ಬಜ್ಪೆ ಅಕ್ರಮ ಕೋರೆಗೆ ನಲುಗಿದ ಶಾಲೆ
ಕಣ್ಣು ಮುಚ್ಚಿ ಕುಳಿತ ಜನಪ್ರತಿನಿಧಿಗಳು
ಸರಕಾರಿ ಜಾಗದಲ್ಲಿ ದಂಧೆ ನಿರಾತಂಕ ಇಲಾಖೆ ಶಾಮೀಲು?
ಬಜ್ಪೆ: ಸರಕಾರಿ ಶಾಲೆಗೆ ಸಮೀಪದ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಗ್ರಾನೈಟ್ ಕಲ್ಲುಗಾಣಿರಿಕೆ ನಡೆಯುತ್ತಿರುವ ವಿದ್ಯಾಮಾನ ಕುಪ್ಪೆಪದವು-ಕಿಲೆಂಜಾರು ಗ್ರಾಮದ ಅಚಾರಿಜೋರ, ದೊಡ್ಡಳಿಕೆ ಗ್ರಾಮದಲ್ಲಿ ನಡೆಯುತ್ತಿದೆ. ಕಲ್ಲು ಗಣಿಗಾರಿಕೆಯಿಂದಾಗಿ ಗ್ರಾಮದಲ್ಲಿ ಭಯಗ್ರಸ್ಥ ವಾತಾವರಣ ನಿರ್ಮಾಣವಾಗಿದ್ದು, ಜಿಲ್ಲಾಧಿಕಾರಿ, ಕುಪ್ಪೆಪದವು ಗ್ರಾ.ಪಂ. ಪಿಡಿಓ ಸಹಿತ ತಹಶೀಲ್ದಾರ್‌ಗೆ ದೂರು ಸಲ್ಲಿಸಿದರೂ ಅಕ್ರಮ ದಂಧೆ ನಡೆಯುತಿದ್ದು ಗಣಿ ಮಾಲಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಲಂಚ ನೀಡುತ್ತಿರುವ ಪರಿಣಾಮ ದಂಧೆ ನಿರಾತಂಕವಾಗಿ ನಡೆಯುತ್ತಲೇ ಇದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕುಪ್ಪೆಪದವು ಪಂಚಾಯತ್ ವ್ಯಾಪ್ತಿಯ ಅಚಾರಿಜೋರ ದೊಡ್ಡಳಿಕೆ ಸಮೀಪದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೆಲವೇ ಅಡಿ ಅಂತರಗಳಲ್ಲಿ ವಸಂತ್ ಎಂಬವರ ಮಾಲಕತ್ವದ ಗ್ರಾನೈಟ್ ಕಲ್ಲುಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ. ಕಲ್ಲುಗಣಿಗಾರಿಕೆ ನಡೆಯುತ್ತಿರುವ ಜಾಗ ಸರಕಾರಿ ಜಾಗವಾಗಿದ್ದು, ಪಂಚಾಯತ್ ಹಾಗೂ ಗಣಿ ಇಲಾಖೆ ಅನಧಿಕೃತವಾಗಿ ಪರವಾನಿಗೆ ನೀಡಿ ಗಣಿಗಾರಿಕೆ ನಡೆಸಲು ಕುಮ್ಮಕ್ಕು ನೀಡಿದೆ. ಸರಕಾರಿ ಶಾಲೆಯ ೫೦ ಮೀಟರ್ ಅಂತರದಲ್ಲಿ ಈ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಕಲ್ಲುಗಣಿಕಾರಿಕೆ ನಡೆಸಲು ಪ್ರತಿನಿತ್ಯ ಲೆಕ್ಕವಿಲ್ಲದಷ್ಟು ಸ್ಫೋಟಕಗಳನ್ನು ಬಳಸಲಾಗುತ್ತಿದ್ದು, ಸ್ಫೋಟದ ಪರಿಣಾಮ ಸುತ್ತಲಿನ ಪ್ರದೇಶದಲ್ಲಿ ಭೂಕಂಪನ ಉಂಟಾಗುತ್ತಿದೆ, ಶಾಲೆಯ ಕಟ್ಟಡವೂ ಬಿರುಕು ಬಿಟ್ಟಿದೆ. ಗಣಿಯ ಸುತ್ತಲು ಸುಮಾರು ೫೦ರಿಂದ ೬೦ ಮನೆಗಳಿದ್ದು, ಕೋರೆಯ ಸಮೀಪದಲ್ಲೇ ಸಾರ್ವಜನಿಕ ರಸ್ತೆ ಇದೆ. ಸ್ಫೋಟದ ಸದ್ದಿಗೆ ಸಮೀಪದ ಸುತ್ತಮುತ್ತಲಿನ ಹತ್ತಾರು ಮನೆಗಳು ಬಿರುಕುಬಿಟ್ಟಿದ್ದು, ಗ್ರಾಮಸ್ಥರು ಆತಂಕದಲ್ಲೇ ದಿನಕಳೆಯುವಂತಾಗಿದೆ. ಸ್ಫೋಟದ ತೀವ್ರತೆಗೆ ಕಲ್ಲಿನ ಚೂರುಗಳೆಲ್ಲಾ ಮನೆಗಳ ಮೇಲೆ, ಶಾಲೆಯ ಒಳಗೆ ಹಾಗೂ ರಸ್ತೆಗೆ ಬೀಳುತ್ತಿದ್ದು ಪ್ರಾಣಭೀತಿ ಎದುರಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.
ಸರಕಾರಿ ಜಾಗದಲ್ಲಿ ಗಣಿಗಾರಿಕೆ ನಡೆಸಲು ಇಲಾಖೆ ಅನುಮತಿ ನೀಡಿರುವುದು ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಶಾಲೆಯು ಗಣಿಗಾರಿಕೆ ನಡೆಯುವ ಪ್ರದೇಶದಿಂದ ೨೦೦ ಮೀಟರ್ ದೂರದಲ್ಲಿ ಇದೆ ಎಂದು ಬಿಂಬಿಸಿ ಈ ರೀತಿ ಅಕ್ರಮ ಗಣಿಗಾರಿಕೆ ನಡೆಸಲಾಗಿದ್ದು, ಅಕ್ರಮ ದಂಧೆಯಲ್ಲಿ ಗಣಿ ಇಲಾಖೆ ಹಾಗೂ ಕುಪ್ಪೆಪದವು ಪಂಚಾಯತ್ ಕೂಡಾ ಶಾಮೀಲಾಗಿದೆ. ಅಧಿಕಾರಿಗಳನ್ನು ಲಂಚದ ಮೂಲಕ ಸೆಳೆದು ಈ ರೀತಿ ಅನಧಿಕೃತವಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬುವುದು ಗ್ರಾಮಸ್ಥರ ಆರೋಪ. ಈ ಶಾಲೆಯಲ್ಲಿ ಸುಮಾರು ೫೦ಕ್ಕಿಂತಲೂ ಹೆಚ್ಚು ಮಕ್ಕಳು ಕಲಿಯುತ್ತಿದ್ದು ತೊಂದರೆ ಅನುಭವಿಸುತ್ತಿದ್ದಾರೆ, ಮಕ್ಕಳು ಶಾಲೆಗೆ ಬರಲು ಹೆದರುತ್ತಿದ್ದು, ಪೋಷಕರೂ ಆತಂಕಿತರಾಗಿದ್ದಾರೆ. ಈ ಶಾಲೆಯಲ್ಲಿ ಇಬ್ಬರು ವಿಕಲಚೇತನ ಮಕ್ಕಳಿದ್ದು, ಸ್ಫೋಟ ಉಂಟಾದಾಗ ತಲೆಯ ಮೇಲೆ ಕೈ ಇಟ್ಟು ವಿಚಿತ್ರವಾಗಿ ವರ್ತಿಸುತ್ತಿದ್ದಾರೆ. ಇತ್ತೀಚೆಗೆ ಗಣಿ ಇಲಾಖೆ ಅಧಿಕಾರಿಗಳು ಸರ್ವೆ ನಡೆಸಲು ಬಂದಾಗ ಶಾಲಾ ಶಿಕ್ಷಕರು ಹಾಗೂ ಪಂಚಾಯತ್ ಅಧ್ಯಕ್ಷರು ಇಲ್ಲಿ ಯಾವುದೇ ತೊಂದರೆಯಾಗುತ್ತಿಲ್ಲ ಎಂದು ಸುಳ್ಳು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಪಂಚಾಯತ್‌ನಲ್ಲಿ ಸಭೆಯಲ್ಲಿ ಪ್ರಶ್ನಿಸಿದರೆ ಅಧಿಕಾರಿಗಳು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತಾಡುತ್ತಿದ್ದಾರೆ ಎನ್ನಲಾಗಿದೆ. ಗಣಿಗಾರಿಕೆ ನಡೆಸುವ ಜಾಗದ ಸರ್ವೆ ನಂಬರ್ ಬದಲಾಯಿಸಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಗಣಿಗಾರಿಕೆ ಇರುವ ಜಾಗದ ಸರ್ವೆ ನಂಬರ್ ೮೧/೨ ಆಗಿದ್ದು, ಇದು ೮೧/೧ ಆಗಿರಬೇಕಿತ್ತು ಎಂಬುವುದು ಸಂಶಯ ವ್ಯಕ್ತವಾಗಿದೆ. ಬೇಕೆಂದೇ ಇದನ್ನು ಬದಲಾಯಿಸಲಾಗಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ.
ಈ ಎಲ್ಲದರ ನಡುವೆ ಕ್ಷೇತ್ರದ ಶಾಸಕರು ,ಸಂಸದರು ಕಣ್ಣು ಮುಚ್ಚಿಕುಳಿತಿರುವುದು ದುರಂತವೆಂದೇ ಹೇಳಬಹುದು .
loading...
No comments