Breaking News

ಕಲ್ಲಡ್ಕದಲ್ಲಿ ಖಾಕಿ ಸರ್ಪಗಾವಲು


ಮಂಗಳೂರು :ಸತತ ಕೋಮು ಘರ್ಷಣೆಯಿಂದ ನಲುಗಿ ಹೋದ ಕಲ್ಲಡ್ಕದಲ್ಲಿ ೧೫ ದಿನಗಳ ನಡುವೆ ಮತ್ತೆ ಗಲಭೆ ಮರುಕಳಿಸಿರುವುದು ಗಂಭೀರ ವಿಷಯ. ಘಟನೆಯ ಸಮಗ್ರ ತನಿಖೆ ನಡೆಸುವಂತೆ ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಅವರಿಗೆ ಜವಾಬ್ದಾರಿ ನೀಡಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಹೇಳಿದರು. ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಲ್ಲಡ್ಕದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಅಹಿತಕರ ಘಟನೆಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ಜಿಲ್ಲಾ ಎಸ್ಪಿ ಸ್ಥಳದಲ್ಲೇ ಮೊಕ್ಕಾಂ ಹೂಡುವಂತೆ ಸೂಚನೆ ನೀಡಲಾಗಿದೆ. ಪೊಲೀಸ್ ಪಡೆ ಸಮರ್ಥವಾಗಿದ್ದು, ದುಷ್ಕರ್ಮಿಗಳನ್ನು ಹತ್ತಿಕ್ಕಲು ಕ್ರಮ ತೆಗೆದುಕೊಳ್ಳುತ್ತಿದೆ ಎಂದರು.

ಶಾಂತಿ ನೆಲೆಸಬೇಕೆಂಬ ಉದ್ದೇಶದಿಂದ ಕೇವಲ ಬಂಟ್ವಾಳ, ಕಲ್ಲಡ್ಕ ಮಾತ್ರವಲ್ಲದೆ ಹಲವೆಡೆ ಜೂ. ೨೧ರವರೆಗೆ ೧೪೪ ಸೆಕ್ಷನ್ ಹಾಕಲಾಗಿದೆ. ಪ್ರತಿದಿನ ಪರಿಸ್ಥಿತಿ ಅವಲೋಕಿಸಿ ಸೆಕ್ಷನ್ ಬಗ್ಗೆ ನಿರ್ಧರಿಸಲಾಗುತ್ತಿದೆ. ಇದರಿಂದ ಜನರಿಗೆ ತೊಂದರೆ ಕೊಡುವುದು ಪೊಲೀಸ್ ಇಲಾಖೆಯ ಉದ್ದೇಶವಲ್ಲ ಎಂದರು. ಕಲ್ಲಡ್ಕ ಗಲಭೆಗೆ ಸಂಬಂಧಿಸಿ ಈತನಕ ೭ ಪ್ರಕರಣ ದಾಖಲಿಸಲಾಗಿದ್ದು, ೧೮ ಮಂದಿಯನ್ನು ಬಂಧಿಸಲಾಗಿದೆ. ಈ ಪ್ರಕರಣದ ಬಗ್ಗೆ ಎಸ್ಪಿ ಭೂಷಣ್ ಬೊರಸೆ ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಉಳಿದ ಆರೋಪಿಗಳ ಬಗ್ಗೆ ಶೋಧ ನಡೆಸುತ್ತಿದ್ದಾರೆ ಎಂದು ಅಲೋಕ್ ಮೋಹನ್ ತಿಳಿಸಿದರು.

No comments