಶಿಕ್ಷೆಗೊಳಗಾದ ಅಪರಾಧಿಯಾಗಿದ್ದಾನೆ.
ಪ್ರಾರ್ಥನೆ ಮಾಡುವ ವಿಚಾರದಲ್ಲಿ ಒಂದು ಗುಂಪು ಉಳ್ಳಾಲ ಮೇಲಂಗಡಿಯ ಹೊಸಪಳ್ಳಿಯಲ್ಲಿ ಪ್ರಾರ್ಥನೆ ನಡೆಸಲು ನಿರ್ಧರಿಸಿತ್ತು. ಅದರಂತೆ ಮಂಗಳೂರು ಖಾಝಿ ನೇತೃತ್ವದಲ್ಲಿ ಒಂದು ತಂಡ 2013ರ ಅ 18ರಂದು ಮಧ್ಯಾಹ್ನ 12.30ಕ್ಕೆ ಮೊದಲ ಬಾರಿಗೆ ಪ್ರಾರ್ಥನೆ ಮಾಡಿತ್ತು.
ಆದರೆ ಇದನ್ನು ವಿರೋದಿಸಿದ ಇಮ್ತಿಯಾಝ್ ಮತ್ತು ಇತರ 8 ಮಂದಿಯ ತಂಡ ಮೇಲಂಗಡಿಯ ಹೊಸಪಳ್ಳಿ ಮಸೀದಿ ಒಳಗೆ ಅಕ್ರಮ ಪ್ರವೇಶ ಮಾಡಿ ಸವಾದ್ ಮತ್ತು ಸಂಶುದ್ಧೀನ್ ಅವರಿಗೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿತ್ತು. ಈ ಸಂದರ್ಭ ಸಂಶುದ್ಧೀನ್ ಮತ್ತು ಸವಾದನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಬಗ್ಗೆ ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ಈ ಬಗ್ಗೆ ಸೋಮವಾರ ಆರೋಪಿಗಳ ವಿಚಾರಣೆ ನಡೆದು ನ್ಯಾಯಾಧೀಶರು ಗಾಯಾಳುಗಳು ಮತ್ತು 8 ಮಂದಿ ಪ್ರತ್ಯಕ್ಷ ಸಾಕ್ಷಿಗಳ ವಿಚಾರಣೆ ನಡೆಸಿದರು. ಗಾಯಾಳುಗಳಿಗೆ ಚಿಕಿತ್ಸೆ ನೀಡಿದ ಡಾ ಮಹಾಬಲ ಶೆಟ್ಟಿ ಮತ್ತು ವಿಧಿವಿಜ್ಞಾನ ವಿಭಾಗದ ತಜ್ಞರಾದ ಡಾ ಗೀತಾಲಕ್ಷ್ಮೀ ಅವರೂ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದರು.
ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಆರೋಪಿ ಇಮ್ತಿಯಾಝನಿಗೆ 10 ವರ್ಷಗಳ ಕಠಿಣ ಸಜೆ ಮತ್ತು 5 ಸಾವಿರ ರೂ ದಂಡ ಹಾಗೂ ಕೊಲೆ ಯತ್ನ ಪ್ರಕರಣಕ್ಕೆ 10 ವರ್ಷ ಕಠಿಣ ಸಜೆ, 5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ದಂಡದ ಮೊತ್ತದಲ್ಲಿ ಇಬ್ಬರಿಗೆ ತಲಾ 5 ಸಾವಿರ ರೂ ಪರಿಹಾರವಾಗಿ ನೀಡಲು ಆದೇಶಿಸಲಾಗಿದೆ. ಇಬ್ಬರು ಗಾಯಾಳುಗಳು ದ ಕ ಜಿಲ್ಲಾ ಕಾನೂನು ನೆರವು ಪ್ರಾಧಿಕಾರದಿಂದ ಹೆಚ್ಚುವರಿ ಪರಿಹಾರವನ್ನು ಪಡೆಯಲು ಅರ್ಹರಾಗಿದ್ದಾರೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
-kale
loading...
No comments