Breaking News

ಪೊಲೀಸ್ ಪತ್ನಿಗೇ ಹಲ್ಲೆ, ಪ್ರಶ್ನಿಸಿದ್ದಕ್ಕೆ ಸಸ್ಪೆಂಡ್



ಉಡುಪಿ : ತನ್ನ ಗರ್ಭಿಣಿ ಪತ್ನಿಯನ್ನು ಚುಡಾಯಿಸಿ, ಹಿಂಬಾಲಿಸಿ ಹಲ್ಲೆಗೈದ ಕಾಮುಕರ ಕೃತ್ಯವನ್ನು ಖಂಡಿಸಿದ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಸಿಕ್ಕಿದ ಬಹುಮಾನವೇನು ಗೊತ್ತೇ? ಪೊಲೀಸ್ ಇಲಾಖೆಯಿಂದ ಸಸ್ಪೆಂಡ್! ಉಡುಪಿ ಜಿಲ್ಲೆಯಲ್ಲಿ ನಡೆದಿರುವ ಈ ಘಟನೆ ಜನಾಕ್ರೋಶಕ್ಕೆ ಕಾರಣವಾಗಿದೆ. ಕಾಮುಕರ ವಿರುದ್ಧ ದೂರು ನೀಡಿದ ಪೊಲೀಸ್ ಸಿಬ್ಬಂದಿಯನ್ನು ಬೆಂಬಲಿಸಬೇಕಿದ್ದ ಜಿಲ್ಲಾ ಉಸ್ತುವಾರಿ ಮಂತ್ರಿ ಪ್ರಮೋದ್ ಮಧ್ವರಾಜ್ ಅವರು ಕಾಮುಕರ ಬೆಂಬಲಕ್ಕೆ ನಿಂತಿದ್ದಾರೆ ಎನ್ನಲಾಗಿದ್ದು, ಈ ಕುರಿತ ಆಡಿಯೋ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಡೆದಿದ್ದೇನು?
ಪೊಲೀಸ್ ಸಿಬ್ಬಂದಿ ಬೆಳಗಾವಿ ಮೂಲದ ಪ್ರಕಾಶ್ ಅವರು ಎರಡು ದಿನಗಳ ಹಿಂದೆ ತನ್ನ ಗರ್ಭಿಣಿ ಪತ್ನಿಯನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಚೆಕ್ ಅಪ್‌ಗೆ ಕರೆದೊಯ್ದಿದ್ದರು. ಈ ವೇಳೆ ಬೈಕ್‌ನಲ್ಲಿ ಹಿಂಬಾಲಿಸಿದ್ದ ಕಾಮುಕರಿಬ್ಬರು ಮಲ್ಪೆ ಸಮೀಪ ಪತ್ನಿಯ ಮೈಮೇಲೆ ಕೈಹಾಕಿ ಅಸಭ್ಯವಾಗಿ ವರ್ತಿಸಿದ್ದಾರೆ. ಇದನ್ನು ಪ್ರಶ್ನಿಸಿದ ಪೊಲೀಸ್ ಸಿಬ್ಬಂದಿ ಕಾಮುಕರಲ್ಲಿ ಒಬ್ಬನಿಗೆ ಎರಡೇಟು ಬಿಗಿದಿದ್ದರು. ಈ ವೇಳೆ ಒಟ್ಟುಸೇರಿದ ಸಾರ್ವಜನಿಕರು ಮಲ್ಪೆ ಎಸ್‌ಐ ದಾಮೋದರ್ ಅವರಿಗೆ ಮಾಹಿತಿ ನೀಡಿದ್ದು ಕೊನೆಗೆ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ನಂತರ ನಡೆದ ಬೆಳವಣಿಗೆಯಲ್ಲಿ ಕಾಮುಕರಲ್ಲಿ ಓರ್ವನಾದ ಕುಮಾರ್ ಎಂಬಾತ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾಲಕತ್ವದ ಫಿಶ್ ಮಿಲ್ ಕಂಪೆನಿಯ ಕಾರ್ಮಿಕರೆಂದು ತಿಳಿದು ಬಂದಿತ್ತು. ನಂತರ ಪ್ರಕಾಶ್‌ರನ್ನು ಪ್ರಮೋದ್ ಮಧ್ವರಾಜ್ ಪತ್ನಿ ಎಸ್‌ಐ ದಾಮೋದರ್ ಮೂಲಕ ಫ್ಯಾಕ್ಟರಿಗೆ ಕರೆಸಿದ್ದರು.
ಅಲ್ಲಿ ನೂರಾರು ಮಂದಿ ಸೇರಿದ್ದು ಸಿಬ್ಬಂದಿಯನ್ನು ಅವಾಚ್ಯವಾಗಿ ನಿಂದಿಸಿದ್ದಲ್ಲದೆ ‘ನಿನ್ನ ಪತ್ನಿಗೆ ಬುರ್ಖಾ ಧರಿಸಿ ಕರೆದುಕೊಂಡು ಹೋಗು’ ಎಂದು ನಿಂದಿಸಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಘಟನಾವಳಿಗಳ ಬಳಿಕ ಮತ್ತೆ ಪ್ರಕರಣ ತಿರುವು ಪಡೆದುಕೊಂಡಿದ್ದು ಪೊಲೀಸರ ಏಟಿನಿಂದ ಗಾಯಗೊಂಡಿದ್ದಾನೆ ಎಂದು ಕುಮಾರ್‌ನನ್ನು ಹೈಟೆಕ್ ಆಸ್ಪತ್ರೆಗೆ ದಾಖಲಿಸಿ ಅದರ ಬಿಲ್ ಅನ್ನೂ ಸಿಬ್ಬಂದಿಯೇ ಭರಿಸಬೇಕು ಎಂದು ಹೇಳಿದ್ದಾರೆ. ಎಸ್‌ಪಿ, ಡಿವೈಎಸ್‌ಪಿ ಅವರು ಬಡಪಾಯಿ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ. ಪೊಲೀಸ್ ಸಿಬ್ಬಂದಿ ನಡೆದ ಘಟನೆಯನ್ನು ವಿವರಿಸಿ ‘ನನ್ನ ಪತ್ನಿಯನ್ನು ರಕ್ಷಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಇಲಾಖೆಯ ಹಿರಿಯ ಅಧಿಕಾರಿಗಳು ರಾಜಕಾರಣಿಗಳ ಕೈಗೊಂಬೆಯಾಗಿದ್ದಾರೆ’ ಎಂದು ಆಡಿಯೋ ಸಂಭಾಷಣೆಯಲ್ಲಿ ಹೇಳಿರುವುದು ಉಡುಪಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸ್ಪಷ್ಟ ನಿದರ್ಶನವೆಂದರೂ ತಪ್ಪಾಗಲಾರದು. ಹಿರಿಯ ಅಧಿಕಾರಿಗಳು ಇನ್ನಾದರೂ ತಪ್ಪನ್ನು ಸರಿಪಡಿಸಿಕೊಂಡು ಬಡಪಾಯಿ ಪೊಲೀಸನ ಪರ ನಿಲ್ಲುತ್ತಾರೆಯೇ ಕಾದು ನೋಡಬೇಕಿದೆ.
loading...

No comments