Breaking News

ಉಗ್ರರನ್ನು ಸದೆಬಡಿದು ಕ್ಷೇಮವಾಗಿ ತಾಯ್ನಾಡಿಗೆ ಮರಳಿದ ಯೋಧ


ಮಂಗಳೂರು :ಸರ್ಜಿಕಲ್ ಸ್ಟ್ರೈಕ್ ಬಳಿಕ ಪಾಕ್ ಉಗ್ರರು ಭಾರತದ ಕುಪ್ವಾರ್ ಬಳಿಯ ವಿದ್ಯಾರ್ಥಿ ನಿಲಯದ ಮೇಲೆ ದಾಳಿ ನಡೆಸಿದ್ದರು. ಈ ದಾಳಿ ವೇಳೆ ತಮ್ಮ ದೇಹದೊಳಗೆ ನಾಲ್ಕು ಗುಂಡುಗಳು ಹೊಕ್ಕರೂ ಮುಡಿಪು ನಿವಾಸಿ ಯೋಧನೋರ್ವ ಉಗ್ರನನ್ನು ಸದೆಬಡಿದು ಕ್ಷೇಮವಾಗಿ ತಾಯ್ನಾಡಿಗೆ ಮರಳಿದಿದ್ದಾರೆ. ಅವರೇ ಯೋಧ ಸಂತೋಷ್ ಕುಮಾರ್.

ಸೆಪ್ಟಂಬರ್ ೨೬ರಂದು ನಡೆದ ಸರ್ಜಿಕಲ್ ಸ್ಟ್ರೈಕ್‌ನಲ್ಲಿ ಭಾರತೀಯ ಯೋಧರು ಉಗ್ರರನ್ನು ನೆಲಕ್ಕುರುಳಿಸಿದ ಯಶೋಗಾಥೆ ದೇಶದ ಮನೆಮನೆಗಳಲ್ಲಿ ಕೇಳಿಸುತ್ತಿತ್ತು. ಆದರೆ, ಇದಕ್ಕೆ ಪ್ರತೀಕಾರವಾಗಿ ಅಕ್ಟೋಬರ್ ೧೨ರಂದು ಪಾಕ್ ಬೆಂಬಲಿತ ಏಳು ಮಂದಿ ಉಗ್ರರು ಜಮ್ಮುವಿನ ಕುಪ್ವಾರ ಗಡಿಭಾಗದ ವಿದ್ಯಾರ್ಥಿಗಳ ನಿಲಯ ಹಾಗೂ ಅಲ್ಲಿದ್ದ ವಿದ್ಯಾರ್ಥಿಗಳ ಧ್ವಂಸಕ್ಕೆ ಅಣಿಯಾದವರನ್ನೂ ನಮ್ಮ ಯೋಧರು ಮುಗಿಸಿದರು. ಇಂತಹ ಸಾಹಸಮಯ ಸನ್ನಿವೇಶದಲ್ಲಿ ಮಂಗಳೂರಿನ ಯೋಧ ಸಂತೋಷ್ ಕುಮಾರ್‌ಗೆ ಉಗ್ರರ ನಾಲ್ಕು ಗುಂಡು ಹಾರಿಸಿದ್ದರು. ಎದೆಯನ್ನು ಶತ್ರುಪಾಳಯದ ಗುಂಡು ಸೀಳಿದ್ದರೂ ಯೋಧ ಸಂತೋಷ್ ಒಬ್ಬನನ್ನು ಕೊಂದು, ಐದು ತಿಂಗಳ ಜೀವನ್ಮರಣ ಹೋರಾಟ ಮಾಡಿ ಸಾವನ್ನು ಗೆದ್ದು ತಾಯ್ನಾಡಿಗೆ ಮರಳಿದ್ದಾರೆ.

ಕಳೆದ ಎಪ್ರಿಲ್ ಮೂರರಂದು ಭಾರತೀಯ ಸೇನಾಪಡೆಯ ವಾಹನವೊಂದು ಸಂತೋಷ್ ಮನೆಮುಂದೆ ಮುಂದೆ ನಿಂತಾಗ. ಊರುಗೋಲಿನ ಸಹಾಯದಿಂದ ಕೆಳಗಿಳಿದ ಏಕೈಕ ಮಗನನ್ನು ಕಂಡ ವಿಮಲಾ ಅವರು ಪ್ರಜ್ಞಾಹೀನರಾಗಿ ಕುಸಿದುಬಿದ್ದರು. ಅಲ್ಲಿಯವರೆಗೆ ತನ್ನ ಮಗನಿಗೆ ಏನಾಗಿತ್ತು ಎಂಬುದೇ ಆ ಮನೆಯವರಿಗೆ ಗೊತ್ತಿರಲಿಲ್ಲ. ಕಳೆದ ಅಕ್ಟೋಬರ್ ತಿಂಗಳಲ್ಲಿ ಜಮ್ಮುವಿನ ಕುಪ್ವಾರಾ ಪ್ರದೇಶದಲ್ಲಿ ಉಗ್ರರ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ ಮುಡಿಪುವಿನ ಸಂತೋಷ್ ಕುಮಾರ್(೩೩) ಕೂಡಾ ಒಬ್ಬರು. ರಜೆ ಮುಗಿಸಿ ತನ್ನ ಆರು ಮಂದಿ ಸಹೋದ್ಯೋಗಿಗಳೊಂದಿಗೆ ಕುಪ್ವಾರಾ ಪ್ರದೇಶಕ್ಕೆ ಪೆಟ್ರೋಲಿಂಗ್ ನಡೆಸಲು ಹೋಗಿದ್ದರು. ಪೆಟ್ರೋಲಿಂಗ್ ತಂಡಕ್ಕೆ ಸಂತೋಷ್ ಅವರೇ ಕ್ಯಾಪ್ಟನ್. ಪೆಟ್ರೋಲಿಂಗ್ ವೇಳೆ ಮೊಬೈಲ್ ಮತ್ತು ದೊಡ್ಡ ಶಸ್ತ್ರಾಸ್ತ್ರಗಳನ್ನು ಯೋಧರಿಗೆ ಕೊಡುವುದಿಲ್ಲ. ಬದಲಾಗಿ ರೈಫಲ್ ಮತ್ತು ಮೋಟ್ರೊಲಾ ಸ್ಯಾಟಲೈಟ್ ವಾಕಿಟಾಕಿಯನ್ನು ಮಾತ್ರ ನೀಡಲಾಗುತ್ತದೆ. ಅವರೊಂದಿಗೆ ಶಸ್ತ್ರ ಸಜ್ಜಿತ ೧೫ ಯೋಧರ ತಂಡವನ್ನು ಕಳುಹಿಸಿಕೊಡಲಾಗುತ್ತದೆ. ಆದರೆ, ಯೋಧರು ಬರುವ ಗೌಪ್ಯತೆ ಸೋರಿಕೆಯಾಗಿ ಹಾಸ್ಟೆಲ್‌ನಲ್ಲಿ ಅವಿತಿದ್ದ ಉಗ್ರರು ಪೆಟ್ರೋಲಿಂಗ್ ನಡೆಸುತ್ತಿದ್ದ ಸಂತೋಷ್ ನೇತೃತ್ವದ ಭಾರತೀಯ ಯೋಧರ ತಂಡದ ಮೇಲೆ ದಿಢೀರ್ ಗುಂಡಿನ ದಾಳಿ ನಡೆಸಿದ್ದರು. ಸಂತೋಷ್ ಜತೆಗಿದ್ದ ಬಂಗಾಳದ ಯೋಧ ಬಿಸ್ವಾಸ್ ಉಗ್ರರಿಗೆ ಮೊದಲ ಬಲಿಯಾಗಿದ್ದರು.

ಪ್ರತಿದಾಳಿ ನಡೆಸಲು ಸಂತೋಷ್ ಸೇನಾ ತಂಡ ಕಟ್ಟಡದ ಒಳ ನುಗ್ಗಿ ಮೊದಲ ಮಹಡಿ ತಲುಪುತ್ತಿದ್ದಂತೆ ಕಟ್ಟಡದ ಕೋಣೆಯಿಂದ ಬಂದ ಎರಡು ಗುಂಡುಗಳು ಸಂತೋಷ್ ಅವರ ಬಲತೊಡೆಯನ್ನು ಸೀಳಿದರೂ ಧೈರ್ಯಗುಂದದೆ ಮತ್ತೆ ಕಟ್ಟಡದ ಅಂತಸ್ತುಗಳನ್ನು ಏರಿದ್ದಾರೆ. ಇನ್ನೊಂದು ಅಂತಸ್ತಿನಲ್ಲಿ ಫೈರಿಂಗ್ ನಡೆಸುತ್ತಿದ್ದ ಉಗ್ರನ ತಲೆಗೆ ಗುಂಡಿಕ್ಕಿ ಹೊಡೆದುರುಳಿಸಿದ್ದಾರೆ. ಅಲ್ಲಿಂದ ಮತ್ತೊಂದು ಅಂತಸ್ತಿನ ಮಟ್ಟಿಲೇರುತ್ತಿರುವಾಗಲೇ ಉಗ್ರರ ಎರಡು ಗುಂಡುಗಳು ನೇರವಾಗಿ ಸಂತೋಷ್ ಅವರ ಎದೆಯ ಬಲಭಾಗಕ್ಕೆ ನುಸುಳಿ ನೋವು ತಾಳಲಾರದೆ ಪ್ರಜ್ಞೆ ತಪ್ಪಿ ನೆಲಕ್ಕುರುಳಿದ್ದರು. ಅಲ್ಲಿಂದ ಸೈನಿಕರು ಅವರನ್ನು ಆಸ್ಪತ್ರೆಗೆ ಸೇರಿಸಿದ್ದರು.

ನಂತರ ಕಟ್ಟಡವನ್ನು ಪೂರ್ಣಪ್ರಮಾಣದಲ್ಲಿ ವಶಕ್ಕೆ ತೆಗೆದುಕೊಂಡ ಭಾರತೀಯ ಶಸ್ತ್ರಸಜ್ಜಿತ ಸೈನಿಕರು ಅಕ್ಟೋಬರ್ ೧೪ರ ತನಕ ಕಾರ್ಯಾಚರಣೆ ನಡೆಸಿ ಮೂವರು ಉಗ್ರರನ್ನು ಹೊಡೆದುರುಳಿಸಿದ್ದರೆ, ಹಾಸ್ಟೆಲ್ ಕಟ್ಟಡಕ್ಕೆ ಆರ್‌ಎಲ್ ರಾಕೆಟ್ ಲಾಂಚರ್ ಸಿಡಿಸಿ ಉಳಿದ ಉಗ್ರರನ್ನು ಕೊಲ್ಲಲಾಯಿತು. ಉಗ್ರರ ದಾಳಿಗೆ ಸಂತೋಷ್ ಜೊತೆಯಿದ್ದ ಉತ್ತರ ಪ್ರದೇಶದ ಗ್ಯಾನೇಂದ್ರ, ಮಹಾರಾಷ್ಟ್ರದ ಅರ್ಜುನ್ ರಾಜ್, ಹಾಸನದ ಮಂಜುನಾಥ್ ನಾಯ್ಕ್ ಸೇರಿ ನಾಲ್ವರು ಯೋಧರು ವೀರ ಮರಣವನ್ನಪ್ಪಿದ್ದರು. ಅಹಮದಾಬಾದ್‌ನ ಯೋಧ ವಿಕೇಶ್ ಸೋಲಂಕಿ ಅವರ ತಲೆಯ ಭಾಗಕ್ಕೆ ಗುಂಡು ಹೊಕ್ಕಿದ್ದು, ಅದು ನರದಲ್ಲೇ ಸಿಲುಕಿ ಹೊರತೆಗೆಯಲಾಗದೆ ಇನ್ನೂ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಳ್ತಂಗಡಿ-ಕಾರಿಂಜದ ಕಕ್ಕೆಪದವಿನ ರಾಮಣ್ಣ ಸಾಲಿಯಾನ್ ಮತ್ತು ವಿಮಲಾ ಅವರ ಹಿರಿಯ ಪುತ್ರ ಸಂತೋಷ್ ಕುಮಾರ್. ಬಾಲ್ಯದಲ್ಲೇ ತಂದೆಯನ್ನು ಕಳಕೊಂಡವರು ಸಂತೋಷ್‌ರ ತಾಯಿ ಬೀಡಿ ಕಟ್ಟಿ ಮಕ್ಕಳಾದ ಸಂತೋಷ್ ಹಾಗೂ ಸೌಮ್ಯಲತಾ ಅವರಿಗೆ ಶಿಕ್ಷಣ ನೀಡಿದರು. ಮುಡಿಪುವಿನ ಅಜ್ಜಿ ಮನೆಯಲ್ಲೇ ಬೆಳೆದ ಸಂತೋಷ್ ಅಲ್ಲಿನ ಸರ್ಕಾರಿ ಕಾಲೇಜಿನಲ್ಲೇ ಪದವಿ ಪೂರ್ವ ಶಿಕ್ಷಣ ಮುಗಿಸಿದರು. ಚಿಕ್ಕಮ್ಮನ ಮಗ(ಅಣ್ಣ)ಕಿಶೋರ್ ಅದಾಗಲೇ ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದು, ಸಂತೋಷ್ ಸೇನೆ ಸೇರಲು ಪ್ರೆರೇಪಣೆಯಾಯಿತು. ೨೦೦೩ರಲ್ಲಿ ಸಂತೋಷ್ ಸೇನೆಗೆ ಸೇರಿದರು. ೧೫ ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ ಅವರು ದೇಶದ ವಿವಿಧೆಡೆ ಉಗ್ರರ ವಿರುದ್ಧ ನಡೆದ ೧೦ಕ್ಕೂ ಹೆಚ್ಚು ಕಾರ್ಯಾಚರಣೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸೇನೆಯಲ್ಲಿದ್ದುಕೊಂಡೇ ಬಿಹಾರದ ನಲಂದ ವಿ.ವಿಯಲ್ಲಿ ಪದವಿ ಶಿಕ್ಷಣವನ್ನೂ ಮುಗಿಸಿದ್ದರು. ಕಳೆದ ಮೂರು ವರ್ಷಗಳ ಹಿಂದಷ್ಟೇ ಶಿಕ್ಷಕಿ ಶ್ರೀಲತಾ ಅವರನ್ನು ವಿವಾಹವಾಗಿದ್ದಾರೆ.

ಸಂತೋಷ್ ಬಲಗಾಲು ಮತ್ತು ಎದೆಭಾಗಕ್ಕೆ ಗುಂಡುಗಳು ಹೊಕ್ಕಿರುವುದರಿಂದ ಇನ್ನು ಮುಂದೆ ಸೇನೆಯಲ್ಲಿ ದುಡಿಯುವ ಅವರ ಕನಸು ಕಮರಿಹೋಗಿದೆ. ಇಷ್ಟೆಲ್ಲಾ ಆದಾಗಲೂ ಮನೆಯವರಿಗೆ ಗೊತ್ತೇ ಇರಲಿಲ್ಲ. ತಾನು ಮಡಿದರೆ ಮಾತ್ರ ಮನೆಯವರಿಗೆ ವಿಷಯ ತಿಳಿಸಿ ಎಂದು ತನ್ನ ಗೆಳೆಯ ಊರಿನವರಾದ ವರದರಾಜ್‌ಗೆ ವಿಷಯ ತಿಳಿಸಿದ್ದರಂತೆ ಸಂತೋಷ್. ಇದೀಗ ಅವರು ತಾಯ್ನಾಡಿಗೆ ಬಂದಿದ್ದಾರೆ. ದೇಹದ ಸ್ಥಿತಿ ನೋಡಿದರೆ ತನಗಿನ್ನು ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವುದು ಅಸಾಧ್ಯ ಎಂಬ ನೋವು ಸಂತೋಷ್ ಅವರನ್ನು ಕಾಡುತ್ತಿದೆ.
-sanjevani
loading...

No comments