Breaking News

ಎಂಟು ದಿನದ ಹಸುಗೂಸಿನ ಪ್ರಾಣ ಉಳಿಸಲು ನೆರವಾದ ಪ್ರಧಾನಿ ಮೋದಿ

ಹೊಸದಿಲ್ಲಿ: ಅಸ್ಸಾಂನ ಎಂಟು ದಿನದ ಹಸುಗೂಸೊಂದರ ಪ್ರಾಣ ಉಳಿಸಲು ಪ್ರಧಾನಿ ನರೇಂದ್ರ ಮೋದಿ ನೆರವಾಗಿದ್ದಾರೆ.

ಶ್ವಾಸಕೋಶದ ಗಂಭೀರ ವೈದ್ಯಕೀಯ ಸಮಸ್ಯೆಯಿಂದ ಬಳಲುತ್ತಿದ್ದ ಮಗುವನ್ನು ಶನಿವಾರ ದಿಬ್ರೂಗಢದಿಂದ ವಿಶೇಷ ವಿಮಾನದ ಮೂಲಕ ದಿಲ್ಲಿಗೆ ಕರೆತಂದು ಗಂಗಾರಾಮ್‌ ಆಸ್ಪತ್ರೆಗೆ ಸೇರಿಸಲಾಯಿತು. ಮಗುವನ್ನು ತುರ್ತಾಗಿ ಆಸ್ಪತ್ರೆಗೆ ಸೇರಿಸುವ ಅಗತ್ಯವಿದ್ದುದರಿಂದ ಪ್ರಧಾನಿ ನರೇಂದ್ರ ಮೋದಿ ಅವರೇ ವಿಶೇಷ ಕಾಳಜಿ ವಹಿಸಿ ಟ್ರಾಫಿಕ್‌ ಫ್ರೀ (ಸಂಚಾರಮುಕ್ತ) ಕಾರಿಡಾರ್‌ ಒದಗಿಸಿಕೊಡಲು ನೆರವಾದರು.

ಮಗುವಿನ ಪ್ರಾಣ ಉಳಿಸಲು ನೆರವಾದ ಪ್ರಧಾನಿ ಮೋದಿ ಮತ್ತು ದಿಲ್ಲಿ ಪೊಲೀಸರಿಗೆ ಮಗುವಿನ ಹೆತ್ತವರು ವಿಶೇಷ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

'ಇಂದು ನಮ್ಮ ಪಾಲಿಗೆ ಅವರೇ ದೇವರು' ಎಂದು ಮಗುವಿನ ತಂದೆ ಧ್ರುಬಜ್ಯೋತಿ ಕಲಿತಾ ಹೇಳಿದ್ದಾರೆ. 'ಈಶಾನ್ಯ ರಾಜ್ಯದ ಉನ್ನತ ಐಪಿಎಸ್‌ ಅಧಿಕಾರಿಯೂ ಸೇರಿದಂತೆ ಹಲವಾರು ಪ್ರಭಾವಿ ವ್ಯಕ್ತಿಗಳಿಂದ ನಾವು ನೆರವು ಕೇಳಿದೆವು. ಆದರೆ ಯಾರೂ ಏನೂ ಮಾಡಲಿಲ್ಲ. ನಮ್ಮ ಮಗುವಿಗೆ ಏನಾಗುವುದೋ ಎಂಬ ಆತಂಕದಲ್ಲಿ ನಾವಿದ್ದೆವು' ಎಂದು ಅವರು ತಿಳಿಸಿದರು.

ಮಗುವೀಗ ಅಪಾಯದಿಂದ ಪಾರಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮೆಕೋನಿಯಂ ಆಸ್ಪರೇಶನ್‌ ಸಿಂಡ್ರೋಮ್ ಎಂದು ಕರೆಯಲಾಗುವ ವಿಶೇಷ ವೈದ್ಯಕೀಯ ಪರಿಸ್ಥಿತಿಯಲ್ಲಿ ಮಗು ಸಿಲುಕಿದೆ ಎಂದು ಆರಂಭಿಕವಾಗಿ ಪತ್ತೆ ಮಾಡಲಾಗಿತ್ತು. ಮಗುವಿನ ಮೊದಲ ಮಲವು ಶ್ವಾಸಕೋಶದೊಳಕ್ಕೆ ಸೇರಿದ ವಿಲಕ್ಷಣ ಸಮಸ್ಯೆಯಿಂದ ಮಗುವಿನ ಜೀವಕ್ಕೇ ಅಪಾಯದ ಪರಿಸ್ಥಿತಿ ತಲೆದೋರಿತ್ತು.

ಗರ್ಭದಲ್ಲಿರುವ ಮಗುವು ಕಲುಷಿತ ದ್ರವವನ್ನುಮೂಗಿನ ಮೂಲಕ ಒಳಕ್ಕೆಳೆದುಕೊಂಡ ಹಿನ್ನೆಲೆಯಲ್ಲಿ ಪ್ರಾಣಾಪಾಯದ ಪರಿಸ್ಥಿತಿ ಉಂಟಾಗಿತ್ತು.

ಆದರೆ ವಾಸ್ತವದಲ್ಲಿ ಮಗುವಿಗೆ ಶ್ವಾಸಕೋಶದ ಅಪಧಮನಿಯ ಏರೊತ್ತಡದ ಸಮಸ್ಯೆಯಿತ್ತು ಎಂದು ಗಂಗಾರಾಮ್‌ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಮಗುವಿನ ಪ್ರಾಣ ಉಳಿಸಲು ದಿಬ್ರೂಗಢದ ಆದಿತ್ಯ ಆಸ್ಪತ್ರೆಯ ವೈದ್ಯರು ರಾತ್ರಿ 7 ಗಂಟೆ ವೇಳೆಗೆ ಏರ್‌ ಆಂಬ್ಯುಲೆನ್ಸ್‌ ಮೂಲಕ ದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆದೊಯ್ಯುವ ವ್ಯವಸ್ಥೆ ಮಾಡಿದರು. ಆ ಹೊತ್ತಿಗೆ ದಿಲ್ಲಿಯಲ್ಲಿ ಅಧಿಕ ಸಂಚಾರ ದಟ್ಟಣೆ ಇರುವ ಸಮಯವಾಗಿತ್ತು.

'ದಿಲ್ಲಿ ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ರಸ್ತೆಯನ್ನು ಸಂಚಾರ ಮುಕ್ತಗೊಳಿಸಿ ನಮ್ಮ ಮಗುವಿನ ಪ್ರಾಣ ಉಳಿಸಲು ನೆರವಾದ ಪರಿ ಕಲ್ಪನೆಗೂ ಮೀರಿದ್ದಾಗಿತ್ತು' ಎಂದು ಕಲಿತಾ ತಿಳಿಸಿದರು ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ದಿಲ್ಲಿ ಪೊಲೀಸರು ಅತ್ಯಂತ ಸೌಹಾರ್ದದಿಂದ ಮತ್ತು ವೃತ್ತಿಪರವಾಗಿ ಸ್ಪಂದಿಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ದಿಲ್ಲಿ ಪೊಲೀಸರಿಗೆ ಎಷ್ಟು ಕೃತಜ್ಞತೆ ವ್ಯಕ್ತಪಡಿಸಿದರೂ ಕಡಿಮೆಯೇ ಎಂದು ಅವರು ಹೇಳಿದರು.
vijayakaranataka

loading...

No comments