ರೌಡಿಶೀಟರ್ ಖುರೇಷಿ ಹೆಸರನ್ನು ಬಳಸಿ ಯಾರೂ ನಾಯಕರಾಗುವ ಅಗತ್ಯವಿಲ್ಲ’
pfi ಗೆ ತಿರುಗೇಟು ನೀಡಿದ ಕಾಂಗ್ರೆಸ್
ಮಂಗಳೂರು: ನ್ಯಾಯಾಂಗ ಬಂಧನದಲ್ಲಿರುವ ರೌಡಿ ಶೀಟರ್ ಅಹ್ಮದ್ ಖುರೇಷಿ ಕುರಿತ ವಿವಾದವನ್ನು ಬಳಸಿಕೊಂಡು ಯಾರೂ ನಾಯಕರಾಗುವುದು ಬೇಡ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ವಕ್ತಾರ ಶಾಹುಲ್ ಹಮೀದ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ಯತೀತ ತತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇಲ್ಲಿನ ಜನಪ್ರತಿನಿಧಿಗಳ ವಿರುದ್ಧ ವೃಥಾ ಆರೋಪ ಹೊರಿಸುವ ಮೂಲಕ ಅಲ್ಪಸಂಖ್ಯಾತರ ದಾರಿ ತಪ್ಪಿಸುವ ಅಗತ್ಯ ಇಲ್ಲ ಎಂದರು.
ಯುನೈಟೆಡ್ ಮುಸ್ಲಿಂ ಫ್ರಂಟ್ ಹೆಸರಿನಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ ವ್ಯಕ್ತಿಗಳು ಉಸ್ತುವಾರಿ ಸಚಿವರ ಸಹಿತ ಕಾಂಗ್ರೆಸ್ ಮುಖಂಡರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿದ್ದಾರೆ. ಈ ಮುಖಂಡರಿಂದ ಪ್ರಯೋಜನ ಪಡೆದವರೇ ಈಗ ತಿರುಗಿಬಿದ್ದಿದ್ದಾರೆ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಮೇಯರ್ ಅಶ್ರಫ್ ಹೆಸರನ್ನು ಉಲ್ಲೇಖಿಸದೆ ಅವರ ವಿರುದ್ಧ ಕಿಡಿಕಾರಿದರು. ಇಂತಹ ಹೇಳಿಕೆಗಳು ಮುಸ್ಲಿಂ ಸಮುದಾಯದ ಒಗ್ಗಟ್ಟನ್ನು ಮುರಿಯುವ ಹುನ್ನಾರವಾಗಿದೆ. ಈ ಜಿಲ್ಲೆಯಲ್ಲಿ ಶಾಂತಿ ಸಾಮರಸ್ಯ ನೆಲೆಸಿದೆ. ಅದನ್ನು ಕದಡಿಸಲು ಕೆಲವರು ಈ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಕೋಮು ಶಕ್ತಿಗಳ ವಿರುದ್ಧ ಉಸ್ತುವಾರಿ ಸಚಿವ ರಮಾನಾಥ ರೈ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಖುರೇಷಿ ವಿಚಾರದಲ್ಲಿ ಸಚಿವ ಖಾದರ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಸಚಿವ ರಮಾನಾಥ ರೈ ಈ ಬಗ್ಗೆ ಸಿಐಡಿ ತನಿಖೆ ನಡೆಸುವಂತೆ ಸರ್ಕಾರವನ್ನು ಒಪ್ಪಿಸಿದ್ದಾರೆ. ಹೀಗಿರುವಾಗ ಕಾಂಗ್ರೆಸಿಗರು ಏನೂ ಮಾಡಿಲ್ಲ ಎಂದು ಆರೋಪಿಸುವುದು ಸರಿಯಲ್ಲ. ನಾವು ಎಂದೆಂದಿಗೂ ಸಚಿವ ರಮಾನಾಥ ರೈಗೆ ಶಕ್ತಿ ನೀಡಲಿದ್ದೇವೆ ಎಂದು ಅವರು ಹೇಳಿದರು.
ಅಹ್ಮದ್ ಖುರೇಷಿ ಮೇಲೆ ಪೊಲೀಸ್ ದೌರ್ಜನ್ಯ ನಡೆಸಲಾಗಿದೆ ಎಂಬ ವ್ಯವಸ್ಥಿತ ಪ್ರಚಾರ ನಡೆಯುತ್ತಿದೆ. ದೌರ್ಜನ್ಯ ನಡೆದಿದ್ದರೆ ಸಿಐಡಿ ತನಿಖೆಯಲ್ಲಿ ಗೊತ್ತಾಗುತ್ತದೆ. ಅದು ಬಿಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಖುರೇಷಿ ಆರೋಗ್ಯದ ಬಗ್ಗೆ ಕಳವಳಕಾರಿ ಹುಸಿ ಸಂಗತಿಗಳನ್ನು ಉದ್ದೇಶಪೂರ್ವಕವಾಗಿ ಹಬ್ಬಿಸಲಾಗುತ್ತಿದೆ. ಖುರೇಷಿಗೆ ಅನ್ಯಾಯವಾದರೆ ಖಂಡಿತವಾಗಿ ನ್ಯಾಯ ಸಿಗುತ್ತದೆ. ಪೊಲೀಸರು ಖುರೇಷಿಯನ್ನು ಒಂದು ವಾರಗಳ ಕಾಲ ಅಕ್ರಮವಾಗಿ ವಶದಲ್ಲಿರಿಸಿ ದೌರ್ಜನ್ಯ ನಡೆಸಿದ್ದರೆ ಅದು ತಪ್ಪು. ಈ ವಿಚಾರವನ್ನು ಉಸ್ತುವಾರಿ ಸಚಿವರೊಂದಿಗೆ ಹೋಗಿದ್ದಾಗ ಪೊಲೀಸ್ ಕಮಿಷನರ್ ಗಮನಕ್ಕೆ ತಂದಿದ್ದೇವೆ ಎಂದು ಎಂ.ಎಸ್.ಮಹಮ್ಮದ್ ಸ್ಪಷ್ಟಪಡಿಸಿದರು.
loading...
No comments