ಮಗನ ಮದುವೆಗೆ ಪ್ರಕೃತಿ ಮಡಿಲನ್ನು ಆರಿಸಿಕೊಂಡ ಸಾಲುಮರ ತಿಮ್ಮಕ್ಕ
ಶ್ರೀಮಂತರು ಕೋಟ್ಯಂತರ ರೂ. ವ್ಯಯಿಸಿ ಭವ್ಯ ಮಹಲುಗಳಲ್ಲಿ, ಮಧ್ಯಮವರ್ಗದವರು ಲಕ್ಷಾಂತರ ರೂ. ಖರ್ಚು ಮಾಡಿ ಕಲ್ಯಾಣ ಮಂಟಪಗಳಲ್ಲಿ ಅದ್ದೂರಿಯಾಗಿ ಮದುವೆ ಮಾಡುವುದು ಸಾಮಾನ್ಯ. ಇವರನ್ನು ನೋಡಿ ಬಡವರೂ ಮೈತುಂಬಾ ಸಾಲ ಮಾಡಿ ಕೈಸುಟ್ಟುಕೊಳ್ಳುವುದು ಇದ್ದೇ ಇದೆ. ಇಂತಹ ಹುಸಿ ಪ್ರತಿಷ್ಠೆಗೆ ಮನಸೋಲದ ತಿಮ್ಮಪ್ಪ ತಮ್ಮ ಮಗನ ಮದುವೆಗೆ ಆರಿಸಿಕೊಂಡಿದ್ದು ಪ್ರಕೃತಿ ಮಡಿಲನ್ನು.
ತಾವೇ ಗಿಡ ನೆಟ್ಟು ಪೋಷಿಸಿ ಬೆಳೆಸಿದ ಚಲ್ಲಹಳ್ಳಿ ಗ್ರಾಮದ 240 ಎಕರೆ ಅರಣ್ಯ ಪ್ರದೇಶದಲ್ಲಿ ತಮ್ಮ ಪುತ್ರ ಆನಂದ್ ಅವರ ಮದುವೆಯನ್ನು ತಿಮ್ಮಪ್ಪ ಸಡಗರದಿಂದ ನೆರವೇರಿಸಿದ್ದಾರೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ವೇಣುಗೋಪಾಲ ಸ್ವಾಮಿ ಸನ್ನಿಧಿ
ಬೆಂಗಳೂರಿನ ಮಗ್ಗುಲಲ್ಲೇ ಇರುವ ಚಲ್ಲಹಳ್ಳಿಯಲ್ಲಿ ಸುಮಾರು ಒಂದೂವರೆ ಕಿಲೋಮೀಟರ್ ಉದ್ದದ ರಸ್ತೆಯ ಎರಡೂ ಬದಿ 250ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸಿರುವ 75 ವರ್ಷದ ತಿಮ್ಮಪ್ಪ, ಸಾಲುಮರದ ತಿಮ್ಮಕ್ಕನ ರೀತಿ ‘ಸಾಲು ಮರದ ತಿಮ್ಮಪ್ಪ’ ಎಂದೇ ಖ್ಯಾತರು. ಬೆಂಗಳೂರು ಉತ್ತರ ತಾಲೂಕು ಹೇಸರಘಟ್ಟ ಹೋಬಳಿ ಚಲ್ಲಹಳ್ಳಿ ಗ್ರಾಮದಿಂದ 3 ಕಿ.ಮೀ. ದೂರದಲ್ಲಿರುವ 240 ಎಕರೆ ಅರಣ್ಯ ಪ್ರದೇಶವನ್ನು ತಿಮ್ಮಪ್ಪರ ಕುಟುಂಬಸ್ಥರು ತಲೆತಲಾಂತರದಿಂದ ಪೋಷಿಸಿಕೊಂಡು ಬರುತ್ತಿದ್ದಾರೆ. ಈ ಅರಣ್ಯದ ನಡುವೆ ಶ್ರೀ ವೇಣುಗೋಪಾಲ ಸ್ವಾಮಿ ದೇಗುಲವಿದೆ. ತಿಮ್ಮಪ್ಪ ಅವರು ಮಗ ಆನಂದ ರಾಮ್ ಮದುವೆಗೆ ಈ ದೇಗುಲ ಮತ್ತು ಅದರ ಸುತ್ತವಿರುವ ಅರಣ್ಯವನ್ನೇ ಆಯ್ದುಕೊಂಡರು. ಅದ್ದೂರಿ ಪೆಂಡಾಲ್, ಕೃತಕ ಚಪ್ಪರಗಳ ಹಂಗಿಲ್ಲದೇ, ಪ್ರಕೃತಿ ಸಿದ್ಧವಾದ ಹಸಿರು ಗಿಡಮರಗಳ ಮಧ್ಯೆ ಆನಂದ್-ಶಶಿಕಲಾ ಅವರ ಮದುವೆ ಸರಳ, ಸಡಗರ, ಸಂಭ್ರಮದಿಂದ ನಡೆಯಿತು.
ಅರಣ್ಯದಲ್ಲೇ ಅರಸಿನ ಶಾಸ್ತ್ರ, ಮರಗಳ ನೆರಳಿನಲ್ಲೇ ಊಟೋಪಚಾರ
ಅಚ್ಚರಿಯೆನಿಸಿದರೂ ಸತ್ಯವಿದು. ವಧೂವರರ ಅರಸಿನ ಶಾಸ್ತ್ರವೂ ಕಾಡಿನಲ್ಲೇ ನಡೆಯಿತು. ರಾತ್ರಿ ಕಾಡಿನಲ್ಲೇ ಅರಸಿನ ಶಾಸ್ತ್ರ ನಡೆಸಿ ಊಟೋಪಚಾರದ ಬಳಿಕ ಕಾಡಿನಲ್ಲೇ ತಂಗಿದ ಹೆಣ್ಣು-ಗಂಡಿನ ಕಡೆಯವರು, ಬೆಳಗಿನ ಜಾವ ಸೂರ‍್ಯನ ಎಳೆಕಿರಣಗಳು ಇಳೆಯನ್ನು ತಡವುವ ವೇಳೆಗೆ ಸನಿಹದಲ್ಲೇ ಇರುವ ವೇಣುಗೋಪಾಲನ ಸನ್ನಿಧಿಯಲ್ಲಿ ಮಾಂಗಲ್ಯ ಧಾರಣೆ ಶಾಸ್ತ್ರವನ್ನೂ ನೆರವೇರಿಸಿದರು. ಅಲ್ಲೇ ಗಿಡ-ಮರಗಳ ಬುಡದಲ್ಲೇ ಮದುವೆಯೂಟ ಸಿದ್ಧಪಡಿಸಿ ಮರಳಗಳ ನೆರಳಲ್ಲೇ ಮದುವೆಗೆ ಆಗಮಿಸಿದ ನೆಂಟರಿಷ್ಟರನ್ನು ಸತ್ಕರಿಸಲಾಯಿತು. ಹೊಸರೀತಿಯ ಆತಿಥ್ಯವನ್ನು ಮದುವೆಗೆ ಬಂದವರೂ ಮೆಚ್ಚಿಕೊಂಡರು.
ಮರಗಳಿದ್ದರೆ ಮನುಷ್ಯ. ಮನುಷ್ಯನಿದ್ದರೆ ಮರವಲ್ಲ. ಈ ಮಾತನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು. ನಾವು ಮರಗಳನ್ನು ನಾಶಪಡಿಸುತ್ತಾ ಹೋದ್ರೆ ಮಳೆ ನಮ್ಮಿಂದ ದೂರವಾಗುತ್ತೆ. ಅನ್ನಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುವ ದಿನ ದೂರವಿಲ್ಲ. ಇದನ್ನು ಈಗಿನ ಜನ ಅರಿಯಬೇಕು ಅದಕ್ಕಾಗಿ ನಮ್ಮ ಮಗನ ಮದುವೆಯನ್ನು ಈ ಪರಿಸರದಲ್ಲೇ ಮಾಡಿದ್ದೇನೆ.
-ಸಾಲುಮರದ ತಿಮ್ಮಪ್ಪ. ಚಲ್ಲಹಳ್ಳಿಗ್ರಾಮ.
source vk
loading...
No comments