Breaking News

ದೊಡ್ಡಪ್ಪನಿಂದಲೇ ಅತ್ಯಾಚಾರ



ಮಳವಳ್ಳಿ : ಮಹಿಳೆಯರು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ನಾಗರಿಕರನ್ನು ಬೆಚ್ಚಿ ಬೀಳಿಸುತ್ತಿವೆ.ಇದೀಗ ಮಳವಳ್ಳಿಯಲ್ಲಿ  ಅಪ್ರಾಪ್ತ ಬಾಲಕಿ ಮೇಲೆ ಆಕೆ ದೊಡ್ಡಪ್ಪನೇ ಅತ್ಯಾಚಾರ ಎಸಗಿರುವ ಘಟನೆ ತಾಲ್ಲೂಕಿನ ಗೊಲ್ಲರದೊಡ್ಡಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ವಾಸಿ ರಾಮನಾಯ್ಕ್(55) ಕೃತ್ಯ ಎಸಗಿರುವ ಆರೋಪಿ. ಅಪ್ರಾಪ್ತ 15 ವರ್ಷದ ಬಾಲಕಿ 8ನೇ ತರಗತಿವರೆಗೆ ಓದಿ ಶಾಲೆ ತೊರೆದು ಮನೆಯಲ್ಲಿದ್ದಾಳೆ. ಈಕೆ ಪೋಷಕರು ಕೂಲಿ ಕೆಲಸಕ್ಕೆ ಹೋದರೆ ಬಾಲಕಿ ಒಬ್ಬಳೇ ಮನೆಯಲ್ಲಿರುತ್ತಿದ್ದಳು ಎನ್ನಲಾಗಿದೆ. ಈ ವೇಳೆ ಪಕ್ಕದ ಮನೆಯಲ್ಲೇ ವಾಸವಿರುವ ಬಾಲಕಿ ದೊಡ್ಡಪ್ಪ ಪುಸಲಾಯಿಸಿ ಅತ್ಯಾಚಾರ ಎಸಗುತ್ತಿದ್ದ ಎಂದು ತಿಳಿದು ಬಂದಿದೆ. ವಿಷಯವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ನಿನ್ನೆ ರಾತ್ರಿ ಬಾಲಕಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಪೋಷಕರು ಹಲಗೂರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಗ ಪರೀಕ್ಷಿಸಿದ ವೈದ್ಯರಿಗೆ ಬಾಲಕಿ ಗರ್ಭಿಣಿ ಆಗಿರುವ ಅಂಶಗೊತ್ತಾಗಿದೆ. ಜತೆಗೆ ಹೊಟ್ಟೆನೋವು ತೀವ್ರಗೊಂಡ ಹಿನ್ನೆಲೆಯಲ್ಲಿ ಆಕೆಯನ್ನು ಮಳವಳ್ಳಿ ಆಸ್ಪತ್ರೆಗೆ ಕರೆದೊಯ್ಯಲು ಸಲಹೆ ಮಾಡಿದ್ದಾರೆ.
ಮಳವಳ್ಳಿ ಆಸ್ಪತ್ರೆಗೆ ಆ್ಯಂಬುಲೆನ್ಸನಲ್ಲಿ ಕರೆತರುವಾಗ ಮಾರ್ಗಮಧ್ಯೆ ಗರ್ಭಪಾತವಾಗಿದ್ದು, ಮಳವಳ್ಳಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಜಿಲ್ಲಾಸ್ಪತ್ರೆಗೆ ದಾಖಲಿಸಲು ಸಲಹೆ ನೀಡಿದ್ದಾರೆ. ಪ್ರಸ್ತುತ ಬಾಲಕಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.  ವಿಷಯ ತಿಳಿದ ಹಲಗೂರು ಠಾಣೆ ಪೊಲೀಸರು ಬಾಲಕಿಯಿಂದ ಹೇಳಿಕೆ ಪಡೆದು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ದೊಡ್ಡಪ್ಪನ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.
loading...

No comments