Breaking News

ಕಲ್ಲು ತೂರಾಟಗಾರರಿಗೆ ಸಹಕರಿಸುತ್ತಿದ್ದ 300 ವಾಟ್ಸ್‌ಆ್ಯಪ್‌ ಗ್ರೂಪ್‍ಗಳಿಗೆ ಕಡಿವಾಣ



ಕಾಶ್ಮೀರ : ವಾಟ್ಸ್‌ಆ್ಯಪ್‌‍ ಗ್ರೂಪ್‌‍ಗಳ ಮೂಲಕ ಕಾಶ್ಮೀರದಲ್ಲಿರುವ ಭದ್ರತಾ ಪಡೆಯ ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟ ಮಾಡುವವರಿಗೆ ನಿರ್ದೇಶನಗಳನ್ನು ನೀಡಲಾಗುತ್ತಿತ್ತು. ಕಲ್ಲು ತೂರಾಟ ಮಾಡುವವರಿಗೆ ಸಹಕರಿಸುತ್ತಿದ್ದ 300 ವಾಟ್ಸ್‌ಆ್ಯಪ್‌‍ ಗ್ರೂಪ್‍‌‍ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದು, ಇವುಗಳಲ್ಲಿ ಶೇ.90ರಷ್ಟು ಗ್ರೂಪ್‍ಗಳನ್ನು ಬಂದ್ ಮಾಡಲಾಗಿದೆ.

300 ವಾಟ್ಸ್‌ಆ್ಯಪ್‌ ಗ್ರೂಪ್‍ಗಳ ಪೈಕಿ ಪ್ರತಿಯೊಂದು ಗ್ರೂಪ್‍ನಲ್ಲಿಯೂ ಸರಿ ಸುಮಾರು 250 ಸದಸ್ಯರಿದ್ದಾರೆ. ಎನ್‍ಕೌಂಟರ್ ಸ್ಥಳಗಳಲ್ಲಿ ಭದ್ರತಾ ಸಿಬ್ಬಂದಿಗಳ ಕಾರ್ಯಾಚರಣೆಗೆ ಭಂಗ ತರಲು ಏನೆಲ್ಲಾ ಮಾಡಬಹುದು ಎಂದು ಈ ವಾಟ್ಸ್‌ಆ್ಯಪ್‌ ಗ್ರೂಪ್‍‌ಗಳಲ್ಲಿ ಚರ್ಚೆಯಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ನಾವು ಈ ಗ್ರೂಪ್‍ಗಳನ್ನು ಪತ್ತೆ ಹಚ್ಚಿ, ಅದರ ನಿರ್ವಾಹಕರನ್ನು ಕರೆದು ಸಮಾಲೋಚನೆ ನಡೆಸಿದ್ದೇವೆ. ಅವರಿಂದ ನಮಗೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ನಿನ್ನೆ ಬುದ್ಗಾಮ್ ಜಿಲ್ಲೆಯಲ್ಲಿ ನಡೆದ ಎನ್‍ಕೌಂಟರ್ ವೇಳೆ ಪ್ರಸ್ತತ ಪ್ರದೇಶದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿತ್ತು. ಹಾಗಾಗಿ ಭದ್ರತಾ ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟ ಮಾಡಲು ನೆರೆದಿದ್ದ ಯುವಕರ ಸಂಖ್ಯೆಯೂ ಕಡಿಮೆ ಇತ್ತು.

ಇಂಟರ್ನೆಟ್ ಸಂಪರ್ಕ ಇಲ್ಲದೇ ಇರುವ ಕಾರಣ ಜನರು ಗುಂಪು ಸೇರುವುದು ಅಸಾಧ್ಯವಾಗಿತ್ತು. ಈ ಹಿಂದೆ ಎನ್‍ಕೌಂಟರ್ ನಡೆಯುತ್ತಿದ್ದರೆ, ಸುಮಾರು 10 ಕಿಮಿ ದೂರದಲ್ಲಿ ಪ್ರತಿಭಟನಾಕಾರರೊಂದಿಗೆ ಸೇರಿ ಕಲ್ಲು ತೂರಾಟ ನಡೆಸಲು ಸಜ್ಜಾಗಿ ನಿಂತಿರುವ ಯುವಕರ ಗುಂಪು ಕಾಣಸಿಗುತ್ತಿತ್ತು. ಆದರೆ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿದ್ದರಿಂದ ನಿನ್ನೆ ಕಲ್ಲುತೂರಾಟ ಮಾಡುವ ಯುವಕರ ಸಂಖ್ಯೆಯೂ ಕಡಿಮೆ ಇತ್ತು.

ಭದ್ರತಾ ಸಿಬ್ಬಂದಿಗಳು ದೌರ್ಜನ್ಯವೆಸಗಿದ್ದಕ್ಕೆ  ನಾವು ಅವರ ವಿರುದ್ಧ ಕಲ್ಲು ತೂರಾಟ ಮಾಡಿದ್ದೇವೆ ಎಂದು ಕೆಲವರು ಯುವಕರು ಆರೋಪಿಸಿದ್ದಾರೆ.
-prajavani

No comments