ಸುಳ್ಯ ಸ್ಥಳೀಯ ಯುವಕರ ಪತ್ರಕ್ಕೆ ಸ್ಪಂದಿಸಿದ ಮೋದಿ
ಸುಳ್ಯ : ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಬಾಳ್ಗೋಡು ಮತ್ತು ಹರಿಹರ ಸಂಪರ್ಕ ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿದೆ ಎಂದು ಸ್ಥಳೀಯ ಯುವಕರು ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೆ ತಂದಿದ್ದು, ಇದೀಗ ಪ್ರಧಾನಿ ಕಚೇರಿಯಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ.
ಪ್ರಧಾನಿ ಕಚೇರಿಯಿಂದ ಬಂದಿರುವ ಪ್ರತಿಕ್ರಿಯೆ ಈ ರಸ್ತೆಯನ್ನು ಶೀಘ್ರದಲ್ಲಿಯೇ ಸಂಚಾರಯೋಗ್ಯಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದೆ. ಬಾಳ್ಗೋಡು-ಹರಿಹರ ರಸ್ತೆ ಹಲವು ಗ್ರಾಮಗಳನ್ನು ಸಂಪರ್ಕಿಸುತ್ತದೆ. ಈ ರಸ್ತೆ ಉಬ್ಬು ತಗ್ಗು ದಿಣ್ಣೆಗಳಿಂದ ಕೂಡಿದ್ದು, ರಸ್ತೆ ಬಳಕೆದಾರರಿಗೆ ತೊಂದರೆಯಾಗಿದೆ. ರಸ್ತೆ ದುರಸ್ತಿಗೆ ಜನಪ್ರತಿನಿಧಿಗಳಲ್ಲಿ ಹಲವು ಬಾರಿ ಮನವಿ ಮಾಡಿದ್ದರೂ ರಸ್ತೆ ದುರಸ್ತಿಗೊಳಿಸಿಲ್ಲ. ರಸ್ತೆ ಪರಿಸ್ಥಿತಿ ಹಲವು ವರ್ಷಗಳಿಂದ ಹಾಗೇ ಉಳಿದಿದೆ. 12 ಕಿ ಮೀ ವಿಸ್ತಾರದ ರಸ್ತೆಯ ಮೇಲ್ಪದರ ಸಂಪೂರ್ಣ ಎದ್ದು ಹೋಗಿದ್ದು, ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ಇತ್ತೀಚೆಗೆ ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಆಗಾಗ ರಿಪೇರಿಗೆ ಬರುವುದು ಮತ್ತು ದೊಡ್ಡ ಹೊಂಡಗುಂಡಿಗಳಿಂದ ಎದುರಾಗುತ್ತಿರುವ ಅಪಘಾತಗಳು ಇತ್ಯಾದಿ ಬಗ್ಗೆ ಬಾಳ್ಗೋಡು ನಿವಾಸಿ ಶಿವಕುಮಾರ್ ಎಸ್ ಪಿ ಸವಿವರವಾದ ಪತ್ರವೊಂದನ್ನು ಫೆಬ್ರವರಿ ತಿಂಗಳಲ್ಲಿ ಪ್ರಧಾನ ಮಂತ್ರಿಗೆ ರವಾನಿಸಿದ್ದರು.
ಶಿವಕುಮಾರ್ ಪತ್ರದಲ್ಲಿ ಶೀಘ್ರದಲ್ಲಿಯೇ ರಸ್ತೆ ದುರಸ್ತಿಗೊಳಿಸಿ ಸಂಚಾರಕ್ಕೆ ಯೋಗ್ಯಗೊಳಿಸುವಂತೆ ಒತ್ತಾಯಿಸಿದ್ದರು.
ಪ್ರಧಾನಿ ಕಚೇರಿಯಿಂದ ಬಂದ ಪ್ರತಿಕ್ರಿಯೆಯಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಶೀಘ್ರದಲ್ಲಿಯೇ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶಿಸಿದೆ. ಕಳೆದ 30 ವರ್ಷದಿಂದ ಈ ರಸ್ತೆ ಕೇವಲ ದುರಸ್ತಿ ಕೆಲಸಗಳನ್ನು ಮಾತ್ರ ಕಾಣುತ್ತಿದೆ. ಆದರೆ ಇದೀಗ ಪತ್ರಕ್ಕೆ ಪ್ರಧಾನಿ ಕಚೇರಿಯಿಂದ ದೊರೆತಿರುವ ಸಕಾರಾತ್ಮಕ ಪ್ರತಿಕ್ರಿಯೆ ಹಳ್ಳಿಯ ಜನರಲ್ಲಿ ರಸ್ತೆಯ ಬಗ್ಗೆ ಹೊಸ ಭರವಸೆಯನ್ನು ಮೂಡಿಸಿದೆ ಎಂದು ಶಿವಕುಮಾರ್ ಹೇಳಿದ್ದಾರೆ.
-k ale
loading...
No comments