Breaking News

ಮಂಗಳೂರು ಯೋಧ ಏಕನಾಥಶೆಟ್ಟಿ ಕುಟುಂಬಕ್ಕೆ ಪರಿಹಾರದ ಭರವಸೆ ನೀಡಿದ ಸಿಎಂ ಸಿದ್ದರಾಮಯ್ಯ



ಬೆಂಗಳೂರು:  ಮದ್ರಾಸ್‍ನಿಂದ ಅಂಡಮಾನ್‍ಗೆ ತೆರಳುತ್ತಿದ್ದ ವಿಮಾನ ಬಂಗಾಳಕೊಲ್ಲಿಯಲ್ಲಿ ಮುಳುಗಿ ನಾಪತ್ತೆಯಾದ ಮಂಗಳೂರು ಮೂಲದ ಸೈನಿಕನ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. 2016ರ ಜು.22ರಂದು ಮದ್ರಾಸ್‍ನಿಂದ ಅಂಡಮಾನ್‍ಗೆ ತೆರಳುತ್ತಿದ್ದ 29 ಜನರಿದ್ದ ಸೇನೆಯ ವಿಮಾನ ಬಂಗಾಳಕೊಲ್ಲಿಯಲ್ಲಿ ನಾಪತ್ತೆಯಾಗಿದ್ದು, ಅದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಗುರುವರಾಯಕೆರೆಯ ಏಕನಾಥಶೆಟ್ಟಿ ಅವರಿದ್ದರು.   ವಿಮಾನ ನಾಪತ್ತೆಯಾದ ನಂತರ 29 ಸೈನಿಕರ ಸ್ಥಿತಿಗತಿ ಏನೆಂದು ಇದುವರೆಗೂ ಪತ್ತೆಯಾಗಿಲ್ಲ. ಭಾರತೀಯ ಭೂ ಸೇನೆ ಈ ಘಟನೆಯನ್ನು ಫಿಜಿಕಲ್ ಕ್ಯಾಜುಲಿಟಿ ಎಂದು ಘೋಷಿಸಿ ಕನಿಷ್ಠ ಪ್ರಮಾಣದ ಪರಿಹಾರ ನೀಡಿದೆ.

ಏಕನಾಥಶೆಟ್ಟಿ ಕುಟುಂಬಕ್ಕೆ ಬೇರೆ ಆದಾಯದ ಮೂಲ ಇಲ್ಲ. ಇಬ್ಬರು ಮಕ್ಕಳಿದ್ದು, ಮಗಳು ಆಶಿತಾ ಶೆಟ್ಟಿ ಪದವಿ ಓದುತ್ತಿದ್ದು, ಮಗ ಅಕ್ಷಯ್ ಎಸ್ಸೆಸ್ಸೆಲ್ಸಿ ಓದುತ್ತಿದ್ದಾನೆ. ಇವರ ಜೀವನ ನಿರ್ವಹಣೆ ಕಷ್ಟವಾಗಿದೆ.  ದುರಂತ ನಡೆದ ನಂತರ ದೂರವಾಣಿ ಕರೆ ಮಾಡಿ ಸಾಂತ್ವನ ಹೇಳಿದ ಮುಖ್ಯಮಂತ್ರಿ ಅವರು ಸರ್ಕಾರದಿಂದ ಎಲ್ಲಾ ರೀತಿಯ ಸಹಾಯ ನೀಡುವುದಾಗಿ ಸಲಹೆ ನೀಡಿದ್ದರು.  ಅದರಂತೆ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಏಕನಾಥ ಶೆಟ್ಟಿ ಕುಟುಂಬದವರು ಮನವಿ ಮಾಡಿದ್ದರು.  ಅರಣ್ಯ ಸಚಿವ ರಮಾನಾಥ ರೈ ಅವರ ನೇತೃತ್ವದಲ್ಲಿ ವಿಧಾನಸೌಧಕ್ಕೆ ಬಂದು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ಏಕನಾಥ ಶೆಟ್ಟಿ ಅವರ ಪತ್ನಿ ಜಯಂತಿಶೆಟ್ಟಿ , ಮಕ್ಕಳು ಹಾಗೂ ಇತರೆ ಸದಸ್ಯರು ರಾಜ್ಯ ಸರ್ಕಾರದಿಂದ ಪರಿಹಾರ ಕೊಡುವಂತೆ ಮನವಿ ಮಾಡಿದರು.

ಮದ್ರಾಸ್ ರೆಜಿಮೆಂಟ್‍ನಲ್ಲಿ ಕೆಲಸ ಮಾಡುತ್ತಿದ್ದ ಏಕನಾಥ ಶೆಟ್ಟಿ ಅವರು 24 ವರ್ಷಗಳ ನಂತರ ನಿವೃತ್ತರಾಗಿದ್ದರು. ಆದರೆ, ಸೇನೆಯ ಅಧಿಕಾರಿಗಳು ಅವರನ್ನು ಮತ್ತೆ ಕರೆಸಿಕೊಂಡಿದ್ದರು. ಒಟ್ಟು 30 ವರ್ಷ ಭೂ ಸೇನೆಯಲ್ಲಿ ಅವರು ಕೆಲಸ ಮಾಡಿದ್ದಾರೆ ಎಂದು ವಿವರಿಸಲಾಯಿತು.  ಸೂಕ್ತ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
-ee sanje

loading...

No comments