Breaking News

ಶಿವಸೇನೆಯ ಒತ್ತಡಕ್ಕೆ ಮಣಿದು ಗಾಯಕ್‌ವಾಡ್‌ ಮೇಲಿನ ನಿಷೇಧ ಹಿಂಪಡೆದ ಏರ್‌ ಇಂಡಿಯಾ



ಹೊಸದಿಲ್ಲಿ: ಚಪ್ಪಲಿ ಏಟಿನಿಂದಲೇ ಕಳೆದ ಹಲವು ದಿನಗಳಿಂದ ಸುದ್ದಿಯಲ್ಲಿದ್ದ ಶಿವಸೇನೆಯ ಸಂಸದ ರವೀಂದ್ರ ಗಾಯಕ್‌ವಾಡ್‌ ಮೇಲಿನ ನಿಷೇಧವನ್ನು ಏರ್‌ ಇಂಡಿಯಾ ತೆರವುಗೊಳಿಸುವ ಮೂಲಕ ಎರಡು ವಾರಗಳ ನಾಟಕ ತೆರೆಕಂಡಿದೆ.

ಮ್ಯಾನೇಜರ್​ಗೆ ಚಪ್ಪಲಿಯಿಂದ ಹೊಡೆದ ನಂತರ ಏರ್ ಇಂಡಿಯಾ, ರವೀಂದ್ರ ಗಾಯಕ್​ವಾಡ್ ಅವರ ಎಲ್ಲಾ ವಿಮಾನ ಟಿಕೆಟ್​ಗಳನ್ನು ರದ್ದುಗೊಳಿಸಿತ್ತು. ಹಾಗೆಯೇ ಇತರ ವಿಮಾನಯಾನ ಸಂಸ್ಥೆಗಳೂ ಸಹ ಗಾಯಕ್​ವಾಡ್ ಅವರ ಟಿಕೆಟ್ ರದ್ದುಗೊಳಿಸಿದ್ದವು. ಈ ನಿರ್ಧಾರದ ಕುರಿತು ಗುರುವಾರದ ಲೋಕಸಭಾ ಕಲಾಪದಲ್ಲಿ ಚರ್ಚೆ ನಡೆಸಲಾಗಿತ್ತು. ಇದೇ ವೇಳೆ ಗಾಯಕ್‌‌ವಾಡ್‌ ಏರ್‌ ಇಂಡಿಯಾಗೆ ಕ್ಷಮೆಯಾಚಿಸಲು ನಿರಾಕರಿಸಿದ್ದರು.

ಆದರೆ ಏರ್‌ ಇಂಡಿಯಾ ಮೂಲಗಳ ಪ್ರಕಾರ ನಾಗರಿಕ ವಿಮಾನಯಾನ ಸಚಿವಾಲಯದಿಂದ ಗಾಯಕ್‌‌ವಾಡ್‌ ಮೇಲಿನ ನಿರ್ಬಂಧವನ್ನು ತೆರವುಗೊಳಿಸುವಂತೆ ಪತ್ರ ಬಂದ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಗುರುವಾರದಂದು ತಮ್ಮ ತಪ್ಪಿನ ಕುರಿತು ಸಚಿವಾಲಯಕ್ಕೆ ಪತ್ರ ಬರೆದಿದ್ದ ಗಾಯಕ್‌‌ವಾಡ್‌, ವಿಮಾನದಲ್ಲಿ ನಡೆದ ದುರದೃಷ್ಟಕರ ಘಟನೆಗೆ ಕ್ಷಮೆಯಾಚಿಸುವುದಾಗಿ ಪತ್ರದಲ್ಲಿ ಹೇಳಿದ್ದಾರೆ ಎನ್ನಲಾಗಿದೆ.


ಮಾರ್ಚ್‌ 23ರಂದು ನಡೆದ ಘಟನೆ ಉದ್ದೇಶ ಪೂರಕವಾದದಲ್ಲ, ಯಾರೊಬ್ಬರಿಗೂ ಆ ರೀತಿ ನಡೆದುಕೊಳ್ಳಬೇಕು ಎಂಬ ದುರುದ್ದೇಶವಿರಲಿಲ್ಲ. ಆದರೂ ಘಟನೆ ನಡೆದಿದೆ. ಇದರ ಕುರಿತು ತನಿಖೆ ನಡೆಯುತ್ತಿದೆ. ಹೀಗಾಗಿ ಸತ್ಯಾಸತ್ಯತೆ ತನಿಖೆ ಬಳಿಕ ಹೊರಬರುತ್ತದೆ, ಈ ರೀತಿಯ ವರ್ತನೆ ಮುಂದಿನ ದಿನಗಳಲ್ಲಿ ನಡೆಯದಂತೆ ನಾವು ಎಚ್ಚರ ವಹಿಸುತ್ತೇವೆ. ನನ್ನಿಂದ ನೋವಾದ ಎಲ್ಲರಿಗೂ ಕ್ಷಮೆಕೋರುತ್ತೇನೆ' ಎಂದು ಗಾಯಕ್‌‌ವಾಡ್‌ ಕ್ಷಮೆಯಾಚಿಸಿ ಪತ್ರ ಬರೆದಿದ್ದಾರೆ.

ಅಲ್ಲದೇ 'ವಿಮಾನ ಸಂಸ್ಥೆಗಳ ನಿರ್ಧಾರ ನನ್ನ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಮೇಲೂ ಹೆಚ್ಚು ಒತ್ತಡ ಬೀರುತ್ತಿದೆ. ಹೀಗಾಗಿ ನನ್ನ ಮೇಲಿನ ನಿಷೇಧವನ್ನು ತೆರವುಗೊಳಿಸಿ' ಎಂದು ಪತ್ರದಲ್ಲಿ ಕೇಳಿಕೊಂಡಿದ್ದಾರೆ.
-toi

loading...

No comments