ಸುಹಾನಾಗೆ ದುಬೈನಿಂದ ಬೆದರಿಕೆ ಕರೆ ಮಾಡಿದ ಕಿಡಿಗೇಡಿಗಳು
ಮಂಗಳೂರು: ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರಗೊಳ್ಳುವ ಸರೆಗಾಮಪಾ ಸಂಗೀತ ಸ್ಪರ್ಧೆಯಲ್ಲಿ ಹಿಂದೂ ಭಕ್ತಿಗೀತೆ ಹಾಡುವ ಮೂಲಕ ಒಂದು ಸಮುದಾಯದ ಕೆಲವು ಜನರ ಕೆಂಗಣ್ಣಿಗೆ ಗುರಿಯಾಗಿರುವ ಸುಹಾನಾ ಸೈಯ್ಯದ್‌ಗೆ ಇದೀಗ ವ್ಯಾಟ್ಸ್‌ಆಪ್ ಹಾಗೂ ಫೋನ್‌ನಲ್ಲಿ ಬೆದರಿಕೆ ಸಂದೇಶ-ಕರೆಗಳು ಬರುತ್ತಿರುವ ಸಂಗತಿಯನ್ನು ಸುಹಾನಾ ಅವರ ಚಿಕ್ಕಮ್ಮ ಇದೀಗ ಬಹಿರಂಗ ಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಹಾನಾ ಅವರ ಚಿಕ್ಕಮ್ಮ ನಾದಿರಾ ತಾಹೀರ್, ಸಹಾನಾ ಹಾಡುವುದು ಸರಿಯಲ್ಲ ಎಂದು ಕೆಲವರು ಅಭಿಪ್ರಾಯ ತಿಳಿಸಿದರೆ ಇನ್ನೂ ಕೆಲವರು ಆಕೆ ಹಾಡುವಲ್ಲಿ ಸ್ವತಂತ್ರಳು ಎಂದು ಬೆಂಬಲಿಸಿದ್ದಾರೆ. ಆದರೆ ಆಕೆ ಧರ್ಮದ ಬಗ್ಗೆ ಚಿಂತನೆ ನಡೆಸಲಿ ಎಂದು ಸಲಹೆ ನೀಡಿದ್ದಾರೆ. ಇದರಿಂದ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ ಎಂದು ಕರೆ ಮಾಡಿದವರು ತಿಳಿಸಿದ್ದಾರೆ. ಆದರೆ ರಾಜ್ಯದಿಂದ ಈಗ ಯಾವುದೇ ಸಂದೇಶಗಳು ಬರುತ್ತಿಲ್ಲ ಎಂದು ಇದೇ ವೇಳೆ ನಾದಿರಾ ಅವರು ಸ್ಪಷ್ಟಪಡಿಸಿದರು.
ಸಂಗೀತ ಸ್ಪರ್ಧೆಯಲ್ಲಿ ‘ಶ್ರೀಕಾರನೇ..ಶ್ರೀನಿವಾಸನೇ’ ಎಂಬ ಹಾಡನ್ನು ಹಾಡುವ ಮೂಲಕ ಸುಹಾನ ಸಂಗೀತ ಪ್ರಿಯರ ಗಮನ ಸೆಳೆದಿದ್ದರು. ಆದರೆ ಸುಹಾನ ಹಾಡಿಗೆ ವಿರೋಧ ವ್ಯಕ್ತಪಡಿಸಿ ಫೇಸ್‌ಬುಕ್‌ನ ಮಂಗಳೂರು ಮುಸ್ಲಿಮ್ಸ್ ಪೇಜ್‌ನಲ್ಲಿ ಸುಹಾನ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಸುಹಾನ ಹಾಡಿದ ಈ ಹಾಡಿಗೆ ತೀರ್ಪುಗಾರರಾದ ಅರ್ಜುನ್ ಜನ್ಯಾ, ವಿಜಯ್ ಪ್ರಕಾಶ್ ಹಾಗೂ ರಾಜೇಶ್ ಕೃಷ್ಣನ್ ಅವರು ಮೆಚ್ಚುಗೆಯ ಮಾತನ್ನಾಡಿದ್ದರು. ಈ ಹಿನ್ನೆಲೆಯಲ್ಲಿ ಮೂವರು ತೀರ್ಪುಗಾರರ ವಿರುದ್ಧ ಕೂಡ ಫೇಸ್‌ಬುಕ್ ಪೇಜ್‌ನಲ್ಲಿ ನಿಂದನಕಾರಿ ಬರಹ ಬರೆಯಲಾಗಿತ್ತು. ಸುಹಾನಾ ಪುರುಷರ ಮುಂದೆ ಹಾಡುವ ಮೂಲಕ ಮುಸ್ಲಿಂ ಸಮಾಜವನ್ನು ಅವಮಾನ ಮಾಡಿದ್ದಾರೆ. ದೊಡ್ಡ ಸಾಧಿಸಿದ್ದೇನೆ ಎಂದು ನೀನು ಬೀಗಬೇಡ. ನಿನ್ನ ಪೋಷಕರು ನರಕಕ್ಕೆ ಹೋಗುವರು. ನೀನು ಧರಿಸುವ ಪರ್ದಾಗೆ ನೀನು ಯಾವುದೇ ಗೌರವ ಕೊಡುತ್ತಿಲ್ಲವಾದರೆ ಅದನ್ನು ತ್ಯಜಿಸುವುದೇ ಉತ್ತಮ ಎಂದು ಮಂಗಳೂರು ಮುಸ್ಲಿಮ್ಸ್ ಹೆಸರಿನ ಫೇಸ್‌ಬುಕ್ ಪೇಜ್‌ನಲ್ಲಿ ಸುಹಾನಾ ವಿರುದ್ಧ ಆಕ್ಷೇಪಕಾರಿ ಬರಹಗಳನ್ನು ಬರೆಯಲಾಗಿತ್ತು. ಅಲ್ಲದೆ ವಿವಾದದ ಬಗ್ಗೆ ರಾಜ್ಯವಲ್ಲದೆ ರಾಷ್ಟ್ರೀಯ ಮಾಧ್ಯಮಗಳಲ್ಲೂ ಗಂಭೀರ ಚರ್ಚೆ ನಡೆದಿದ್ದವು. ಇದೀಗ ಸುಹಾನಾಗೆ ದುಬೈನಿಂದಲೂ ಬೆದರಿಕೆ ಸಂದೇಶ ಹಾಗೂ ಕರೆಗಳು ಬಂದಿರುವುದು ವಿವಾದ ಮತ್ತಷ್ಟು ಉಲ್ಬಣಗೊಳ್ಳುವಂತೆ ಮಾಡಿದೆ.
loading...
No comments