Breaking News

ಬಿಎಸ್‌ವೈಗೆ ಸವಾಲು ಹಾಕಿ ಸಂಘಟನೆ ಉಳಿಸಿ ಸಮಾವೇಶ ನಡೆಸಿದ ಅತೃಪ್ತರು



ಬೆಂಗಳೂರು: ಬಿಜೆಪಿ ಪಕ್ಷ ಉಳಿಸಲು ಪ್ರಮುಖ ಕಾರ್ಯಕರ್ತರು ನಡೆಸಿರುವ ಸಂಘಟನೆ ಉಳಿಸಿ ಸಭೆಯನ್ನು ಪಕ್ಷ ವಿರೋಧಿ, ಅಶಿಸ್ತು ಎಂದು ಹೇಳಿದರೆ ನಾವು ಹೆದರುವುದಿಲ್ಲ. ಪಕ್ಷ ಉಳಿಸಿಯೇ ತೀರುತ್ತೇವೆ. ಏನು ಮಾಡುತ್ತೀರೋ ಮಾಡಿಕೊಳ್ಳಿ ಎಂಬ ದಾಟಿಯಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಸವಾಲು ಹಾಕಿದರು.

ನಗರದ ಅರಮನೆ ಮೈದಾನದಲ್ಲಿಂದು “ಸಂಘಟನೆ ಉಳಿಸಿ” ಎಂಬ ಪಕ್ಷದ ಪ್ರಮುಖ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೋ ಹೆದರಿಕೆ-ಬೆದರಿಕೆಗೆ ನಾವು ಜಗ್ಗುವುದಿಲ್ಲ. ಪಕ್ಷ ಉಳಿಸಲು ಇಲ್ಲಿ ಸೇರಿದ್ದೇವೆ. ನಮ್ಮ ಸುದ್ದಿಗೆ ಬಂದರೆ ಹುಷಾರ್ ಎಂದು ಗುಡುಗಿದರು.

ಯ‌ಡಿಯೂರಪ್ಪನವರು ಈಗಲೂ ನಮ್ಮ ನಾಯಕರು. ಅವರೇ ಮುಂದಿನ ಮುಖ್ಯಮಂತ್ರಿ. ಇದರ ಬಗ್ಗೆ ಯಾವುದೇ ಅನುಮಾನ ಬೇಡ. ಆದರೆ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರು ಕೆಲಸ ಮಾಡಬೇಕು. ಸರ್ವಾಧಿಕಾರಿ ಧೋರಣೆಯನ್ನು ಸಹಿಸುವುದಿಲ್ಲ ಎಂದರು.

ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತೆರಲು ಸಭೆ ನಡೆಸಿದ್ದೇವೆ. ಈ  ಹಿಂದೆ ಇದ್ದಂತಹ ರೆಸಾರ್ಟ್ ಸಂಸ್ಕೃತಿಯ ಸರ್ಕಾರ ಬೇಡ. ಕಾರ್ಯಕರ್ತರ, ಪರಿವಾರದ ವಿಚಾರಗಳನ್ನು ಇಟ್ಟುಕೊಂಡು ಉತ್ತಮ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಬರಬೇಕು ಎಂಬುದು ನಮ್ಮ ಆಶಯ. ಅದಕ್ಕಾಗಿಯೇ ಸಭೆ ಎಂದರು.

ಸಭೆಯಲ್ಲಿ ಪಾಲ್ಗೊಳ್ಳುವವರು ಪಕ್ಷ ವಿರೋಧಿಗಳು ಎಂಬ ಮಾತುಗಳು ಸರಿಯಲ್ಲ. ಸಭೆಯಲ್ಲಿ ಭಾಗವಹಿಸುವವರು ನಾಯಿ-ನರಿಗಳಲ್ಲ, ಹುಲಿಗಳು. ಇದನ್ನು ಅರ್ಥ ಮಾಡಿಕೊಳ್ಳಿ ಎಂದು ಈಶ್ವರಪ್ಪ ಅಬ್ಬರಿಸಿದರು.

ಬಿಜೆಪಿಯಲ್ಲಿ ಸರ್ವಾಧಿಕಾರಿ ಧೋರಣೆ ನಡೆಯುವುದಿಲ್ಲ. ನಾವು ಸತ್ತರೂ ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ನಾವು ಬದುಕಿದ್ದರೂ ಇಲ್ಲೆ, ಸತ್ತರೂ ಇಲ್ಲೆ ಎಂದರು.

ಪಕ್ಷ ಬಿಟ್ಟು ಬೇರೆ ಪಕ್ಷ ಕಟ್ಟಿದವರಿಂದ ನಮಗೆ ಬುದ್ದಿವಾದ ಅಗತ್ಯವಿಲ್ಲ. ಪಕ್ಷ ಉಳಿಸಿಯೇ ತೀರುತ್ತೇವೆ ಎಂದು ಈಶ್ವರಪ್ಪ ಹೇಳಿದರು.

ಯಡಿಯೂರಪ್ಪನವರ ಜತೆ ಇರುವ ಕೆಲ ನಾಯಕರು ಅವರನ್ನು ಇಂದ್ರ-ಚಂದ್ರ ಎಂದು ಹೊಗಳುತ್ತಾರೆ. ಹಿಂದೆಯೂ ಇಂಥ ನಾಯಕರುಗಳೆ ಅವರನ್ನು ಪಕ್ಷ ಬಿಡಿಸಿ ಕೆಜೆಪಿ ಕಟ್ಟಿಸಿದರು. ಇಂಥ ನಾಯಕರ ಬಗ್ಗೆ ಹುಷಾರಾಗಿರಿ ಎಂದು ಯಡಿಯೂರಪ್ಪನವರಿಗೆ ಎಚ್ಚರಿಕೆ ನೀಡಿದ ಈಶ್ವರಪ್ಪ ಅವರು, ಕೆಜೆಪಿ ಕಟ್ಟಿಸಿದ ನಾಯಕರೆ ಮತ್ತೆ ನಿಮ್ಮನ್ನು ಮಣ್ಣು ಮುಕ್ಕಿಸುತ್ತಾರೆ ಎಚ್ಚರ ಎಂದರು.

ಮಾತಿನ ಚಕಮಕಿ

ಸಭೆಯ ಆರಂಭದಲ್ಲಿ ವಿಧಾನ ಪರಿಷತ್ತಿನ ಸದಸ್ಯ ಎಂ.ಬಿ. ಭಾನುಪ್ರಕಾಶ್ ಮಾತನಾಡುತ್ತಿದ್ದಾಗ ನಾಯಕರೊಬ್ಬರ ಅಯೋಗ್ಯ ಎಂದು ಟೀಕಿಸಿದ್ದಕ್ಕೆ ಯಡಿಯೂರಪ್ಪನವರನ್ನು ಈ ರೀತಿ ಬೈಯ್ಯುವುದು ಸರಿಯಲ್ಲ ಎಂದು ಕಾರ್ಯಕರ್ತನೊಬ್ಬ ಎದ್ದು ವೇದಿಕೆ ಮುಂಭಾಗ ಏರಿದ ಧ್ವನಿಯಲ್ಲಿ ಹೇಳಿದಾಗ ಆತನನ್ನು ಸುತ್ತುವರೆದ ಕೆಲ ಕಾರ್ಯಕರ್ತರು ಆತನಿಗೆ ಗೂಸಾ ನೀಡಿದರು.

ಅತೃಪ್ತರ ನಿರ್ಣಯಗಳು

ಇಂದಿನ ಸಭೆಯಲ್ಲಿ 8 ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ರಾಷ್ಟ್ರೀಯ ಅಧ್ಯಕ್ಷರಿಗೆ ರಾಜ್ಯದ ಪಕ್ಷದ ವಿದ್ಯಮಾನಗಳನ್ನು ತಿಳಿಸಲು ದೆಹಲಿಗೆ ನಿಯೋಗ ತೆರಳುವ ಬಗ್ಗೆಯೂ ನಿರ್ಣಯ ಕೈಗೊಳ್ಳಲಾಗಿದೆ.

ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಸೋಲಿಗೆ ಕಾರಣರಾದವರ ಮೇಲೆ ವಿಚಾರಣೆ ನಡೆಸಲು ವಿಶೇಷ ಸಮಿತಿಯನ್ನು ರಚಿಸಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಾಗಿದೆ.

ಇದರ ಜತೆಗೆ ರಾಷ್ಟ್ರೀಯ ಅಧ್ಯಕ್ಷರು ರಚಿಸಿರುವ ನಾಲ್ಕು ಜನರ ಸಮಿತಿ ತುರ್ತಾಗಿ ಸೇರಿ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಬೇಕು. ಪ್ರತಿ ವಿಭಾಗದ ಸಭೆ ಕರೆದು ಕೋರ್ ಕಮಿಟಿ ಸದಸ್ಯರ ನೇತೃತ್ವದಲ್ಲಿ ಸಂಘಟನೆಯ ಆಂತರಿಕ ಸಮಸ್ಯೆಯನ್ನು ಬಗೆಹರಿಸಬೇಕು. ಅನಾವಶ್ಯಕ ಆರೋಪ ಹೊರಿಸಿ ಪಕ್ಷದಿಂದ ಅಮಾನತ್ತಾಗಿರುವ ಮುಖಂಡರುಗಳು ಅಮಾನತ್ತು ಆದೇಶವನ್ನು ವಾಪಸ್ ಪಡೆಯಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಾಗಿದೆ.

No comments