ಪೂಜಾರಿಗೆ ಫೋನ್ ಮೂಲಕ ಚಾಟಿ ಬಿಸಿದ ಹೈ ಕಮಾಂಡ್
ಬೆಂಗಳೂರು : ಪಕ್ಷದ ನಾಯಕರ ವಿರುದ್ಧ, ಸರಕಾರದ ವಿರುದ್ಧ ಯಾವುದೇ ಅಂಜಿಕೆ ಇಲ್ಲದೇ ವಾಗ್ದಾಳಿ ನಡೆಸುತ್ತಿದ್ದ ಹಿರಿಯ ನಾಯಕರನ್ನು ಓಲೈಸಿ ಅವರು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗದಂತೆ ಮಾಡಲು ಹೈಕಮಾಂಡ್ ಮುಂದಾಗಿದೆ. ರಾಷ್ಟ್ರಾದಾದ್ಯಂತ ಪಕ್ಷವು ಸಂಕಷ್ಟದ ಸ್ಥಿತಿಯಲ್ಲಿದ್ದು, ಇದೀಗ ಇಂತಹ ಹೇಳಿಕೆಗಳಿಂದ ಪಕ್ಷಕ್ಕೆ ಇನ್ನಷ್ಟು ಘಾಸಿಯಾಗುವ ಕಾರಣದಿಂದ ಇಂತಹ ಹೇಳಿಕೆಗಳನ್ನು ನೀಡಬಾರದು ಎಂದು ಹೈಕಮಾಂಡ್ ನಾಯಕರಲ್ಲಿ ದೂರವಾಣಿ ಮೂಲಕ ಕೋರಿಕೊಂಡಿರುವುದು ಬಹಿರಂಗಗೊಂಡಿದೆ.
ಹಿರಿಯ ನಾಯಕರಾಗಿರುವ ಜನಾರ್ದನ ಪೂಜಾರಿ, ಜಾಫರ್ ಶರೀಫ್ ಹಾಗೂ ಎಚ್ ವಿಶ್ವನಾಥ್ ಅವರನ್ನು ಹದ್ದುಬಸ್ತಿನಲ್ಲಿಡುವ ನಿಟ್ಟಿನಲ್ಲಿ ಕೆಪಿಸಿಸಿಯೂ ವಿಫಲವಾಗಿರುವುದರಿಂದ ಹೈಕಮಾಂಡ್ ನೇರವಾಗಿ ಮಧ್ಯೆ ಪ್ರವೇಶಿಸಿ ಈ ನಾಯಕರನ್ನು ರಮಿಸಲು ಮುಂದಾಗಿದೆ.
ರಾಜ್ಯ ಸಭೆ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಅವರು ಜನಾರ್ದನ ಪೂಜಾರಿ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಮಾತುಕತೆ ನಡೆಸಿದ್ದರೆ, ಇನ್ನೊಬ್ಬ ನಾಯಕರಾದ ಕೇಂದ್ರ ಮಾಜಿ ಸಚಿವ ಜಾಫರ್ ಷರೀಪ್ ಅವರ ಮನವೊಲಿಕೆಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಮಾಜಿ ಸಚಿವ ಎಚ್ ವಿಶ್ವನಾಥ್ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧವೂ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಹೈಕಮಾಂಡ್ ವರಿಷ್ಠರು ನೇರವಾಗಿ ಇವರ ಜೊತೆ ಮಾತುಕತೆ ನಡೆಸದೇ ಇ ಮೇಲ್ ಮೂಲಕ ಪತ್ರ ಕಳುಹಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
-k ale
loading...
No comments