ಸಮರಕ್ಕೆ ಸನ್ನದ್ಧರಾಗಲು ಕರೆ ನೀಡಿದ ಏರ್ ಚೀಫ್ ಮಾರ್ಷಲ್
ನವದೆಹಲಿ: ಭಾರತೀಯ ವಾಯು ಪಡೆಯ (ಐಎಎಫ್) ಸುಮಾರು 12 ಸಾವಿರ ಅಧಿಕಾರಿಗಳಿಗೆ ವೈಯಕ್ತಿಕ ಪತ್ರ ಬರೆದಿರುವ ಅದರ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿ.ಎಸ್. ಧನೋವಾ, ‘ನಮ್ಮ ನೆಲದಲ್ಲಿ ಮತ್ತು ಗಡಿಯಾಚೆ ಇರುವ ದ್ರೋಹಿಗಳ ವಿರುದ್ಧ ಸಮರಕ್ಕೆ ಸನ್ನದ್ಧರಾಗಿ’ ಎಂದು ಕರೆ ನೀಡಿದ್ದಾರೆ.
ಈ ಪತ್ರವನ್ನು ಮಾರ್ಚ್ 30ರಂದು ಅವರು ಬರೆದಿದ್ದಾರೆ. ಸೇನಾ ಶಿಬಿರಗಳ ಮೇಲೆ ಉಗ್ರರು ನಡೆಸುತ್ತಿರುವ ದಾಳಿಗಳು ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಧನೋವಾ ಪತ್ರ ಬರೆದಿದ್ದಾರೆ.
‘ಸದ್ಯದ ಸನ್ನಿವೇಶದಲ್ಲಿ, ಪರೋಕ್ಷ ವಾದಂತಹ ಬೆದರಿಕೆಗಳು ಹಿಂದೆಂದಿ ಗಿಂತಲೂ ಹೆಚ್ಚು ಪ್ರಮಾಣದಲ್ಲಿ ಬರುತ್ತಿವೆ. ಅದಕ್ಕಾಗಿ, ಲಭ್ಯವಿರುವ ಸಂಪನ್ಮೂಲವನ್ನೇ ಬಳಸಿಕೊಂಡು ತಕ್ಷಣವೇ ಕಾರ್ಯಾಚರಣೆಗೆ ನಾವು ಸಿದ್ಧರಾಗಿರಬೇಕು. ಇದನ್ನೇ ಗಮನದಲ್ಲಿಟ್ಟುಕೊಂಡು ತರಬೇತಿಗಳನ್ನು ನಡೆಸುವ ಅಗತ್ಯವಿದೆ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಧನೋವಾ ಅವರು ಪಾಕಿಸ್ತಾನದ ಹೆಸರನ್ನು ಉಲ್ಲೇಖಿಸದಿದ್ದರೂ, ಅದು ನಡೆಸುತ್ತಿರುವ ‘ಪರೋಕ್ಷ ಯುದ್ಧ’ವನ್ನು ಉಲ್ಲೇಖಿಸಿಯೇ ಈ ರೀತಿ ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಭಾರತೀಯ ವಾಯುಪಡೆಯ ಮುಖ್ಯಸ್ಥರೊಬ್ಬರು ತಮ್ಮ ಸಿಬ್ಬಂದಿಗೆ ವೈಯಕ್ತಿಕ ಪತ್ರ ಬರೆಯುತ್ತಿರುವುದು ಇದೇ ಮೊದಲು.
ಇದಕ್ಕೂ ಮೊದಲು, ಭೂಸೇನಾ ಮುಖ್ಯಸ್ಥರಾಗಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ 1950ರ ಮೇ 1ರಂದು ಮತ್ತು ಜನರಲ್ ಕೆ. ಸುಂದರ್‌ಜಿ 1986ರ ಫೆಬ್ರುವರಿ 1ರಂದು ತಮ್ಮ ಸಿಬ್ಬಂದಿಗೆ ವೈಯಕ್ತಿಕವಾಗಿ ಪತ್ರ ಬರೆದಿದ್ದರು.
ವಾಯುಪಡೆಯಲ್ಲಿ ಮಾನವ ಸಂಪನ್ಮೂಲ ಮತ್ತು ಅಗತ್ಯ ಸಲಕರಣೆಗಳ ಕೊರತೆ ಇರುವುದನ್ನು ಪರೋಕ್ಷವಾಗಿ ಪ್ರಸ್ತಾಪಿಸಿರುವ ಧನೋವಾ, ‘ನಮ್ಮದೇ ಆದಂತಹ ಮತ್ತು ಎದುರಾಳಿಗಳು ಹೊಂದಿರುವ ಹೊಸ ಹೊಸ ತಾಂತ್ರಿಕ ಸಾಮರ್ಥ್ಯಗಳನ್ನು ಮೀರಿ ನಿಲ್ಲದೇ ನಮಗೆ ಬೇರೆ ಆಯ್ಕೆಗಳಿಲ್ಲ. ಹಾಗಿದ್ದರೆ, ಮಾತ್ರ ನಾವು ವಿಭಿನ್ನ ದಾರಿಗಳನ್ನು ಅನುಸರಿಸಿ, ಯುದ್ಧದಲ್ಲಿ ಮೇಲುಗೈ ಸಾಧಿಸಬಹುದು’ ಎಂದು ಬರೆದಿದ್ದಾರೆ.
-prajavani
loading...
No comments