Breaking News

ಕಲಬುರ್ಗಿ ಹತ್ಯೆ ನಡೆಸಿದವರು ನನ್ನ ಹತ್ಯೆ ಮಾಡಲು ವಿಫಲ ಯತ್ನ ನಡೆಸಿದ್ದರು : ಯೋಗೀಶ್ ಮಾಸ್ತರ್
ಧಾರವಾಡ: ಹಿರಿಯ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹತ್ಯೆಗೂ 20 ದಿನಗಳ ಹಿಂದಷ್ಟೇ ನನ್ನ ಹತ್ಯೆಗೂ ವಿಫಲ ಯತ್ನ ನಡೆದಿತ್ತು. ನನ್ನ ಕೊಲೆಗೆ ಸಂಜು ರೂಪಿಸಿದವರೆ ಡಾ. ಕಲಬುರ್ಗಿ ಅವರನ್ನು ಹತ್ಯೆ ಮಾಡಿದ್ದು ಅವರ ಮುಖಚಹರೆಯನ್ನು ನಾನು ಗುರುತಿಸಬಲ್ಲೆ ಎಂದು ಸಾಹಿತಿ ಯೋಗೀಶ ಮಾಸ್ಟರ್ ಹೇಳಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಹತ್ಯೆ ಸಂಚು ರೂಪಿಸಿದ ಹಂತಕರು ಯಾವುದೋ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸುವ ನೆಪದಲ್ಲಿ ಬಂದಿದ್ದರು. ಅದು ಸಲವಾಗಲಿಲ್ಲ. ಈ ಕುರಿತು ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹಂತಕರು ಮತ್ತೆ ತಮ್ಮ ಮನೆಗೆ ಬಂದರೆ ಮಾಹಿತಿ ನೀಡಿ ಎಂದು ಪೊಲೀಸರು ಕೈ ತೊಳೆದುಕೊಂಡರು ಎಂದು ಆರೋಪಿಸಿದರು.


ಪೊಲೀಸ್ ರೇಖಾಚಿತ್ರ ನೋಡಿದಾಗ ನನ್ನ ಹತ್ಯೆ ಮಾಡಲು ಯತ್ನಿಸಿದವರೆ ಕಲಬುರ್ಗಿ ಹತ್ಯೆ ಮಾಡಿರುವುದು ಖಾತ್ರಿಯಾಗಿದೆ. ಅವರ ಮುಖ ಚಹರೆಯನ್ನು ನಾನು ಗುರುತಿಸುತ್ತೇನೆ. ಆದರೆ ಈಗ ಪೊಲೀಸರು ಕಲಬುರ್ಗಿ ಹಂತಕರೆಂದು ಸೊಲ್ಲಾಪುರದ ವ್ಯಕ್ತಿಗಳನ್ನು ಕರೆತಂದು ವಿಚಾರಿಸುತ್ತಿದ್ದಾರೆ. ನನ್ನನ್ನು ಹತ್ಯೆ ಮಾಡಲು ಬಂದವರೊಂದಿಗೆ ನಾನು ಸಂಭಾಷಣೆ ನಡೆಸಿದಾಗ ಅವರು ಸ್ಪಷ್ಟ ಕನ್ನಡದಲ್ಲಿ ಮಾತನಾಡಿದ್ದಾರೆ. ಆದರೆ, ಪೊಲೀಸರು ಬಂಧಿಸಿರುವ ವ್ಯಕ್ತಿಗಳಿಗೆ ಕನ್ನಡ ಮಾತನಾಡಲು ಬರುವುದಿಲ್ಲ ಎಂದು ಪೊಲೀಸ್ ತನಿಖೆ ಬಗ್ಗೆ ಸಂಶಯ ವ್ಯಕ್ತಪಡಿಸಿದರು.

ಒಟ್ಟು ಐದು ಬಾರಿ ಹಂತಕರು ನನ್ನನ್ನು ಹತ್ಯೆ ಮಾಡಲು ಯತ್ನಿಸಿದ್ದರು. ಅಷ್ಟೂಬಾರಿ ನಾನು ಪೊಲೀಸರಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಅವರೇ ಕಲ್ಬುರ್ಗಿ ಅವರನ್ನು ಹತ್ಯೆ ಮಾಡಿದ್ದಾರೆ. ನಾನು ಹೇಳಿದಾಗಲೇ ಪೊಲೀಸರು ಎಚ್ಚೆತ್ತುಕೊಂಡಿದ್ದರೆ ಕಲ್ಬುರ್ಗಿ ಅವರನ್ನು ನಾವು ಕಳೆದುಕೊಳ್ಳುತ್ತಿರಲಿಲ್ಲ. ಇದಕ್ಕೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು.
Via toi
loading...

No comments