Breaking News

ತಮಿಳ್ನಾಡಿನಲ್ಲಿ ಬಾಂಬ್‌ನಾಗ


ಬೆಂಗಳೂರು : ಕಳೆದ ಶುಕ್ರವಾರ ಪೊಲೀಸರ ದಾಳಿ ಸಂದರ್ಭದಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ, ಸಿನಿಮೀಯ ಮಾದರಿಯಲ್ಲಿ ನಾಪತ್ತೆಯಾಗಿದ್ದ ಪಾಲಿಕೆ ಮಾಜಿ ಸದಸ್ಯ ರೌಡಿ ಪಟ್ಟಿಯಲ್ಲಿರುವ ವಿ. ನಾಗರಾಜ್ ಅಲಿಯಾಸ್ ಬಾಂಬ್ ನಾಗ ನ್ಯಾಯಾಲಯದಲ್ಲಿ ಶರಣಾಗಲು ಮುಂದಾಗಿದ್ದು, ಸದ್ಯ ಈತ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಸಿಕ್ಕಿದ್ದು, ಪೊಲೀಸರು ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.

ಉದ್ಯಮಿ ಅಪಹರಣ, ಹಳೇ ನೋಟುಗಳ ದಂಧೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಾಂಬ್ ನಾಗನ ಮನೆ ಹಾಗೂ ಕಛೇರಿ ಮೇಲೆ ಪೊಲೀಸರು ದಾಳಿ ನಡೆಸಿದಾಗ ಕೋಟ್ಯಂತರ ರೂಪಾಯಿ ಹಳೇ ನೋಟುಗಳು ಹಾಗೂ ಒಂದು ಸಾವಿರ ಕೋಟಿ ರೂಪಾಯಿ ಮೌಲ್ಯದ ಭೂದಾಖಲೆಗಳು ಪತ್ತೆಯಾಗಿದ್ದವು. ಪೊಲೀಸರ ದಾಳಿ ವೇಳೆ ಸಿನಿಮೀಯ ಮಾದರಿಯಲ್ಲಿ ಪರಾರಿಯಾಗಿದ್ದ ಬಾಂಬ್ ನಾಗ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

ಈತನ ಪತ್ತೆಗೆ ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ 4 ತಂಡಗಳನ್ನು ರಚಿಸಿದ್ದು, ಈ ತಂಡಗಳು ಚೆನ್ನೈ, ಧರ್ಮಪುರಿ, ಕಾಟ್ಪಾಡಿ ಸೇರಿದಂತೆ ತಮಿಳುನಾಡಿನ ಹಲವೆಡೆ ಶೋಧ ನಡೆಸಿದ್ದಾರೆ.

ಶರಣಾಗತಿ

ಸಧ್ಯ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿರುವ ಬಾಂಬ್ ನಾಗ ನ್ಯಾಯಾಲಯದ ಮೂಲಕ ಶರಣಾಗಲು ಬಯಸಿದ್ದು, ಇನ್ನೊಂದೆರೆಡು ದಿನಗಳಲ್ಲಿ ಈತ ಶರಣಾಗುವ ಸಾಧ್ಯತೆ ಇದೆ.

ಪೊಲೀಸ್ ಇಲಾಖೆಯಲ್ಲಿ ತನಗೆ ಪರಿಚಯವಿರುವ ಪೊಲೀಸ್ ಅಧಿಕಾರಿಗಳ ಮೂಲಕ ನ್ಯಾಯಾಲಯದಲ್ಲಿ ಶರಣಾಗುತ್ತೇನೆ. ಕಾಲಾವಕಾಶ ಕೊಡಿ ಎಂದು ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ ಎನ್ನಲಾಗಿದೆ.

ಈತ ಶರಣಾಗತಿ ಪ್ರಸ್ತಾಪಕ್ಕೂ ಸೊಪ್ಪು ಹಾಕದ ನಗರ ಪೊಲೀಸರು ಈತನ ಪತ್ತೆ ಕಾರ್ಯವನ್ನು ಚುರುಕುಗೊಳಿಸಿದ್ದಾರೆ.

ಗಾಂಧಿ, ಶಾಸ್ತ್ರಿ ಹೆಸರು

ಬಾಂಬ್ ನಾಗ ತನ್ನ ಇಬ್ಬರು ಗಂಡು ಮಕ್ಕಳಿಗೆ ಗಾಂಧಿ, ಶಾಸ್ತ್ರಿ ಎಂದು ಹೆಸರಿಟ್ಟಿದ್ದು, ಈ ಇಬ್ಬರು ಪುತ್ರರು ಬಾಂಬ್ ನಾಗನ ಜೊತೆಯೇ ನಾಪತ್ತೆಯಾಗಿದ್ದಾರೆ.

ಬಾಂಬ್ ನಾಗನ ಇಬ್ಬರು ಪುತ್ರರಾದ ಗಾಂಧಿ, ಶಾಸ್ತ್ರಿ ವಿರುದ್ಧವೂ ಹಿಂದೆಯೇ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿತ್ತಾದ್ದರೂ, ನ್ಯಾಯಾಲಯದ ಆದೇಶದ ಮೇರೆಗೆ ರೌಡಿಪಟ್ಟಿ ರದ್ದಾಗಿತ್ತು. ಈಗ ಇಬ್ಬರ ವಿರುದ್ಧ ಮತ್ತೆ ರೌಡಿಪಟ್ಟಿ ತೆರೆಯಲಾಗಿದೆ.

ಕೋಕಾ ಕಾಯಿದೆ

ಹಳೇ ನೋಟುಗಳ ವಿನಿಮಯ, ವಂಚನೆ, ಉದ್ಯಮಿಗಳ ಅಪಹರಣ, ಹಣ ಸುಲಿಗೆ ಮತ್ತಿತ್ತರ ಅಪಹರಣ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಾಂಬ್ ನಾಗನ ವಿರುದ್ಧ ಸಂಘಟಿತ ಅಪರಾಧ ಕಾಯಿದೆ ಕೋಕಾವನ್ನು ಬಳಸಲು ನಗರ ಪೊಲೀಸರು ಮುಂದಾಗಿದ್ದಾರೆ.

ಬಾಂಬ್ ನಾಗ ಹಳೇ ನೋಟು ದಂಧೆಯನ್ನು ಕಳೆದ ಡಿಸೆಂಬರ್‌ನಿಂದ ನಡೆಸುತ್ತಿದ್ದ ಮಾಹಿತಿ ಲಭ್ಯವಾಗಿದ್ದು, ಶೇ. 30ರಷ್ಟು ಕಮಿಷನ್ ಪಡೆದು ಬದಲಾಯಿಸಿಕೊಡುತ್ತಿದ್ದ ಬಾಂಬ್ ನಾಗ, ಕೆಲವರಿಗೆ ಹಣ ಕೊಡದೇ ವಂಚಿಸಿದ್ದ ಎನ್ನಲಾಗಿದೆ. ಈ ಎಲ್ಲದರ ಬಗ್ಗೆಯೂ ನಗರ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಇದರ ಜೊತೆಗೆ ಬಾಂಬ್ ನಾಗ ಹಲವು ಬಿಲ್ಡರ್, ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಬೆದರಿಸಿ ಜಮೀನು, ಮನೆ ಲಪಟಾಯಿಸಿರುವ ಬಗ್ಗೆಯೂ ಮಾಹಿತಿ ಇದ್ದು, ತನಿಖೆ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

No comments