Breaking News

ಅಬುಸಲೇಂ ಸೇರಿ ಐವರು ಅಪರಾಧಿಗಳು ಎಂದು ಘೋಷಿಸಿದ ಟಾಡಾ ವಿಶೇಷ ನ್ಯಾಯಾಲಯ



ಮುಂಬೈ : 1993ರಲ್ಲಿ ನಡೆದ ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿ ದೇಶದ್ರೋಹಿ ಗ್ಯಾಂಗ್‌ಸ್ಟರ್ ಅಬು ಸಲೇಂ ಸೇರಿದಂತೆ ಐವರನ್ನು ಟಾಡಾ ವಿಶೇಷ ನ್ಯಾಯಾಲಯ ಅಪರಾಧಿಗಳೆಂದು ಘೋಷಿಸಿದೆ.

ಅವನೊಂದಿಗೆ ಮುಸ್ತಫಾ ದೋಸಾ, ಫಿರೋಜ್ ಅಬ್ದುಲ್ ರಶೀದ್ ಖಾನ್, ತಹೀರ್ ಮರ್ಚೆಂಟ್, ಕರೀಮುಲ್ಲಾ ಶೇಕ್ ಮತ್ತು ರಿಯಾಜ್ ಸಿದ್ದಿಕಿ ಅವರುಗಳನ್ನು ನ್ಯಾಯಾಲಯ ಅಪರಾಧಿಗಳೆಂದು ತೀರ್ಪಿತ್ತಿದೆ. ಈ ಬಾಂಬ್ ಸ್ಫೋಟದಲ್ಲಿ 257 ಜನ ಸತ್ತಿದ್ದರು. 700ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

ಚಿತ್ರನಟ ಸಂಜಯ್ ದತ್‌ಗೆ ಶಸ್ತ್ರಾಸ್ತ್ರ ಪೂರೈಸಿದ ಆಪಾದನೆ ಹೊತ್ತಿದ್ದ ಅಬ್ದುಲ್ ಕಯ್ಯೂಮ್‌ನನ್ನು ಆರೋಪದಿಂದ ವಿಮುಕ್ತಿಗೊಳಿಸಲಾಗಿದೆ. ಮತ್ತೊಬ್ಬ ಆರೋಪಿ ರಿಯಾಜ್ ಸಿದ್ದಿಕಿ ವಿರುದ್ಧವೂ ಸಾಕ್ಷ್ಯಾಧಾರ ಒದಗಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಅಬು ಸಲೇಂಗೆ ಪೋರ್ಚುಗಲ್‌ಗೆ ಕೊಟ್ಟಿರುವ ಭರವಸೆಯನ್ನು ಮೀರಿ ಮರಣದಂಡನೆ ವಿಧಿಸಲು ಯಾರ ಅಡ್ಡಿಯೂ ಇಲ್ಲವೆಂದು ಟಾಡಾ ನ್ಯಾಯಾಧೀಶ ಕೋಡೆ ಪ್ರಕಟಿಸಿದ್ದಾರೆ.

ಅಬು ಸಲೇಂ ಮೇಲಿದ್ದ ಮೊದಲಿನ ಕೆಲವು ಟಾಡಾ ಆರೋಪಗಳನ್ನು ರದ್ದುಪಡಿಸಲಾಗಿದೆ.  ಅಬುಸಲೇಂ ಜತೆ ಈ ಐವರೂ ಸೇರಿ ಮುಂಬೈ ಸರಣಿ ಸ್ಫೋಟ ನಡೆಸಲು ಒಳ ಸಂಚು ರೂಪಿಸಿದ್ದರೆಂದು ಟಾಡಾ ಕೋರ್ಟ್ ಬಲವಾಗಿ ನಂಬುತ್ತದೆ ಎಂದು ಅವರು ಹೇಳಿದ್ದಾರೆ.

ಅಬು ಸಲೇಂನನ್ನು ಪೋರ್ಚುಗಲ್ ದೇಶಭ್ರಷ್ಟನನ್ನಾಗಿ ಹೊರ ಹಾಕಿತ್ತು. ಈತನ ಮೇಲೆ ಒಳ ಸಂಚು, ಭಯೋತ್ಪಾದನೆ ಮತ್ತು ಶಸ್ತ್ರಾಸ್ತ್ರ ಸಾಗಾಟದ ಆರೋಪಗಳನ್ನು ಹೊರಿಸಲಾಗಿದೆ. ಈತನಿಗೆ ಭಾರತೀಯ ದಂಡ ಸಂಹಿತೆ 326, 324, 436, 201 ಮತ್ತು 212, 302, 307ರ ಪ್ರಕಾರ ಶಿಕ್ಷೆ ವಿಧಿಸಲಾಗಿದೆ.

ಕರೀಮುಲ್ಲಾ ಶೇಖ್ ಶಸ್ತ್ರಾಸ್ತ್ರಗಳನ್ನು ಕಳ್ಳ ಸಾಗಾಣಿಕೆ ಮೂಲಕ ತರಿಸಿಕೊಂಡು ಭಯೋತ್ಪಾದನೆಯಲ್ಲಿ ಪಿತೂರಿ ನಡೆಸಿದ್ದಾನೆಂದೂ ಕೋರ್ಟ್ ಹೇಳಿದೆ.  ಈತ ರಾಯಗಡ ಜಿಲ್ಲೆಯ ಶೆಖಾಡಿ ಕರಾವಳಿಯಿಂದ ದೇಶದೊಳಕ್ಕೆ ಅಕ್ರಮವಾಗಿ ಶಸ್ತ್ರಾಸ್ತ್ರ ಸಾಗಾಟ ಮಾಡಿದ್ದಾನೆಂದೂ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

ಈ ಪ್ರಕರಣದಲ್ಲಿ ಇಂದು 2ನೇ ಹಂತದ ವಿಚಾರಣೆಯ ತೀರ್ಪನ್ನು ನ್ಯಾಯಾಲಯ ಪ್ರಕಟಿಸಿತು.  ರಂಜಾನ್ ಹಬ್ಬದ ನಂತರ ಶಿಕ್ಷೆ ಪ್ರಕಟಿಸಬೇಕೆಂದು 7 ಆರೋಪಿಗಳ ಪರವಾಗಿ ಅವರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಮೇ 29 ರಂದು ತಿರಸ್ಕರಿಸಿತ್ತು. ಆದರೆ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಪ್ರಕಟಿಸಿಲ್ಲ. 24 ವರ್ಷದ ನಂತರ ಅಬು ಸಲೇಂ ಮತ್ತು ಇತರ 6 ಮಂದಿಯ ಜೀವ ಈಗ ಕೋರ್ಟಿನ ಶಿಕ್ಷಾ ಪ್ರಮಾಣದ ತೀರ್ಪನ್ನು ಅವಲಂಬಿಸಿದೆ. 2006 ರಲ್ಲಿ ಕೋರ್ಟ್ 100 ಜನರನ್ನು ಅಪರಾಧಿಗಳನ್ನಾಗಿ ಮಾಡಿತ್ತು. 23 ಆರೋಪಿಗಳನ್ನು ಖುಲಾಸೆ ಮಾಡಿತ್ತು. 99 ಜನರಿಗೆ ಶಿಕ್ಷೆ ವಿಧಿಸಿ, ಒಬ್ಬನನ್ನು ಬಿಡುಗಡೆ ಮಾಡಿತ್ತು. 2015ರ ಜುಲೈನಲ್ಲಿ ಈ ಪ್ರಕರಣಕ್ಕೆ ಸೇರಿದ್ದ ಯಾಕೂಬ್ ಮೆಮನ್‌ಗೆ ಮರಣದಂಡನೆ ವಿಧಿಸಲಾಗಿತ್ತು.

No comments