Breaking News

ಸೊರಕೆ ಹೇಳಿದಂತೆ ಶಿರ್ವ ಮಿನಿ ದುಬಾಯಿ ಅಲ್ಲ, ದೊಡ್ಡ ನರಕ ಮೀನುಗಾರ ಮಹಿಳೆಯರ ಆಕ್ರೋಶ



ಪಡುಬಿದ್ರಿ : “ಕಾಪು ಶಾಸಕ ವಿನಯಕುಮಾರ್ ಸೊರಕೆ ಸಾರ್ವಜನಿಕವಾಗಿ ಶಿರ್ವದಲ್ಲಿ ಹೇಳಿದಂತೆ ಈ ಶಿರ್ವ ಮಿನಿ ದುಬಾಯಿ ಅಲ್ಲ, ಇದು ದೊಡ್ಡ ನರಕ. ಇಲ್ಲಿ ಕಳೆದ ಸುಮಾರು ಹತ್ತು ತಿಂಗಳ ಹಿಂದೆಯಷ್ಟೇ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸೂಚನೆಯಂತೆ 82 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿತಿ ಕೇಂದ್ರ ನಿರ್ಮಿಸಿ, ಕಾಪು ಶಾಸಕರೇ ಉದ್ಘಾಟನೆಗೊಳಿಸಿರುವ ಮಾರುಕಟ್ಟೆ ಕಳಪೆ ಕಾಮಗಾರಿಗಳ ಕೂಪವಾಗಿದ್ದು, ಇಲ್ಲಿನ ಸಮಸ್ಯೆಗಳ ಬಗ್ಗೆ ಸ್ವತಃ ಶಾಸಕರು ಸಹಿತ ಸ್ಥಳೀಯಾಡಳಿತವೂ ಸ್ಪಂದಿಸುತ್ತಿಲ್ಲ” ಎಂಬುದಾಗಿ ಈ ಮೀನು ಮಾರುಕಟ್ಟೆಯ ಮೀನುಮಾರಾಟ ನಡೆಸುತ್ತಿರುವ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಮೆಗತಿಯಲ್ಲಿ ಸಾಗುತ್ತಿದ್ದ ಈ ಸುಸಜ್ಜಿತ ಎನ್ನಲಾದ ಶಿರ್ವ ಮೀನುಮಾರುಕಟ್ಟೆಯ ಕಾಮಗಾರಿ ಕೊನೆಗಳಿಗೆಯಲ್ಲಿ

ಬೇಕಾಬಿಟ್ಟಿಯಾಗಿ ಹಗಲು ರಾತ್ರಿ ಎನ್ನದೆ ಮಾಡಲಾಗಿದ್ದು, ತೀರ ಕಳಪೆ ಕಾಮಗಾರಿಯೊಂದಿಗೆ ಅಂತಿಮ ಸ್ಪರ್ಶ ನೀಡಲಾಗಿತ್ತು. ಈ ಕಟ್ಟಡದ ತ್ಯಾಜ್ಯ ನೀರಿನ ಶೇಕರಣೆಗಾಗಿ ಹೊಸತಾಗಿ ಗುಂಡಿ ತೊಡಬೇಕಾಗಿದ್ದರೂ ಅದನ್ನು ಮಾಡದ ಗುತ್ತಿಗೆದಾರ ಹಳೆಯ ಗುಂಡಿಯೊಂದಕ್ಕೆ ಈ ಕಟ್ಟಡದ ಶೌಚಾಲಯ ಸಹಿತ ಎಲ್ಲಾ ತ್ಯಾಜ್ಯ ನೀರುಗಳ ಪೈಪುಗಳ ಜೋಡನೆಮಾಡಿ, ಆ ಗುಂಡಿಯ ಮೇಲೆ ಮರದ ತುಂಡುಗಳನ್ನು ಇಟ್ಟು ಅದರ ಮೇಲೆ ಮರಳು ಹರಡಿ ಅದಕ್ಕೆ ಇಂಟರಲಾಕ್ ಅಳವಡಿಸಿ ಮುಚ್ಚಿ ಉದ್ಘಾಟನೆಗೆ ಸಜ್ಜುಗೊಳಿಸಲಾಗಿತ್ತು.

ನಾಲ್ಕು ತಿಂಗಳ ಹಿಂದೆ ಮೀನಿನ ಟೆಂಪೋವೊಂದು ಈ ಭಾಗದಲ್ಲಿ ಸಂಚರಿಸುವಾಗ ಗುಂಡಿಯ ಮೇಲೆ ಇರಿಸಲಾಗಿದ್ದ ಮರದ ಪೀಸ್ ತುಂಡಾಗಿ ಟೆಂಪೋ ಅದರಲ್ಲಿ ಸಿಲುಕಿಕೊಂಡಿದೆ. ಈ ಸಂದರ್ಭ ಜಿಲ್ಲಾಧಿಕಾರಿಯೇ ಅಧ್ಯಕ್ಷರಾಗಿರುವ ಉಡುಪಿ ನಿರ್ಮಿತಿ ಕೇಂದ್ರದ ನಿಜ ಬಣ್ಣ ಬಯಲಾಗಿದೆ. ಇದೀಗ ಈ ಗುಂಡಿ ಕುಸಿದು ತಿಂಗಳು ನಾಲ್ಕಾದರೂ ಇದನ್ನು ಮುಚ್ಚದ ಪರಿಣಾಮ ದುರ್ನಾತ ಒಂದು ಕಡೆಯಾದರೆ, ಸಾರ್ವಜನಿಕರಿಗೆ ಪ್ರಾಣ ಭೀತಿ ಮತ್ತೊಂದು ಕಡೆಯಾಗಿದೆ.

ಈ ಗುಂಡಿಯ ಬಗ್ಗೆ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಾರಿಜಾ ಪೂಜಾರ್ತಿ, “ನನ್ನ ಅವಧಿಯಲ್ಲಿ ಆಗಿರುವ ಕಾಮಗಾರಿ ಇದಲ್ಲ, ಆದರೆ ಅಭಿವೃದ್ಧಿಯ ದೃಷ್ಟಿಯಲ್ಲಿ ಯಾವುದೇ ರಾಜಕೀಯ ಮಾಡುವ ಉದ್ದೇಶ ನನ್ನದಲ್ಲವಾಗಿದ್ದರಿಂದ ಮೀನು ಮಾರುಕಟ್ಟೆಯ ರೂವಾರಿಗಳಾದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗೆ ಫೋನ್ ಮಾಲಕ ತಿಳಿಸಿದಾಗ, ಆ ಶೌಚಾಲಯದ ಗುಂಡಿಗೂ ನಮ್ಮ ಕಾಮಗಾರಿಗೂ ಯಾವುದೇ ಸಂಬಂಧವಿಲ್ಲ, ನಾವು ನಿರ್ಮಿಸಿದ ಕಟ್ಟಡಕ್ಕೆ ಬೇರೆಯೇ ಗುಂಡಿ ರಚಿಸಲಾಗಿದೆ ಎಂಬುದಾಗಿ ಮಾಡಿದ ತಪ್ಪುನ್ನು ಸಮರ್ಥಿಸುತ್ತಿದ್ದಾರೆಯೇ ವಿನಃ ಸ್ಥಳಕ್ಕೆ ಬಂದು ಪರಿಶೀಲಿಸುವ ಸೌಜನ್ಯವನ್ನೂ ತೋರಿಸುತ್ತಿಲ್ಲ, ಆದರೆ ಇದೀಗ ಈ ಗುಂಡಿಯಿಂದ ಆಗ ಬಹುದಾದ ಸಮಸ್ಯೆಯನ್ನು ಮನಗಂಡ ನಾವು ಈ ಗುಂಡಿಯನ್ನು ಸಮರ್ಪಕವಾಗಿ ಮುಚ್ಚುವ ಕಾಮಗಾರಿಯನ್ನು ಗ್ರಾಮ ಪಂಚಾಯಿತ್ ಮೂಲಕ ನಡೆಸುವ ನಿರ್ಣಯ ಕೈಗೊಂಡಿದ್ದೇವೆ” ಎಂದರು.

ಇಲ್ಲಿ ಅವ್ಯವಸ್ಥೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಮೀನುಗಾರ ಮಹಿಳೆಯೊಬ್ಬರು, ಉಡುಪಿಯ ನಿರ್ಮಿತಿ ಕೇಂದ್ರದ ಮುಖಾಂತರ ನಡೆದ ಕಾಮಗಾರಿ ಇದಾಗಿದ್ದರೂ ಇಲ್ಲಿ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದ್ದು ಮೈಕಲ್ ಎಂಬವರು, ಅವರಿಗೆ ಈ ಹಿಂದಿನ ಶಿರ್ವ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಸನಬ್ಬ ಎಂಬವರು ಸಾತ್ ನೀಡುವ ಮೂಲಕ ಬೇಕಾಬಿಟ್ಟಿ ಕಳಪೆ ಕಾಮಗಾರಿಗಳನ್ನು ನಡೆಸಿ ಕೈತೊಳೆದುಕೊಂಡಿದ್ದಾರೆ. ಗುತ್ತಿಗೆದಾರ ಮೈಕಲ್ ಹಾಗೂ ಮಾಜಿ ಅಧ್ಯಕ್ಷ ಹಸನಬ್ಬ ಸ್ಥಳಕ್ಕೆ ಬಂದು ನಮ್ಮ ಸಮಸ್ಯೆ ಪರಿಹಾರ ಮಾಡಿಕೊಟ್ಟರೆ ಒಕೆ, ಇಲ್ಲ ನಾವು ಮುಂದಿನ ದಿನದಲ್ಲಿ ಇದರ ವಿರುದ್ಧ ಏನು ಮಾಡೆಬೇಕೋ ಅದನ್ನು ಮಾಡಿಯೇ ಸಿದ್ಧ ಎಂಬುದಾಗಿ ಎಚ್ಚರಿಸಿದ್ದಾರೆ.
k-ale

loading...

No comments