ಜಾಧವ್ ಹಿಂದೂಸ್ತಾನದ ಪುತ್ರ : ಸುಷ್ಮಾ ಸ್ವರಾಜ್
ಮರಣದಂಡನೆ ವಿಧಿಸಿದರೆ ಪಾಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ
ನವದೆಹಲಿ: ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ, ಪಾಕಿಸ್ತಾನದಲ್ಲಿ ಸೆರೆಯಲ್ಲಿರುವ ಕುಲಭೂಷಣ್ ಜಾಧವ್ ಅವರಿಗೆ ನ್ಯಾಯ ಒದಗಿಸಲು ಅಗತ್ಯ ನಡೆ ಸ್ವೀಕರಿಸಲಾಗುವುದು ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭರವಸೆ ನೀಡಿಡಿದ್ದಾರೆ.
ಪಾಕಿಸ್ತಾನದಲ್ಲಿ ಸೆರೆಯಲ್ಲಿರುವ ಕುಲಭೂಷಣ್ ಜಾಧವ್ ಅವರಿಗೆ ಅಲ್ಲಿನ ಸೇನಾ ನ್ಯಾಯಾಲಯ ಮರಣದಂಡನೆ ವಿಧಿಸಿರುವುದನ್ನು ಖಂಡಿಸಿದ ಸುಷ್ಮಾ, ಪಾಕಿಸ್ತಾನವು ಮರಣ ದಂಡನೆ ಜಾರಿಗೊಳಿಸಲು ಮುಂದಾದರೆ ಉಭಯ ರಾಷ್ಟ್ರಗಳ ಮೈತ್ರಿ ಮೇಲೆ ಇದು ಪರಿಣಾಮ ಬೀರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕುಲಭೂಷಣ್ ಜಾಧವ್ ಅವರು ತಪ್ಪು ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ, ಪಾಕಿಸ್ತಾನ ಈಗ ಮಾಡಲು ಮುಂದಾಗಿರುವುದು ‘ಪೂರ್ವಯೋಜಿತ ಕೊಲೆ’ ಎಂದು ಸುಷ್ಮಾ ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ಜಾಧವ್ ಅವರು ಹಿಂದೂಸ್ತಾನದ ಪುತ್ರ, ಅವರನ್ನು ಕಾಪಾಡಲು ಭಾರತ ಸರ್ಕಾರ ಬದ್ಧವಾಗಿದೆ. ಒಂದು ವೇಳೆ ಪಾಕಿಸ್ತಾನ ಜಾಧವ್ ಅವರಿಗೆ ಮರಣದಂಡನೆ ವಿಧಿಸಿದರೆ, ಮುಂದಿನ ಪರಿಣಾಮಗಳನ್ನು ಪಾಕ್ ಎದುರಿಸಬೇಕಾಗುತ್ತದೆ ಎಂದು ಸುಷ್ಮಾ ಗುಡುಗಿದ್ದಾರೆ.
ಜಾಧವ್ ಅವರನ್ನು 2016ರ ಮಾರ್ಚ್ 3ರಂದು ಭದ್ರತಾ ಅಧಿಕಾರಿಗಳು ಬಲೂಚಿಸ್ತಾನದಲ್ಲಿ ಬಂಧಿಸಿದ್ದರು ಎಂದು ಪಾಕಿಸ್ತಾನ ಹೇಳುತ್ತಿದೆ. ಆದರೆ ಅವರು ಪಾಕಿಸ್ತಾನಕ್ಕೆ ಹೇಗೆ ತಲುಪಿದರು ಮತ್ತು ಅವರು ಅಲ್ಲಿ ಹೇಗಿದ್ದರು ಎಂಬ ಬಗ್ಗೆ ನಂಬಿಕೆ ಬರುವ ಯಾವುದೇ ವಿವರಣೆಯನ್ನು ಪಾಕಿಸ್ತಾನ ನೀಡಿಲ್ಲ.
-prajavani
loading...
No comments