ರಾಯಣ್ಣ ಬ್ರಿಗೇಡ್ ನಿಲ್ಲಲ್ಲ ಅಂತೇ ಈಶ್ವರಪ್ಪ
ಬೆಂಗಳೂರು :ಹಿಂದುಳಿದವರು, ದಲಿತರು ಹಾಗೂ ಬಡವರಿಗೆ ನ್ಯಾಯ ಸಿಗಬೇಕು ಎಂಬ ಕಾರಣಕ್ಕಾಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆ ನಡೆಸುತ್ತಿದ್ದೇವೆಯೇ ಹೊರತು ಬಿಜೆಪಿ ಅಥವಾ ಬಿ.ಎಸ್.ಯಡಿಯೂರಪ್ಪ ವಿರುದ್ಧ ಅಲ್ಲ ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ. ನಗರದ ಕೆಇಬಿ ಇಂಜಿನಿಯರ್ಸ್ ಅಸೋಸಿಯೇಷನ್‍ನಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು. ಬಿಜೆಪಿಯಲ್ಲಿ ಭಿನ್ನಮತ, ಬಿ.ಎಸ್.ಯಡಿಯೂರಪ್ಪ ವಿರುದ್ದ ಅಸಮಾಧಾನ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಗಿತ ಇತ್ಯಾದಿ ವರದಿಗಳು ಮಾಧ್ಯಮಗಳಲ್ಲಿ ಬರುತ್ತಿವೆ. ಇದರ ಬಗ್ಗೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ತಲೆಕೆಡಿಸಿಕೊಳ್ಳಬಾರದೆಂದು ಅವರು ಮನವಿ ಮಾಡಿದರು.
ಯಾರಿಗೆ ಅನ್ಯಾಯವಾಗಿದೆಯೋ ಅಂಥವರಿಗೆ ಸಾಮಾಜಿಕ ನ್ಯಾಯ ಸಿಗಬೇಕೆಂಬುದು ನಮ್ಮ ಉದ್ದೇಶ. ಹಿಂದುಳಿದವರು, ದಲಿತರು, ಬಡವರಿಗೆ ರಾಯಣ್ಣ ಬ್ರಿಗೇಡ್ ಮೂಲಕವೇ ನ್ಯಾಯ ಒದಗಿಸಿಕೊಟ್ಟು ಇದರ ಉದ್ದೇಶವನ್ನು ಮಾಡಿ ತೋರಿಸೋಣ ಎಂದು ಹೇಳಿದರು. ನಾನು ಯಾವುದೇ ರಾಯಣ್ಣ ಬ್ರಿಗೇಡ್ ಚಟುವಟಿಕೆಯಿಂದ ಹಿಂದೆ ಸರಿಯುವುದಿಲ್ಲ. ಬಿಜೆಪಿ ರಾಷ್ಟ್ರಾಧ್ಯಕ್ಷರಾದ ಅಮಿತ್ ಷಾ ಕೂಡ ಚಟುವಟಿಕೆಯಿಂದ ಹಿಂದೆ ಸರಿಯದಂತೆ ಸೂಚಿಸಿದ್ದಾರೆ. ಇದನ್ನು ರಾಜಕೀಯ ಚಟುವಟಿಕೆಗಳಿಗೆ ಬಳಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. ರಾಯಣ್ಣ ಬ್ರಿಗೇಡ್‍ನಲ್ಲಿ ಗುರುತಿಸಿಕೊಂಡಿರುವ ಬಿಜೆಪಿ ಕಾರ್ಯಕರ್ತರಿಗೆ ನ್ಯಾಯ ಸಿಗುವವರೆಗೂ ನಾನು ಸುಮ್ಮನೆ ಕೂರುವುದಿಲ್ಲ. ಈಗಾಗಲೇ ಅಮಿತ್ ಷಾ ಹಾಗೂ ರಾಜ್ಯಾದ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಮಾತುಕಗೆ ನಡೆಸಿದ್ದೇನೆ. ಶೀಘ್ರದಲ್ಲೆ ಎಲ್ಲ ಗೊಂದಲಗಳು ನಿವಾರಣೆಯಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
loading...
No comments