Breaking News

ಉಡುಪಿ ಕೃಷ್ಣ ತಿರುಗಿದ್ದು ಸುಳ್ಳು, ಜನರಿಗೆ ತಲೆ ತಿರುಗಿದೆಯಷ್ಟೇ


ಅದಮಾರು ಶ್ರೀ ವಿವಾದಿತ ಹೇಳಿಕೆ

ಪಡುಬಿದ್ರಿ : “ಯಾರದ್ದೋ ಭಕ್ತಿಗೆ ಉಡುಪಿಯ ಕೃಷ್ಣ ತಿರುಗಿದ್ದಾನೆ ಎಂಬುದು ಕಟ್ಟುಕತೆಯಷ್ಟೇ, ಕೃಷ್ಣ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದೇ ಪಶ್ಚಿಮಾಭಿಮುಖವಾಗಿ” ಎನ್ನುವ ಮೂಲಕ ಕನಕನ ಕತೆಯೇ ಕಟ್ಟುಕತೆ ಎನ್ನುವಂತೆ ಮಾತನಾಡಿದ ಅದಮಾರು ವಿಶ್ವಪ್ರಿಯ ಶ್ರೀ ಮಾತಿನಿಂದ ಸಭೆಯಲ್ಲಿ ಸೇರಿದ ಬಹಳಷ್ಟು ಮಂದಿ ಬೇಸರ ವ್ಯಕ್ತಪಡಿಸಿದ್ದಾರೆ.

ಕಾಪುವಿನ ಉಳಿಯಾರು ಭಜನಾ ಮಂದಿರವೊಂದರ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅದಮಾರು ವಿಶ್ವಪ್ರಿಯ ಸ್ವಾಮಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೃಷ್ಣ ಮೂರ್ತಿಯನ್ನು

ಪಶ್ಚಿಮಾಭಿಮುಖವಾಗಿ ಪ್ರತಿಷ್ಠಾಪನೆ ಮಾಡಿದ್ದಾರೆ ಎಂಬುದಕ್ಕೆ ದಾಖಲೆಗಳಿದೆ ಎಂದಿದ್ದಾರೆ.

“ಒಂದೆಡೆ ಹಿಂದೂ ಸಮಾಜವನ್ನು ಗಟ್ಟಿಗೊಳಿಸಬೇಕೆಂಬ ಕೂಗು ಕೇಳಿ ಬರುತ್ತಿದ್ದರೆ, ಮತ್ತೊಂದೆಡೆ ಆ ಕೆಲಸ ಮಾಡಬೇಕಾದ ಧಾರ್ಮಿಕ ನಾಯಕರುಗಳೇ ಹಿಂದೂ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿರುವುದು ವಿಷಾಧನೀಯ” ಎಂಬುದು ಇವರ ಈ ಹೇಳಿಕೆಯಿಂದ ನೋವು ಅನುಭವಿಸಿದ ಜನರ ಮಾತು.

“ಅದೇ ಮೇಲ್ವರ್ಗದ ಮಂದಿಯ ಭಕ್ತಿಗೆ ಮೆಚ್ಚಿದ ಕೃಷ್ಣ ತಿರುಗಿದ್ದಾನೆ ಎಂಬುದಾಗಿದ್ದರೆ ಅದನ್ನು ಮತ್ತಷ್ಟು ಗಟ್ಟಿಗೊಳಿಸಲು ಇಂಥ ಧಾರ್ಮಿಕ ನಾಯಕರು ಯತ್ನಿಸುತ್ತಿದ್ದರು. ಆದರೆ ಇಲ್ಲಿ ಕೆಳವರ್ಗದ ವ್ಯಕ್ತಿಯ ಭಕ್ತಿಗೆ ಒಲಿದ ಕೃಷ್ಣ ತಿರುಗಿದ್ದಾನೆ ಎಂಬುದಾಗಿದ್ದರಿಂದ ಈ ಮಂದಿ ಈ ರೀತಿಯಾಗಿ ಸತ್ಯವನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ, ಪಶ್ಚಿಮಾಭಿಮುಖವಾಗಿ ಪ್ರತಿಷ್ಠೆ ಮಾಡಲಾಗಿದೆ ಎಂಬ ದಾಖಲೆ ಇದೀಗ ಹೇಗೆ ಸೃಷ್ಟಿಯಾಗಿದೆ, ಈವರಗೆ ಈ ದಾಖಲೆ ಎಲ್ಲಿ ಅಡಗಿತ್ತು. ಯಾದವ ಕುಲದ ಕೃಷ್ಣನಿಗೆ ಮೇಲ್ಜಾತಿಯವರು ಪೂಜೆ ಮಾಡುವುದು ಸರಿಯಲ್ಲ ಎಂಬುದನ್ನು ಈ ಧಾರ್ಮಿಕ ನಾಯಕರುಗಳು ಯಾಕೆ ಹೇಳುವುದಿಲ್ಲ. ಹಿಂದಿನಿಂದಲೂ ತುಳಿತಕ್ಕೂಳಗಾದ ಮಂದಿಯನ್ನು ಮತ್ತಷ್ಟು ಪ್ರಪಾತಕ್ಕೆ ತಳ್ಳುವ ಹುನ್ನಾರವೇ ಇದು. ಸಾಧ್ಯವಾದರೆ ಹಿಂದೂ ಸಮಾಜವನ್ನು ಒಂದಾಗಿಸಲು ಯತ್ನಿಸಲಿ ಅದು ಬಿಟ್ಟು ಪುಕ್ಕಟೆ ಪ್ರಚಾರಕ್ಕಾಗಿ ಭಕ್ತರ ಮನಸ್ಸನ್ನು ಗಾಸಿಗೊಳಿಸುವ ಇಂಥ ಹೇಳಿಕೆಯನ್ನು ನೀಡುವುದು ನಿಲ್ಲಿಸಲಿ” ಎಂದಿದ್ದಾರೆ ಶ್ರೀಗಳ ಹೇಳಿಕೆಯಿಂದ ನೊಂದ ಮಂದಿ.

ಇದೇ ಸಂದರ್ಭ ಅತಿಥಿಯಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರೊಬ್ಬರು ತನ್ನ ಭಾಷಣದಲ್ಲಿ, ಸ್ವಾಮಿ ಹೇಳಿಕೆಯಿಂದ ನೋವುಂಡೋ ಏನೋ… “ಸ್ವಾಮಿಗಳ ಕಾಲಿಗೆ ಅಡ್ಡ ಬೀಳುವುದು ಸರಿಯಲ್ಲ” ಎನ್ನುವ ಮೂಲಕ ಏಟಿಗೆ ಎದುರೇಟು ನೀಡಿದ್ದಾರೆ.
K ALE

loading...

No comments