Breaking News

ಬೆಂಗಳೂರು ಸೇರಿ ಹಲವೆಡೆ ಭೂಕಂಪನ



ಬೆಂಗಳೂರು : ಬೆಂಗಳೂರು, ತುಮಕೂರು, ರಾಮನಗರ, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ವಿವಿಧ ಗ್ರಾಮಗಳಲ್ಲಿ ಇಂದು ಬೆಳಿಗ್ಗೆ ಲಘು ಭೂಕಂಪನ ಸಂಭವಿಸಿದ್ದು, ಜನರು ಭಯಭೀತರಾಗಿ ಮನೆಯಿಂದ ಹೊರಬಂದ ಘಟನೆ ನಡೆದಿದೆ.

ಬೆಳ್ಳಂಬೆಳಿಗ್ಗೆಯೇ ಭೂಮಿ ಅಲುಗಾಡಿದಾಗ ಜನರು ಆತಂಕಗೊಂಡಿದ್ದಾರೆ. ಮನೆಯಲ್ಲಿದ್ದ ಪಾತ್ರೆಗಳು, ಟಿವಿ, ಫ್ರಿಡ್ಜ್ ಸೇರಿದಂತೆ, ವಿವಿಧ ವಸ್ತುಗಳು ಅಲುಗಾಡಿದ್ದರಿಂದ ಜನರನ್ನು ಭಯಭೀತರನ್ನಾಗಿಸುವಂತೆ ಮಾಡಿತ್ತು. ಲಘು ಭೂಕಂಪನದಿಂದ ಯಾವುದೇ ಹಾನಿಯಾಗದಿದ್ದರೂ, ಜನರಲ್ಲಿ ಭಯದ ವಾತಾವರಣ ಮನೆಮಾಡಿದೆ.

ಬೆಂಗಳೂರಿನ ಕೆಂಗೇರಿ, ಕಾಮಾಕ್ಷಿಪಾಳ್ಯ, ಗಿರಿನಗರ ಸೇರಿದಂತೆ, ವಿವಿಧ ಭಾಗಗಳಲ್ಲಿ ಬೆಳಿಗ್ಗೆ 7.30ರ ಸುಮಾರಿನಲ್ಲಿ ಒಂದು ನಿಮಿಷಗಳ ಕಾಲ ಭೂಮಿ ಕಂಪಿಸಿದ್ದರಿಂದ ಜನರು ಭಯಭೀತಗೊಂಡಿದ್ದು, ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ.

ತುಮಕೂರು ಜಿಲ್ಲೆಯ ವಿವಿಧ ಗ್ರಾಮಗಳು ಹಾಗೂ ರಾಮನಗರ, ಮಾಗಡಿ, ಕನಕಪುರ ಮತ್ತು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ ಬೆಳಿಗ್ಗೆ 7.45ರ ವೇಳೆ ಭೂಮಿ ಕಂಪಿಸಿದ್ದು, ಜನರನ್ನು ಆತಂಕಕ್ಕೊಳಗಾಗುವಂತೆ ಮಾಡಿದೆ.

ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಬೆಳಗಿನ ಜಾವ ಭೂಕಂಪನ ಸಂಭವಿಸಿದ್ದು, ಮನೆಯಲ್ಲಿದ್ದ ಪಾತ್ರೆ ಪಗಡೆಗಳೆಲ್ಲಾ ಕೆಳಗೆ ಬಿದ್ದಿದ್ದರಿಂದ ಗ್ರಾಮದ ಜನ ಮನೆಯಿಂದ ಭಯಭೀತರಾಗಿ ಓಡಿಬಂದಿದ್ದಾರೆ.

ಭೂಕಂಪನದ ತೀವ್ರತೆ ರಿಕ್ಟರ್ ಮಾಪನದಲ್ಲಿ ದಾಖಲಾಗಿಲ್ಲ. ಅಲ್ಲದೆ ಇದರಿಂದ ಯಾವುದೇ ಹಾನಿಯಾಗದೆ ಇದ್ದರೂ, ಜನರು ಮಾತ್ರ ಭಯಭೀತರಾಗಿದ್ದಾರೆ.

ಯಾವುದೇ ಹಾನಿಯಿಲ್ಲ

ಈ ಬಗ್ಗೆ ಪ್ರತಿಕ್ರಿಯಿಸಿರುವ ಗಣಿ ಮತ್ತು ಭೂಗರ್ಭ ಇಲಾಖೆಯ ಉಪನಿರ್ದೇಶಕಿ ಡಾ. ಲಕ್ಷ್ಮಮ್ಮ, ಇಂದು ಬೆಳಿಗ್ಗೆ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭೂಕಂಪನದ ಅನುಭವ ಆಗಿದೆ. ರಿಕ್ಟರ್ ಮಾಪನದಲ್ಲಿ ಇದರ ತೀವ್ರತೆ ದಾಖಲಾಗಿಲ್ಲ ಎಂದು ಹೇಳಿದ್ದಾರೆ.

ಕಳೆದ ಒಂದು – ಎರಡು ತಿಂಗಳಗಳ ಹಿಂದೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ದಸೂಡಿ, ಕೆಂಕೆರೆ, ರಂಗನಕೆರೆ ಸೇರಿದಂತೆ, ಸುತ್ತಮುತ್ತಲ ಗ್ರಾಮಗಳಲ್ಲಿ ಹಾಗೂ  ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ, ಹೊಸದುರ್ಗ ಸೇರಿದಂತೆ, ವಿವಿಧೆಡೆ ರಿಕ್ಟರ್ ಮಾಪನದಲ್ಲಿ 2.9 ರಷ್ಟು ಭೂಕಂಪನ ತೀವ್ರತೆ ದಾಖಲಾಗಿತ್ತು.

ಅದಾದ ಬಳಿಕ ಮತ್ತೆ ಹಲವು ಭೂಕಂಪನ ಸಂಭವಿಸಿರುವುದು ರಾಜ್ಯದ ಜನರನ್ನು ನಿದ್ರೆಗೆಡಿಸುವಂತೆ ಮಾಡಿದೆ.

loading...

No comments