Breaking News

ಕೋಮು ಗಲಭೆ ಸೃಷ್ಟಿಸುವ ಹುನ್ನಾರ ಅಪಾರ ಮಾರಕಾಸ್ತ್ರ ವಶ



ಕಾಸರಗೋಡು : ಕೋಮು ಸೂಕ್ಷ್ಮ ಪ್ರದೇಶದಲ್ಲಿ  ಪೊದೆಯೊಂದರಲ್ಲಿ  ತಲ್ವಾರು, ಕತ್ತಿ ಮೊದಲಾದ ಮಾರಕಾಸ್ತ್ರಗಳು ಪತ್ತೆಯಾಗಿದೆ. ಖಚಿತ ಮಾಹಿತಿ ಆಧಾರದಲ್ಲಿ ಕಂಬಾರ್ ಪೆರಿಯಡ್ಕದ ಖಾಸಗಿ ವ್ಯಕ್ತಿಯೊಬ್ಬರ ಜಾಗಕ್ಕೆ ತೆರಳಿದ ಪೊಲೀಸರಿಗೆ ಅಲ್ಲಿ ತಲವಾರು, ಮಚ್ಚು , ಕಬ್ಬಿಣದ  ರಾಡ್, ದೊಣ್ಣೆಗಳು,  ಮರದ ತುಂಡು, ಮದ್ಯ, ಬಿಯರ್  ಬಾಟಲಿಗಳು, ಪಾತ್ರೆಗಳು ಮತ್ತಿತರ ಸೊತ್ತುಗಳು ಪತ್ತೆಯಾಗಿವೆ.


ಗಲಭೆ ಸೃಷ್ಟಿಸುವ ಸಂಚಿನ ಹಿನ್ನೆಲೆಯಲ್ಲಿ  ಇಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮಾರಕಾಸ್ತ್ರಗಳನ್ನು ಸಂಗ್ರಹಿಸಿಡಲಾಗಿತ್ತು ಎಂದು ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಅಲ್ಲದೆ ಇಲ್ಲಿಗೆ ಆಗಮಿಸಿದ್ದ ತಂಡ ಒಂದು ರಾತ್ರಿ ಇಲ್ಲಿಯೇ ತಂಗಿದ್ದು, ಮುಂದಿನ ದಿನಗಳಲ್ಲಿ ವ್ಯಾಪಕವಾಗಿ ಗಲಭೆ ಸೃಷ್ಟಿಸುವ ಹುನ್ನಾರ ನಡೆಸಿತ್ತು ಎನ್ನುವುದನ್ನು ಖಚಿತಪಡಿಸಿದ್ದಾರೆ. ಆದರೆ ಈ ತಂಡದ ಸದಸ್ಯರನ್ನು ಪತ್ತೆ ಹಚ್ಚಲು ಮಾತ್ರ ಪೊಲೀಸರಿಂದ ಸಾಧ್ಯವಾಗಿಲ್ಲ.

ಕಾಸರಗೋಡು ಪರಿಸರದ ಕೆಲವು ಕಾಲನಿ  ಹಾಗೂ ಇತರ ಆಯಕಟ್ಟಿನ ಜಾಗಗಳನ್ನು ಕೇಂದ್ರೀಕರಿಸಿಕೊಂಡು ಗಲಭೆ ನಡೆಸಲು, ದುಷ್ಕ್ರತ್ಯಕ್ಕೆ ಸಂಚು ನಡೆಸಲಾಗಿದೆ ಎನ್ನುವುದು ಮಾತ್ರ ಗುಪ್ತಚರ ಇಲಾಖೆ ಖಚಿತಪಡಿಸಿತ್ತು. ಇದರ ಬೆನ್ನಲ್ಲೇ ಇಷ್ಟೊಂದು ಪ್ರಮಾಣದಲ್ಲಿ ಮಾರಕಾಸ್ತ್ರಗಳು ಕೂಡಾ ಸಿಗುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ.  ಕಾಸರಗೋಡು ನಗರ ಠಾಣಾ ಸರ್ಕಲ್ ಇನ್ಸ್ ಪೆಕ್ಟರ್ ಅಬ್ದುಲ್ ರಹೀಮ್ ನೇತೃತ್ವದ ಪೋಲೀಸ್ ತಂಡ ಇದೀಗ ಮಾರಕಾಸ್ತ್ರಗಳನ್ನು  ವಶಪಡಿಸಿಕೊಂಡಿದ್ದು, ತನಿಖೆ ತೀವ್ರಗೊಳಿಸಿದೆ. ಅಲ್ಲದೆ ಇದರಲ್ಲಿ ಶಾಮೀಲಾದ ಆರೋಪಿಗಳಿಗೆ ಶೋಧ ಕಾರ್ಯ ನಡೆಸುತ್ತಿದೆ.
-karavaliale 


loading...

No comments