Breaking News

ಕರ್ನಾಟಕದಲ್ಲಿ 5 ರೂಪಾಯಿಗೆ ಸಿಗಲಿದೆ ಊಟ-ಉಪಹಾರ


ಬೆಂಗಳೂರು: ಜನಪ್ರಿಯ ಬಜೆಟ್ ಮಂಡನೆಗೆ ಸಿದ್ದರಾಗಿರುವ ಸಿಎಂ ಸಿದ್ದರಾಮಯ್ಯ ತಮಿಳ್ನಾಡಿನ ಅಮ್ಮ ಕ್ಯಾಂಟೀನ್ ಮಾದರಿಯಲ್ಲಿ ರಾಜ್ಯದಲ್ಲಿ ‘ನಮ್ಮ ಕ್ಯಾಂಟೀನ್ ’ ಆರಂಭಿಸುವ ಬಗ್ಗೆ ಬಜೆಟ್​'ನಲ್ಲಿ ಘೋಷಣೆ ಮಾಡಲು ಸಿದ್ದರಾಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ದಾಖಲೆಯ ೧೨ನೇ ಬಜೆಟ್ ನಲ್ಲಿ ಹಲವು ಜನಪ್ರಿಯ ಯೋಜನೆಗಳ ಘೋಷಣೆಗೆ ಸಿದ್ದತೆ ನಡೆಸಿದ್ದು, ತಮಿಳುನಾಡಿನ ಅಮ್ಮ ಕ್ಯಾಂಟೀನ್ ‌ಮಾದರಿಯಲ್ಲಿ "ನಮ್ಮ ಕ್ಯಾಂಟೀನ್" ಯೋಜನೆ ಈ ಪೈಕಿ ಪ್ರಮುಖವಾದುದು.


ಮೊದಲ ಹಂತದಲ್ಲಿ ಬೆಂಗಳೂರಿನ ೧೯೮ ವಾರ್ಡ್ ಗಳಲ್ಲಿ ನಮ್ಮ ಕ್ಯಾಂಟೀನ್ ಆರಂಭಿಸಲು ತಯಾರಿ ನಡೆದಿದೆ. ಉಪಹಾರ ಹಾಗೂ ಊಟವನ್ನು ತಯಾರಿಸಿ ಕ್ಯಾಂಟೀನ್ ಗಳಿಗೆ ತಲುಪಿಸುವ ಹೊಣೆ ಅಕ್ಷಯ ಪಾತ್ರ ಸಂಸ್ಥೆಗೆ ವಹಿಸಲಾಗಿದೆ. ಕ್ಯಾಂಟೀನ್'ಗಳಲ್ಲಿ ವಿತರಿಸಲಾಗುವ ಪ್ರತಿ ಊಟ‌ ಅಥವಾ ಉಪಹಾರವನ್ನು ಐದು ರೂಪಾಯಿಗೆ ಸಾರ್ವಜನಿಕರಿಗೆ‌ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಆದರೆ ಅಕ್ಷಯ ಪಾತ್ರ ಸಂಸ್ಥೆಗೆ ರಾಜ್ಯ ಸರ್ಕಾರ ಪ್ರತಿ ಊಟಕ್ಕೆ 20 ರೂಪಾಯಿ ನೀಡಲಿದೆ. ಆರಂಭದಲ್ಲಿ ರಾಜಧಾನಿಯಲ್ಲೇ ಪ್ರತಿನಿತ್ಯ 2ಲಕ್ಷ ಜನರಿಗೆ ಊಟ-ಉಪಹಾರ ವಿತರಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ. ಇದಕ್ಕಾಗಿ ವಾರ್ಷಿಕ ನೂರು ಕೋಟಿ ರೂಪಾಯಿ ವೆಚ್ಚವಾಗುವ ಲೆಕ್ಕಾಚಾರವನ್ನು ರಾಜ್ಯ ಸರ್ಕಾರ ಮಾಡಿದೆ. ತಮಿಳುನಾಡಿನ ಅಮ್ಮ ಕ್ಯಾಂಟೀನ್ ಗೆ ಸ್ಥಳೀಯ ಪಾಲಿಕೆಗಳು ಅನುದಾನ ನೀಡುತ್ತಿವೆ. ಆದರೆ ರಾಜ್ಯದಲ್ಲಿ ನಮ್ಮ ಕ್ಯಾಂಟೀನ್ ಯೋಜನೆ ಯಶಸ್ವಿಗೊಳಿಸಲೇಬೇಕೆಂದು ತೀರ್ಮಾನಿಸಿಯೇ ನೂತನ ಯೋಜನೆ ಘೋಷಣೆ ಮಾಡಲು ಸಜ್ಜಾಗಿರುವ ಸಿಎಂ ಸಿದ್ದರಾಮಯ್ಯ, ರಾಜ್ಯ ಸರ್ಕಾರದಿಂದಲೇ ಅನುದಾನ ನೀಡಲು ಸಜ್ಜಾಗಿದ್ದಾರೆ.
ಅಕ್ಷಯಪಾತ್ರೆ ಸಂಸ್ಥೆ ಊಟ-ಉಪಹಾರ ತಯಾರಿಸಿ ಕ್ಯಾಂಟೀನ್​ಗಳಿಗೆ ತಂದು ಕೊಡುವ ಜವಾಬ್ದಾರಿ ಮಾತ್ರ ನಿರ್ವಹಿಸಲಿದೆ. ವಿತರಣೆಗೆ ಖಾಸಗಿಯವರಿಗೆ ಕ್ಯಾಂಟೀನ್​ಗೆ ಜಾಗ ನೀಡಿ ಅವರಿಗೆ ಪ್ರೋತ್ಸಾಹ ಧನ ಹಾಗೂ ಉಚಿತ ವಿದ್ಯುತ್, ನೀರು ನೀಡಲೂ ಸರ್ಕಾರ ತೀರ್ಮಾನಿಸಿದೆ.
ಬೆಳಗಿನ ಉಪಹಾರಕ್ಕಾಗಿ ಇಡ್ಲಿ ಸಾಂಬಾರ್​ ಚಟ್ನಿ ಅಥವಾ ರೈಸ್​ಬಾತ್​ ನೀಡುವ ಬಗ್ಗೆ ಚರ್ಚೆ ನಡೆದಿದೆ. ಹಾಗೆಯೇ, ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಅನ್ನ, ಸಾರು, ಮಜ್ಜಿಗೆ ಹಾಗೂ ಉಪ್ಪಿನಕಾಯಿ ನೀಡಲು ತೀರ್ಮಾನಿಸಲಾಗಿದೆ. ಒಟ್ಟಾರೆ, ಚುನಾವಣೆಗೂ ಮುನ್ನ ಅನುಷ್ಟಾನವಾಗಲಿರುವ ಕಟ್ಟಕಡೆಯ ಬಜೆಟ್ ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ ನಮ್ಮ ಕ್ಯಾಂಟೀನ್ ಮೂಲಕ ಜನರ ಮನಸ್ಸು ಹಾಗೂ ಹೊಟ್ಟೆ ಎರಡನ್ನೂ ಗೆಲ್ಲಲು ರೂಪುರೇಷೆ ಸಿದ್ದಪಡಿಸಿದ್ದಾರೆ.
VIA ಸುವರ್ಣನ್ಯೂಸ್.
loading...

No comments