ಎಸಿಬಿ ಬಲೆಗೆ ಬಿದ್ದ ಅರಣ್ಯಾಧಿಕಾರಿ
ಕುಂದಾಪುರ : ವೈಲ್ಡ್ ಲೈಫ್ ಅಧಿಕಾರಿಯೊಬ್ಬನ ಮನೆಗೆ ಎಸಿಬಿ ದಾಳಿ ನಡೆಸಿದ ಘಟನೆ ಗುರುವಾರ ಬೆಳ್ಳಂಬೆಳ್ಳಗೆ ಕುಂದಾಪುರದಲ್ಲಿ ನಡೆದಿದೆ.
ಕುಂದಾಪುರದ ಕೊಲ್ಲೂರು ಮೂಕಾಂಬಿಕಾ ಅಭಯಾರಣ್ಯದ ವಲಯ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ ಆಚಾರ್ಯ ವಿರುದ್ಧ ಬಂದ ದೂರಿನ ಮೇರೆಗೆ ಉಡುಪಿ ಎಸಿಬಿ ಅಧಿಕಾರಿಗಳ ತಂಡ ಈ ದಾಳಿ ನಡೆಸಿದೆ. ಎಸಿಬಿ ಪೊಲೀಸರು ಒಟ್ಟು 8 ತಂಡಗಳಲ್ಲಿ 4 ಕಡೆಗಳಿಗೆ ಏಕಕಾಲಕ್ಕೆ ದಾಳಿ ನಡೆಸಿದರು. ಅಕ್ರಮ ಆಸ್ತಿ ಹೊಂದಿದ್ದಾರೆ ಎನ್ನುವ ಆರೋಪದಲ್ಲಿ ದಾಳಿ ನಡೆಸಲಾಗಿದ್ದು, ಆರೋಪಿಯ ಮೂಲ ಮನೆಯಾದ ಆಜ್ರಿ, ಹೊಸ ಮನೆ ಇರುವ ಕಂಬದಕೋಣೆ, ಕಚೇರಿ ಇರುವ ಕೊಲ್ಲೂರು ಮತ್ತು ಅಲ್ಲಿಯೇ ಸಮೀಪದಲ್ಲಿರುವ ಅವರ ಇನ್ನೊಂದು ಮನೆಗೆ ಎಸಿಬಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ಸಂದರ್ಭ 10 ಲಕ್ಷದ 8 ಸಾವಿರ ರೂ ಮೌಲ್ಯದ ಚಿನ್ನ, 8 ಲಕ್ಷದ 63 ಸಾವಿರ ನಗದು, 2 ಕಾರು, 75 ಲಕ್ಷ ಮೌಲ್ಯದ ಒಂದು ಮನೆ, ನಾಗೂರಿನಲ್ಲಿ 10 ಸೆಂಟ್ಸ್ 27 ಗುಂಟೆಯ ಎರಡು ಸೈಟ್, ಎರಡು ಕಾಂಪ್ಲೆಕ್ಸ್, 10 ಬ್ಯಾಂಕ್ ಖಾತೆಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಉಡುಪಿ ಇನಸ್ಪೆಕ್ಟರ್ ಸತೀಶ್ ದಾಳಿ ನೇತೃತ್ವ ವಹಿಸಿದ್ದು, ಎಂಟು ತಂಡಗಳಲ್ಲಿ ಒಟ್ಟು ಮೂವತ್ತಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಿದ್ದರು. ಸಂಜೆ ಸುಮಾರು ಮೂರೂವರೆ ಗಂಟೆವರೆಗೆ ಎಲ್ಲಾ ಮನೆಗಳಿದ್ದ ಮತ್ತು ಕೊಲ್ಲೂರಿನ ಕಚೇರಿಯಲ್ಲಿದ್ದ ಕಡತಗಳು, ಸ್ಥಿರ ಹಾಗೂ ನಗದು ಪರಿಶೀಲನಾ ಪ್ರಕ್ರಿಯೆ ನಡೆದಿದ್ದು, ನಂತರ ಎಸ್ಪಿ ಚನ್ನಬಸಣ್ಣನವರ್ ಅವರು ಸ್ಥಳ ಮಹಜರು ನಡೆಸಿದ್ದಾರೆ.
loading...
No comments