Breaking News

ಸೋಲಿನ ಆತ್ಮಾವಲೋಕನೆಗೆ ಎಲ್ಲರಿಗೂ ಆಹ್ವಾನ : ಯಡಿಯೂರಪ್ಪ ಸ್ಪಷ್ಟನೆ



ಬೆಂಗಳೂರು: ಉಪ ಚುನಾವಣೆಯ ಸೋಲಿನ ಬಗ್ಗೆ ಇಂದು ನಡೆಯಲಿರುವಆತ್ಮಾವಲೋಕನ ಸಭೆಗೆ ಕೆಲ ಮುಖಂಡರನ್ನು ಆಹ್ವಾನಿಸಿಲ್ಲ ಎಂಬ ವರದಿಗಳನ್ನು ತಳ್ಳಿ ಹಾಕಿರುವ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಎಲ್ಲಾ ಪ್ರಮುಖ ಮುಖಂಡರಿಗೂ ಆತ್ಮಾವಲೋಕನ ಸಭೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ ಎಂದು ಸ್ಪಷ್ಟಪ‌ಡಿಸಿದರು.
ನಗರದ ಅಲಿ ಆಸ್ಕರ್ ರಸ್ತೆಯಲ್ಲಿರುವ ಎಲ್.ಆರ್.‌ಡಿ.ಇ ಕಟ್ಟಡದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ರವರ ನೂತನ ಕಚೇರಿಯನ್ನು ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನ ಸಭೆಗೆ ಎಲ್ಲರಿಗೂ ಆಹ್ವಾನ ನೀಡಿದ್ದೇವೆ, ಸುಮಾರು 60ಕ್ಕೂ ಹೆಚ್ಚು ಮುಖಂಡರಿಗೆ ಸಭೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನವನ್ನು ತಲುಪಿಸಲಾಗಿದೆ. ಆಹ್ವಾನ ನೀಡಿಲ್ಲ ಎಂಬ ವರದಿಗಳು ಸತ್ಯಕ್ಕೆ ದೂರವಾದವು ಎಂದರು.
ವಿರೋಧ ಪಕ್ಷದ ನಾಯಕರುಗಳಾದ ಈಶ್ವರಪ್ಪ ಹಾಗೂ ಜಗದೀಶ್ ಶೆಟ್ಟರ್‌ರವರು ಪೂರ್ವ ನಿಯೋಜಿತ ಕಾರ್ಯಕ್ರಮ ಇರುವುದರಿಂದ ಸಭೆಗೆ ಬರುವುದಕ್ಕೆ ಆಗುವುದಿಲ್ಲ ಎಂದು ಹೇಳಿದ್ದಾರೆ. ಉಳಿದಂತೆ ಎಲ್ಲಾ ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಸಚಿವರಾದ ಅನಂತ್ ಕುಮಾರ್ ಸಹ ಸಭೆಯಲ್ಲಿ ಪಾಲ್ಗೊಳ್ಳುವರು ಎಂದರು.
ಉಪ ಚುನಾವಣೆಯಲ್ಲಿ ಗೆದ್ದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಿತ್ತ ನೆತ್ತಿಗೇರಿದೆ. ಅವರ ಪಕ್ಷದಲ್ಲೇ ಸಾಕಷ್ಟು ಗೊಂದಲಗಳಿವೆ. ಅದನ್ನು ಪರಿಹರಿಸಿಕೊಳ್ಳಲಿ ನಮ್ಮ ಪಕ್ಷದ ಬಗ್ಗೆ ಟೀಕೆ ಮಾಡುವುದು ಬೇಡ ಎಂದು ವಾಗ್ದಾಳಿ ನಡೆಸಿದ ಅವರು, ರಾಜ್ಯದಲ್ಲಿ ದೇವೇಗೌಡರು ಹಾಗೂ ಸಿದ್ದರಾಮಯ್ಯ ಅವರು ದೋಸ್ತಿ ಮಾಡಿಕೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿ ಆ ಬಗ್ಗೆ ಮಾತನಾಡಲ್ಲ ಎಂದರು.
ಕೋಮುವಾದಿ ಶಕ್ತಿಗಳ ವಿರುದ್ಧ ಜಾತ್ಯತೀತ ಶಕ್ತಿಗಳು ಒಂದಾಗಬೇಕು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಉತ್ತರ ಪ್ರದೇಶದಲ್ಲಿ ಜಾತ್ಯತೀತ ಪಕ್ಷಗಳು ಒಂದಾದವು. ಫಲಿತಾಂಶ ಏನಾಯಿತು ಎಂದು ಗೊತ್ತಿದೆಯಲ್ಲ ಎಂದು ಮಾರ್ಮಿಕವಾಗಿ ಹೇಳಿದರು.

No comments