Breaking News

ಬಾಳಿಗಾ ಕೊಲೆ ಪ್ರಕರಣ ಹೋರಾಟಗಾರ ನರೇಂದ್ರ ನಾಯಕ್‌ ಹತ್ಯೆ ಯತ್ನ?


ಮಂಗಳೂರು: ವಿಚಾರವಾದಿ ನರೇಂದ್ರ ನಾಯಕ್‌ರನ್ನು ಹತ್ಯೆ ಮಾಡಲು ಇಬ್ಬರು ಅಪರಿಚಿತ ವ್ಯಕ್ತಿಗಳ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ನಗರದ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನರೇಂದ್ರ ನಾಯಕ್ ಅವರು ಬಾಳಿಗಾ ಕುಟುಂಬದ ಪರವಾಗಿ ಹೋರಾಟ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಬೆದರಿಕೆ ಕರೆಗಳು ಬರುತ್ತಿದ್ದವು.

ಘಟನೆ ವಿವರ 

ಬುಧವಾರ ಬೆಳಿಗ್ಗೆ 6.25ರ ವೇಳೆಗೆ ನರೇಂದ್ರ ನಾಯಕ್ ಅವರು ಎಂದಿನಂತೆ ಸ್ವಿಮ್ಮಿಂಗಿಗೆಂದು ಮಂಗಳೂರಿನ ಲಾಲಬಾಗ್ ಕಡೆಯಿಂದ ಲೇಡಿಹಿಲ್ ಕಡೆಗೆ ತಮ್ಮ

ಕಾರಿನಲ್ಲಿ ತೆರಳುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ಕಾರಿನ ಮುಂಭಾಗಕ್ಕೆ ಬಂದು “ನಿಮ್ಮ ಕಾರಿನ ಟಯರ್ ಪಂಚರ್ ಆಗಿದೆ” ಎಂದು ತಿಳಿಸಿದರು. ಮನೆಯಿಂದ ಹೊರಡುತ್ತಿದ್ದಂತೆ ಕಾರು ಸರಿ ಇರುವುದನ್ನು ಖಚಿತಪಡಿಸಿಕೊಂಡೇ ಹೊರಟಿದ್ದ ನಾಯಕಗೆ ತಮ್ಮ ಕಾರಿಗೆ ಏನೂ ಆಗಿಲ್ಲ ಎಂಬ ಅರಿವಿತ್ತು. ಅಪರಿಚಿತರ ಈ ಹೇಳಿಕೆಯಿಂದ ಅನುಮಾನಗೊಂಡ ನರೇಂದ್ರ ನಾಯಕ್ ಇದರ ಹಿಂದೆ ಏನೋ ಷಡ್ಯಂತ್ರ ಅಡಗಿರೋ ಸಾಧ್ಯತೆಯನ್ನು ಮನಗಂಡು ಕಾರನ್ನು ನಿಲ್ಲಿಸದೇ ನೇರವಾಗಿ ಪ್ರಯಾಣ ಮುಂದುವರೆಸಿದರು.

ಈ ಮೂಲಕ ಕಾರಿನಿಂದ ನಾಯಕರನ್ನು ಹೊರಕ್ಕೆ ಕರೆಸಿ ಹಲ್ಲೆ ನಡೆಸಿ ಪರಾರಿಯಾಗಬೇಕೆಂದಿದ್ದ ದುಷ್ಕರ್ಮಿಗಳ ಆಟ ವಿಫಲವಾಗಿದೆ. ದಾಳಿಗೆ ಸಂಚು ರೂಪಿಸಿ ಬಂದಿರುವ ಈ ಬೈಕುಧಾರಿಗಳು ವಿನಾಯಕ ಬಾಳಿಗಾ ಕೊಲೆ ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪಿಗಳಾಗಿರಬೇಕೆಂದು ನಾಯಕ್ ಶಂಕಿಸಿದ್ದಾರೆ. ಅಥವಾ ಯಾರದ್ದೋ ಪ್ರೇರಣೆಯಿಂದ ತಮ್ಮ ಮೇಲೆ ಹಲ್ಲೆ ನಡೆಸಲು ಬಂದಿದ್ದ ಬಾಡಿಗೆ ಗೂಂಡಾಗಳಿರಬೇಕೆಂದು ಅವರು ಹೇಳಿದ್ದಾರೆ.
ಘಟನೆ ಕುರಿತಂತೆ ಬರ್ಕೆ ಠಾಣೆಗೆ ದೂರು ನೀಡಿದ್ದು, ಸಿಸಿಬಿ ಪೊಲೀಸರಿಗೆ ಪ್ರಕರಣವನ್ನು ಹಸ್ತಾಂತರಿಸಲಾಗಿದೆ.
loading...

No comments