Breaking News

ಬೆಂಗಳೂರಿನಲ್ಲಿ ಅಕ್ರಮ ನೆಲೆ ಕಂಡ ಮೂವರು ಪಾಕಿಗಳ ಬಂಧನ



ಬೆಂಗಳೂರು : ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಇಬ್ಬರು ಮಹಿಳೆಯರು ಸೇರಿ ಮೂವರು ಪಾಕಿಸ್ತಾನಿ ಶಂಕಿತರನ್ನು ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕುಮಾರಸ್ವಾಮಿ ಲೇಔಟ್‌ನಲ್ಲಿ ತಲೆಮರೆಸಿಕೊಂಡಿದ್ದ ಪಾಕಿಸ್ತಾನದ ಮಹಿಳೆಯರಾದ ಖಾಸಿಬ್ ಶಂಷುದ್ದೀನ್, ಕಿರಣ್ ಗುಲಾಮಲಿ ಹಾಗೂ  ಮಹಮ್ಮದ್ ಷಿಹಾಬ್ ಎಂಬ ಶಂಕಿತರನ್ನು ಬಂಧಿಸಿ ಹೆಚ್ಚಿನ ವಿಚಾರಣೆ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರು ತಿಳಿಸಿದರು.

ಪಾಕಿಸ್ತಾನದ ಖತಾರ್‌‌ನಿಂದ ಮಸ್ಕಟ್ ಮೂಲಕ ಬಾಂಗ್ಲಾದ ಕಠ್ಮಂಡುವಿಗೆ ಬಂದು ಪಾಟ್ನಾ ಮೂಲಕ ನಗರಕ್ಕೆ ಬಂದು ಈ ಮೂವರು ಕಳೆದ 9 ತಿಂಗಳುಗಳಿಂದ ವಾಸ್ತವ್ಯ ಹೂಡಿದ್ದರು. ಇವರ ಜೊತೆಗೆ ಕೇರಳದ ಮಹಮ್ಮದ್ ಷಿಹಾಬ್ ಕೂಡ ನೆಲೆಸಿದ್ದ.

ಷಿಹಾಬ್ ಖಾಸಿಬ್ ಶಂಷುದ್ದೀನ್ ಸೋದರಿ ಸಮೀರ ಎಂಬಾಕೆಯನ್ನು ವಿವಾಹವಾಗಿರುವ ಮಾಹಿತಿ ದೊರೆತಿದ್ದು, ಇವರೆಲ್ಲರೂ ಆಧಾರ್ ಕಾರ್ಡ್, ಮತದಾರರ ಗುರುತಿನ ಪತ್ರ ಮಾಡಿಸಿಕೊಂಡಿದ್ದರು.

ಕೇರಳದ ಮಹಮ್ಮದ್ ಷಿಹಾಬ್, ಖಾಸಿಬ್ ಶಂಷುದ್ದೀನ್ ಸೋದರಿಯನ್ನು ದುಬೈನಲ್ಲಿ ವಿವಾಹವಾಗಿ ಮೂವರನ್ನು ನೇಪಾಳದ ಮೂಲಕ ಕರೆತರುವಲ್ಲಿ ಸಹಕರಿಸಿದ್ದ ಎನ್ನುವುದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

ಪಾಕ್ ಪ್ರಜೆಗಳು ಅಕ್ರಮವಾಗಿ ನೆಲೆಸಿರುವುದರ ಬಗ್ಗೆ ಕೇಂದ್ರ ಗೃಹ ಇಲಾಖೆ ಹಾಗೂ ಗುಪ್ತಚರ ಇಲಾಖೆಗೆ ಮಾಹಿತಿ ನೀಡಿದ್ದು , ಕೇಂದ್ರ ಗುಪ್ತಚರ ಅಧಿಕಾರಿಗಳು ಹಾಗೂ ಎನ್‍ಐಎ ತಂಡ ನಗರಕ್ಕೆ ಆಗಮಿಸಿ ಬಂಧಿತರ ವಿಚಾರಣೆ ನಡೆಸಲಿದೆ ಎಂದು ಅವರು ಹೇಳಿದರು.   ಪತ್ರಿಕಾಗೋಷ್ಠಿಯಲ್ಲಿ ಸಿಸಿಬಿಯ ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ರವಿ, ಹೆಚ್ಚುವರಿ ಪೊಲೀಸ್ ಆಯುಕ್ತರಾದ ಮಾಲಿನಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

No comments