Breaking News

ಗಣ್ಯ ವ್ಯಕ್ತಿಗಳ ಜನ್ಮ ದಿನಾಚರಣೆಯಂದು ಶಾಲಾ ಮಕ್ಕಳಿಗೆ ರಜೆ ನೀಡಬೇಡಿ : ಯೋಗಿ


ಲಖನೌ: ಗಣ್ಯ ವ್ಯಕ್ತಿಗಳ ಜನ್ಮ ದಿನಾಚರಣೆಯಂದು ಶಾಲಾ ಮಕ್ಕಳಿಗೆ ರಜೆ ನೀಡದೆ, ಆ ದಿನದಂದು ಅವರಿಗೆ ಗಣ್ಯರ ಕುರಿತು ಪಾಠ ಮಾಡಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸೂಚಿಸಿದ್ದಾರೆ.
ಡಾ.ಬಿ.ಆರ್‌ ಅಂಬೆಡ್ಕರ್‌ರವರ 126 ನೇ ಜಯಂತಿಯ ಪ್ರಯುಕ್ತ ಮಾತನಾಡಿದ ಅವರು, ಶಾಲೆಗಳ ಶೈಕ್ಷಣಿಕ ಅವಧಿ ಕುಂಠಿತಗೊಳ್ಳುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ''ಜಯಂತಿಗಳಂದು ಶಾಲೆಗೆ ರಜೆ ನೀಡದೆ ಮಕ್ಕಳಿಗೆ ಆ ವ್ಯಕ್ತಿಗಳ ಕುರಿತು 2 ಗಂಟೆಗಳ ಕಾಲ ಪಾಠ ಮಾಡಬೇಕು,'' ಎಂದರು.
''ಜಯಂತಿಗಳಿಗೆ ರಜೆ ನೀಡುವುದರಿಂದ 220 ದಿನಗಳ ಶೈಕ್ಷಣಿಕ ಅವಧಿ ಕೇವಲ 120 ದಿನಗಳಿಗೆ ಇಳಿಯುತ್ತದೆ. ಒಂದು ವೇಳೆ ಇದೇ ಪದ್ದತಿ ಮುಂದುವರೆದಲ್ಲಿ ಶಾಲೆಗಳಲ್ಲಿ ಪಾಠ ಮಾಡಲು ಸಮಯವೇ ಇರುವುದಿಲ್ಲ,'' ಎಂದು ಆದಿತ್ಯನಾಥ್‌ ಅಭಿಪ್ರಾಯಪಟ್ಟಿದ್ದಾರೆ. ಗಣ್ಯರ ಜೀವನ ಚರಿತೆ, ದೇಶಕ್ಕಾಗಿ ಅವರು ನೀಡಿದ ಕೊಡುಗೆಗಳನ್ನು ಮಕ್ಕಳಿಗೆ ತಿಳಿಸಿ ಸ್ಪೂರ್ತಿ ತುಂಬಬೇಕು ಎಂದ ಅವರು, ತಮ್ಮ ಸರಕಾರ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ, ಪುಸ್ತಕಗಳು ಮತ್ತು ಪಠ್ಯಪುಸ್ತಕಗಳನ್ನು ನೀಡಲಿದೆ ಎಂದು ತಿಳಿಸಿದ್ದಾರೆ.
ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ದೇಶದ ಹಿತಾಸಕ್ತಿ ರಹಿತ ರಾಜಕೀಯವನ್ನು ವಿರೋಧಿಸುತ್ತಿದ್ದರು ಎಂದ ಆದಿತ್ಯನಾಥ್‌, '' ಸರಕಾರ ರಾಜ್ಯದ 22 ಕೋಟಿ ಜನತೆಯ ಸಂರಕ್ಷಣೆಗೆ ಬದ್ಧವಾಗಿದೆ, ಯಾರಿಗೂ ಕಾನೂನು ಮೀರಲು ಅವಕಾಶ ನೀಡುವುದಿಲ್ಲ. ಅನ್ಯಾಯ ಮತ್ತು ತಾರತಮ್ಯಕ್ಕೆ ನಮ್ಮಲ್ಲಿ ಅವಕಾಶವಿಲ್ಲ,'' ಎಂದು ಹೇಳಿಕೆ ನೀಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಒಟ್ಟು 42 ಸಾರ್ವಜನಿಕ ರಜೆಗಳಿದ್ದು, ಅವುಗಳಲ್ಲಿ 17 ಜಯಂತಿಗಳ ಪ್ರಯುಕ್ತ ನೀಡಲಾಗಿದೆ. ಈ ಮುಂಚೆ ಅಧಿಕಾರದಲ್ಲಿದ್ದ ಸಮಾಜವಾದಿ ಪಕ್ಷ ಮಾಜಿ ಪ್ರಧಾನಿ ಚಂದ್ರಶೇಖರ್‌ರ ಜನ್ಮ ದಿನಾಚರಣೆ ಸೇರಿದಂತೆ ಒಟ್ಟು ಐದು ರಜೆಗಳನ್ನು ಹೊಸದಾಗಿ ಘೋಷಿಸಿತ್ತು.
toi

loading...

No comments