ಕ್ರೈಸ್ತ ಧರ್ಮದ ಸೇವೆ ಶ್ಲಾಘನೀಯ
ಚಿಕ್ಕನಾಯಕನಹಳ್ಳಿ : ಮಾನವೀಯ ಮೌಲ್ಯಗಳನ್ನು ಮೂಡಿಸುತ್ತಾ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಹಿಂದುಳಿದವರ ಅಭಿವೃದ್ದಿಪಡಿಸಲು ಹಲವಾರು ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಜೀವನಮಟ್ಟ ಸುಧಾರಿಸುತ್ತಿರುವ ಕ್ರೈಸ್ತ ಧರ್ಮದ ಸೇವೆ ಶ್ಲಾಘನೀಯ ಎಂದು ಪುರಸಭಾ ಸದಸ್ಯ ಸಿ.ಡಿ. ಚಂದ್ರಶೇಖರ್ ಹೇಳಿದರು.
ಪಟ್ಟಣದ ಕೋಡುಗಲ್ಲು ರಸ್ತೆಯಲ್ಲಿರುವ ಬಿಲಿವಱ್ಸ್ ಚರ್ಚ್‌ನಲ್ಲಿ ಕೇರಳ ರಾಜ್ಯಕ್ಕೆ ನೂತನವಾಗಿ ಕನ್ನಡದ ಧರ್ಮಾಧ್ಯಕ್ಷರಾಗಿ ನೇಮಕಗೊಂಡ ರೆವೆರೆಂಡ್ ಜೇಸು ಪ್ರಸಾದ್‍ರಿಗೆ ಚಿಕ್ಕನಾಯಕನಹಳ್ಳಿ ಕ್ರೈಸ್ತ ಬಾಂಧವರಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪಟ್ಟಣದಲ್ಲಿರುವ ಬಿಲಿವಱ್ಸ್ ಚರ್ಚ್ ಬಡವರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ನೆರವಾಗುತ್ತಿದೆ. ಚರ್ಚ್ ವತಿಯಿಂದ ಕುಡಿಯುವ ನೀರಿನ 2 ಬೋರ್‍ವೆಲ್‍ಗಳನ್ನು ಕೊರೆಸಿದ್ದಾರೆ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಕುರಿ ಸಾಕಾಣಿಕೆ, ಟೈಲರಿಂಗ್ ತರಬೇತಿ ಸೇರಿದಂತೆ ಅನೇಕ ರೀತಿಯ ಸಹಾಯ ಮಾಡುತ್ತಾ ಆರ್ಥಿಕವಾಗಿ ಬೆಂಬಲ ಕೊಡುತ್ತಿದ್ದಾರೆ ಎಂದರು.
ಫಾದರ್ ಆನಂದ್‍ಕುಮಾರ್ ಮಾತನಾಡಿ, ದೇವರು ನಮಗೆ ವಹಿಸುವ ಚಿಕ್ಕ ಕೆಲಸ ನಿರ್ವಹಿಸಿ, ಅದರಲ್ಲಿ ನಂಬಿಕೆ ಉಳಿಸಿಕೊಂಡರೆ ದೊಡ್ಡ ಕೆಲಸ ವಹಿಸುತ್ತಾನೆ. ಕನ್ನಡಿಗರೊಬ್ಬರು ಕೇರಳ ರಾಜ್ಯಕ್ಕೆ ಮೊಟ್ಟ ಮೊದಲ ಬಿಷಪ್ ಆಗಿ ನೇಮಕವಾಗಿರುವುದು ಹೆಮ್ಮೆ ತಂದಿದೆ. ಚರ್ಚ್‌ನ ಉನ್ನತ ಹುದ್ದೆಗಳಿಗೇರಲು ಕನ್ನಡಿಗರಿಗೂ ಅವಕಾಶವಿದೆ ಎಂದರು.
loading...
No comments