2018 ವಿಧಾನಸಭಾ ಚುನಾವಣೆಗೆ ಹಿಂದೂ ಮಹಾಸಭಾ ಸಜ್ಜು
ಉಡುಪಿ : ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಏನೂ ಸಾಧನೆ ಮಾಡದೇ ತನ್ನದೇ ದಾರಿಯಲ್ಲಿ ನಡೆಯುತ್ತಿದೆ. ಅದನ್ನು ಸರಿ ದಾರಿಗೆ ತರಬೇಕಾಗಿದ್ದ ವಿಪಕ್ಷ ಬಿಜೆಪಿ ಕೂಡ ನಿಸ್ತೇಜ, ಅಸಹಾಯಕವಾಗಿದೆ. ಈ ಹಿನ್ನೆಲೆಯಲ್ಲಿ ಹಿಂದೂ ಮಹಾಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಅಗತ್ಯವಾಗಿದೆ. ಅಖಿಲ್ ಭಾರತೀಯ ಹಿಂದೂ ಮಹಾಸಭಾವು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಸುಬ್ರಹ್ಮಣ್ಯ ರಾಜ್ ಹೇಳಿದ್ದಾರೆ.
ಅವರು ನಿನ್ನೆ ಉಡುಪಿಯ ಹಿ.ಮ.ಸಭಾದಲ್ಲಿದ್ದ ಗೊಂದಲಗಳ ನಿವಾರಣೆಗೆ ನಾಯಕರ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಹಿಂದೂ ಮಹಾಸಭಾದ ತತ್ವಗಳನ್ನು ಒಪ್ಪುವ ಅಭ್ಯರ್ಥಿಗಳು ಸ್ಪರ್ಧಿಸುವ ಕ್ಷೇತ್ರದಲ್ಲಿ ಹೊಂದಾಣಿಕೆ ಮಾಡಿಕೊಳ್ಳವುದಕ್ಕೂ ಮಹಾಸಭಾ ಮುಕ್ತವಾಗಿದೆ. ಕೇಂದ್ರದಲ್ಲ್ಲಿ ಆಡಳಿತ ನಡೆಸುತ್ತಿರುವ ಬಿ.ಜೆ.ಪಿ. ಸರ್ಕಾರ ಕಾಶ್ಮೀರದಲ್ಲಿ ಪಿ.ಡಿ.ಪಿ.ಯೊಂದಿಗೆ ಕೈಜೋಡಿಸಿ ಸರ್ಕಾರ ರಚಿಸಿದಾಗ ಕಾಶ್ಮೀರದ ಸಮಸ್ಯೆಗಳು ಬಗೆಹರಿಯುತ್ತದೆ, ಕಾಶ್ಮೀರದ ಪಂಡಿತರಿಗೆ ಪುನರ್ವಸತಿ ಕಲ್ಪಿಸುತ್ತದೆ ಎಂಬ ಭರವಸೆ ಹುಟ್ಟಿತ್ತು. ಆದರೇ ಬಿ.ಜೆ.ಪಿ. ಅದನ್ನು ಹುಸಿಗೊಳಿಸಿದೆ. ಆಯೋಧ್ಯೆಯ ರಾಮಮಂದಿರದ ವಿಷಯದಲ್ಲಿಯೂ ಬಿಜೆಪಿಯ ಪರಿಸ್ಥಿತಿ ಗೊಂದಲಕಾರಿಯಾಗಿದೆ. ಬಿಜೆಪಿಗೆ ರಾಮಮಂದಿರ ವಿವಾದ ಮತ ಗಳಿಸುವ ರಾಜಕೀಯ ವಿಷಯವಾಗಿದೆ. ಆದರೇ ಮಹಾಸಭಾಕ್ಕೆ ಇದು ಭಾವಾನಾತ್ಮಕ ವಿಷಯವಾಗಿದೆ. ಆಯೋಧ್ಯೆಯ ವಿವಾದವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥ ಮಾಡಿಕೊಳ್ಳಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೇ ಕೇಂದ್ರ ಸರ್ಕಾರದ ಸಹಕಾರ ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಷ್ಟ್ರಮಟ್ಟದ ಆಂದೋಲನ ನಡೆಸಲು ಮಹಾಸಭಾ ನಿರ್ಧರಿಸಿದೆ. ಅದಕ್ಕಾಗಿ ರಾಷ್ಟ್ರ ಮಟ್ಟದ ಸಮಿತಿಯನ್ನು ರಚಿಸಲಾಗುತ್ತಿದೆ ಎಂದವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ರಾಜ್ಯ ಕಾರ್ಯಾಧ್ಯಕ್ಷ ರಾಜೇಶ್ ಪವಿತ್ರನ್, ಸಂಘಟನಾ ಕಾರ್ಯದರ್ಶಿ ರೋಹಿತ್ ಕುಮಾರ್, ವಕ್ತಾರ ಧರ್ಮೇಂದ್ರ, ದ.ಕ. ಜಿಲ್ಲಾ ವಿದ್ಯಾರ್ಥಿ ಮಹಾಸಭಾದ ಸಮರ್ಥ್ ಮತ್ತು ರತೀಶ್ ಮುಂತಾದವರಿದ್ದರು. ಉಡುಪಿಯ ಮಧುಕರ ಮುದ್ರಾಡಿ ಸ್ವಾಗತಿಸಿದರು.
‘ಪಿಎಫ್‌ಐ ನಿಷೇಧಿಸಿ’
ಮಂಗಳೂರಿನಲ್ಲಿ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ದೇಶದಲ್ಲಿ ನಿಷೇಧಿಸಬೇಕು, ಅದರ ನೊಂದಾವಣೆಯನ್ನೇ ರದ್ದುಗೊಳಿಸಬೇಕು. ಕೋಮುವಾದಿಗಳ ಕೂಟವಾಗಿರುವ ಪಿ.ಎಫ್.ಐ.ಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರವೇ ರಕ್ಷಿಸುತ್ತಿದೆ. ಅದಕ್ಕಾಗಿಯೇ ಅದರ ಕಾರ್ಯಕರ್ತರ ಮೇಲಿದ್ದ ೧೪೦ಕ್ಕೂ ಹೆಚ್ಚು ಕೇಸುಗಳನ್ನು ಸರ್ಕಾರ ಹಿಂಪಡೆದಿದೆ. ಓಟಿಗಾಗಿ ಕಾಂಗ್ರೆಸ್ ಸರ್ಕಾರದ ಈ ಕೃತ್ಯದಿಂದಾಗಿ ಈ ಕೇಸುಗಳನ್ನು ದಾಖಲಿಸಿದ್ದ ಪೊಲೀಸ್ ಅಧಿಕಾರಿಗಳ ಸ್ಥೈರ್ಯವನ್ನೇ ಸರ್ಕಾರ ಕಸಿದುಕೊಂಡಿದೆ ಎಂದು ಸುಬ್ರಹ್ಮಣ್ಯ ರಾಜ್ ತಿಳಿಸಿದರು.
No comments