Breaking News

ಹೃದ್ರೋಗದ ಬಗ್ಗೆ ಕೆಲವು ಮಾಹಿತಿಗಳು


ಹೃದ್ರೋಗ  ಈಗೀಗ ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ.ದೇಶದಲ್ಲಿ ನಡೆದ ಅನೇಕ ಅಧ್ಯಯನಗಳ ಪ್ರಕಾರ, ನಮ್ಮ  ಮಹಾನಗರಗಳಲ್ಲಿ (ಬೆಂಗಳೂರು, ದೆಹಲಿ, ಜೈಪುರ , ಮುಂಬೈ , ಚೆನ್ನೈ ಅಥವಾ ತಿರುವನಂತಪುರ ) 35 ವರ್ಷ ವಯಸ್ಸು ಮೀರಿದ ಜನಸಮೂಹದಲ್ಲಿ ಸುಮಾರು 10 ಪ್ರತಿಶತದಷ್ಟು ಜನರಿಗೆ ಹೃದಯ ರೋಗವಿದೆ.

ಗ್ರಾಮೀಣ ಭಾರತದಲ್ಲಿ ಈ ಸಂಖ್ಯೆ ಸ್ವಲ್ಪ  ಕಡಿಮೆಯಿದ್ದರೂ, ಅಲ್ಲಿಯೂ ಅದು ಏರುತ್ತಿರುವ ಪ್ರವೃತ್ತಿಯನ್ನೇ ತೋರುತ್ತಿದೆ (ಸುಮಾರು 4 ಪ್ರತಿಶತ ).

ದೀರ್ಘ‌ಕಾಲಿಕ ರೋಗಗಳ ನಿಯಂತ್ರಣ ಕೇಂದ್ರವು 2004ರಲ್ಲಿ ಪ್ರಕಟಿಸಿದ  ದತ್ತಾಂಶಗಳಲ್ಲಿನ ಅಂಕಿ-ಅಂಶಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಈ ಅಂಕಿಗಳು, ಗ್ರಾಮೀಣ ಹಾಗೂ ನಗರ ಪ್ರದೇಶಗಳೆರಡರಲ್ಲೂ ಸಮನಾಗಿವೆ.
ಅಪಾಯ ಪೂರಕ ಅಂಶಗಳು
ಅಪಾಯ ಪೂರಕ ಅಂಶಗಳನ್ನು  2 ವರ್ಗಗಳಾಗಿ ವಿಂಗಡಿಸಲಾಗಿದೆ.

ಪ್ರತಿಕೂಲ ಅಪಾಯ ಪೂರಕ ಅಂಶಗಳು
*ಧೂಮಪಾನ ಮಾಡುವವರು.

*ಹೆಚ್ಚಿದ ರಕ್ತದ ಒತ್ತಡ.

*ಹೆಚ್ಚಿದ ಮಟ್ಟಗಳಲ್ಲಿರುವ ಕೊಲೆಸ್ಟರಾಲ್‌ (ಏರಿದ  ಎಪಿಒಬಿ/ಎಪಿಒಎ1ಅನುಪಾತ ).

*ಮಧುಮೇಹ.

*ಸೊಂಟದ ಭಾಗದ ಬೊಜ್ಜು.

*ಮನೋ ಸಾಮಾಜಿಕ ಒತ್ತಡಗಳು.
ರಕ್ಷಣಾತ್ಮಕ ಅಂಶಗಳು
*ಪ್ರತಿದಿನ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದು.

*ನಿಯಮಿತ ವ್ಯಾಯಾಮ.

*ಒಂದು ವೇಳೆ ಮದ್ಯ ಸೇವಿಸುವವರಾಗಿದ್ದರೆ, ಅದನ್ನು ಕಡಿಮೆಮಾಡುವುದು.

ಜಾಗತಿಕವಾಗಿ ನೋಡಿದರೆ, ಮದ್ಯಸೇವನೆಗೆ ಹೊರತಾಗಿ, ಈ ಎಲ್ಲ  9 ಅಪಾಯ ಪರ/ವಿರುದ್ಧ ಅಂಶಗಳಿಗೂ, ಹೃದಯಾಘಾತಗಳಿಗೂ ಬಹಳ ಗಣನೀಯವಾದ  ಸಂಬಂಧವಿದೆ. ಮದ್ಯ ಸೇವನೆಯ ಅಂಕಿಅಂಶಗಳು ಅಷ್ಟೇನೂ  ಗಣನೀಯವಾಗಿಲ್ಲ. ಈ ಅಪಾಯಗಳು ಜಗತ್ತಿನಾದ್ಯಂತ  ಯಾವುದೇ ಧರ್ಮ,
ಜನಾಂಗ ಮತ್ತು ಲಿಂಗದವರಲ್ಲಿ ಏಕ ಪ್ರಕಾರವಾಗಿದ್ದವು.

ಜಾಗತಿಕವಾಗಿ ಅತ್ಯಂತ ಬಲವಾದ ಅಪಾಯ ಸೂಚಕವೆಂದರೆ. ಎಪಿಒಬಿ/ಎಪಿಒಎ1 ಅನುಪಾತ. (ಕೊಲೆಸ್ಟರಾಲ್‌ ಅಪಾಯದ ಹೆಚ್ಚು  ವಿಶ್ವಾಸನೀಯ ಸೂಚಕ). ನಂತರದ ಸ್ಥಾನ ಧೂಮಪಾನದ್ದು . ಇವುಗಳಿಂದ ಹೃದಯಾಘಾತದ ಸಾಧ್ಯತೆ ಅನುಕ್ರಮವಾಗಿ  4 ಪಟ್ಟು ಮತ್ತು 3 ಪಟ್ಟು ಹೆಚ್ಚುತ್ತದೆ.

ಮೇದಸ್ಸು ಮತ್ತು ಧೂಮಪಾನಕ್ಕಿರುವ  ಅಪಾಯಕಾರಿ ಸಂಬಂಧ ಕೂಡ ಈಗಾಗಲೇ ಸಾಬೀತಾಗಿದೆ.
ವಯಸ್ಕರಿಗಿಂತ ಯುವಜನರಲ್ಲಿ  ಅಂದರೆ, ಪುರುಷರಾದರೆ 55, ಮಹಿಳೆಯರಾದರೆ 65 ವರ್ಷಗಳಿಗಿಂತ ಕಡಿಮೆಯವರಲ್ಲಿ ಇದು ಹೆಚ್ಚು ಚೆನ್ನಾಗಿ ಗೋಚರವಾಗುತ್ತದೆ.

ಅಪಾಯ ಪ್ರತಿಬಂಧ ಹೇಗೆ?
ಹೃದಯಾಘಾತಗಳ ಮತ್ತು ಸಂಬಂಧಿತ ಸವಾಲುಗಳ ಅಪಾಯಗಳನ್ನು  ಕಡಿಮೆ ಮಾಡಲು ನೆನಪಿಡಬೇಕಾದ ಅಂಶಗಳು

ಹೀಗಿವೆ -
ಧೂಮಪಾನ  ಇನ್ನೂ ಮಾಡುತ್ತಿರುವಿರಾ?
ಒಂದು ಸಿಗರೇಟನ್ನು ಸೇದಿದರೆ, ನಿಮ್ಮ ಆಯಸ್ಸು 11 ನಿಮಿಷಗಳಷ್ಟು  ಮೊಟಕಾಗುತ್ತದೆ. ಪರೋಕ್ಷವಾಗಿ ಧೂಮಪಾನ ಮಾಡುವವರು ಕೂಡ ಹೃದಯಾಘಾತಗಳಿಗೆ ಈಡಾಗುವ ಅಪಾಯ ಸಾಧ್ಯತೆ 90 ಪ್ರತಿಶತದಷ್ಟು  ಹೆಚ್ಚು.

ಯಾವುದೇ ವಯಸ್ಸಿನಲ್ಲಿ  ಧೂಮಪಾನ ತ್ಯಜಿಸಿದರೂ, 3 ವರ್ಷಗಳಷ್ಟು  ಅಪಾಯ  ಕಡಿಮೆಯಾಗುತ್ತದೆ.  ಈ ದುರಭ್ಯಾಸವನ್ನು  ಬಿಡಲು ಎಂದಿಗೂ ಕಾಲ ಮೀರಿಲ್ಲ . ಧೂಮಪಾನದಲ್ಲಿ ಕಡಿತದಿಂದ  ಖಂಡಿತ ಒಳ್ಳೆಯದಾಗುತ್ತದೆ. ಸಂಪೂರ್ಣವಾಗಿ ಬಿಟ್ಟುಬಿಟ್ಟರೆ ಬಹಳ ಒಳ್ಳೆಯದು.
ರಕ್ತದ ಒತ್ತಡ
ರಕ್ತದೊತ್ತಡ ಸ್ವಲ್ಪ ಹೆಚ್ಚಾದರೂ, ಅದು ಪಾರ್ಶ್ವವಾತ ಮತ್ತು ಹೃದಯಾಘಾತಗಳ ಸಾಧ್ಯತೆಗಳನ್ನು ಏರಿಸಿಬಿಡುತ್ತದೆ. ಇದನ್ನು  ಸೋಂಕುಶಾಸ್ತ್ರ ಅಧ್ಯಯನಗಳು ಮತ್ತು ಜೀವ  ವಿಮಾ ಅಂಕಿ-ಅಂಶಗಳು ರುಜುವಾತು  ಮಾಡಿವೆ.
ರಕ್ತದ ಒತ್ತಡದ ಬಗ್ಗೆ ಕೆಲ ಮಿಥ್ಯೆಗಳು
ರಕ್ತದ ಒತ್ತಡ  ವಯಸ್ಸಿನೊಂದಿಗೆ ಹೆಚ್ಚುತ್ತದೆ ಮತ್ತು ಇದೊಂದು ಸಾಧಾರಣ ಸಂಗತಿ.

60 ವರ್ಷ ಪ್ರಾಯದ ವ್ಯಕ್ತಿಯ ಸಹಜ ಬಿಪಿ 160, 80 ವರ್ಷದವರಲ್ಲಿ 180 ಎಂಬುದು ಸತ್ಯವಲ್ಲ. ಯಾವುದೇ ವಯಸ್ಸಿನವರಿಗೂ ಸಹಜ ಬಿಪಿ 120ಕ್ಕಿಂತ ಕಡಿಮೆಯೇ ಇರಬೇಕು.

ಯಾವುದೇ ರೋಗಗಳಿಲ್ಲದ, ಬಿಪಿ ಕಡಿಮೆಯಿರುವ ವ್ಯಕ್ತಿಗಳು  ಬಹುಶಃ ದೀರ್ಘ‌ ಮತ್ತು ಆರೋಗ್ಯಕರ ಜೀವನವನ್ನು ನಡೆಸುವ ಸಾಧ್ಯತೆಗಳಿರುವ ಅದೃಷ್ಟಶಾಲಿಗಳು. ಅಂತಹವರು ಸುಮ್ಮನೆ ಟಾನಿಕ್‌ ಅಥವಾ ಬಿಪಿ ಹೆಚ್ಚಿಸುವ ಪ್ರಯತ್ನಗಳ ಮೇಲೆ ಹಣ ಪೋಲು ಮಾಡಬಾರದು.
ಬಿಪಿ-ತಗ್ಗಿಸುವ ಔಷಧಿಗಳನ್ನು ತೆಗೆದುಕೊಳ್ಳಲು ಸೂಚ‌ನೆಗಳು
ಯಾವುದೇ ವಯೋಮಾನದವರಿಗೆ ಪ್ರಶಸ್ತವಾದ ಬಿಪಿ  ಎಂದರೆ 120/80ಕ್ಕಿಂತ ಕಡಿಮೆಯಿರುವುದು. ಸಾಮಾನ್ಯವಾಗಿ ಬಿಪಿ 140/85ಕ್ಕಿಂತ ಹೆಚ್ಚಿದ್ದರೆ ಔಷಧಿಗಳನ್ನು ಸೂಚಿಸಲಾಗುತ್ತದೆ.

ಕೆಲವು ಸಂದರ್ಭಗಳಲ್ಲಿ 130/80 ಇದ್ದರೂ ಔಷಧಿಗಳನ್ನು ಸೂಚಿಸಲಾಗುತ್ತದೆ. ಅಂತಹ ಕೆಲವು ಸಂದರ್ಭಗಳು ಇಲ್ಲಿವೆ.

*ಮಧುಮೇಹವಿರುವ ರೋಗಿಗಳು.

*ಮೂತ್ರಪಿಂಡ ಕಾಯಿಲೆ ಮತ್ತು ಮೂತ್ರದಲ್ಲಿ  ಯೂರಿಯಾ ಮತ್ತು ಕ್ರಿಯಾಟಿನೀನ್‌ ಅಂಶ ಹೆಚ್ಚಿರುವ ರೋಗಿಗಳು.

*ಈಗಾಗಲೇ ಹೃದಯ ರೋಗ ಅಥವಾ ಪಾರ್ಶ್ವವಾತ ಪೀಡಿತ ರೋಗಿಗಳು.
ರಕ್ತದೊತ್ತಡ ನಿಯಂತ್ರಣ
ರಕ್ತದೊತ್ತಡವನ್ನು ನಿಯಂತ್ರಿಸಲು, ನಿಯಮಿತ ವ್ಯಾಯಾಮ, ದಿನಕ್ಕೆ 4-5 ಗ್ರಾಂಗಳಿಗಿಂತ ಹೆಚ್ಚು ಉಪ್ಪು
ಸೇವಿಸದಿರುವುದು, ತಾಜಾ ಹಣ್ಣುಗಳು  ಮತ್ತು  ಎಲೆಗಳುಳ್ಳ ತರಕಾರಿಗಳು, ಮದ್ಯಪಾನ  ಮಾಡದಿರುವುದು ಅಥವಾ ಮದ್ಯಪಾನ ಮಿತವಾಗಿರುವುದು, ತೂಕ  ಕಡಿಮೆಮಾಡಿಕೊಳ್ಳುವುದು ಅಗತ್ಯ.

ಕೊಲೆಸ್ಟರಾಲ್‌ ಮಟ್ಟ ಹೆಚ್ಚಿರುವುದೂ  ಹೃದ್ರೋಗಕ್ಕೆ ಪ್ರಮುಖ ಕಾರಣ. ಮಧುಮೇಹ ರೋಗದಿಂದ ಬಳಲುತ್ತಿರುವವರೂ ಸಹ ಈ ಬಗ್ಗೆ ಹೆಚ್ಚು ಗಮನ ವಹಿಸಲೇಬೇಕು.
ಮನೋ ಸಾಮಾಜಿಕ ಒತ್ತಡ
ಮಾನಸಿಕ ಒತ್ತಡವು ಒಂದು ಮುಖ್ಯವಾದ ಅಪಾಯ ಪೂರಕ ಅಂಶ. ಇದರಿಂದ ಆಡ್ರಿನಲಿನ್‌ ಉತ್ಪತ್ತಿ ಹೆಚ್ಚಾಗುತ್ತದೆ; ದೀರ್ಘ‌ಕಾಲದ ಮಾನಸಿಕ ಒತ್ತಡವು ರಕ್ತದ ಒತ್ತಡವನ್ನು ಹೆಚ್ಚಿಸುತ್ತದೆ, ಮಧುಮೇಹವನ್ನು ಆಹ್ವಾನಿಸುತ್ತದೆ  ಮತ್ತು ಹೃದಯದ ಅಪಧಮನಿಗಳನ್ನು  ಸಂಕುಚನಗೊಳಿಸುತ್ತದೆ.

ಉಸಿರಾಟದ ವ್ಯಾಯಾಮಗಳು, ದೇಹ ಸಡಿಲಿಸಿಕೊಳ್ಳುವ  ವ್ಯಾಯಾಮಗಳು, ಯೋಗ, ಧ್ಯಾನ ಮುಂತಾದವುಗಳಿಂದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಮಾರ್ಗೋಪಾಯಗಳಿಂದ ಒತ್ತಡಕ್ಕೆ ಪ್ರತಿಕ್ರಿಯೆಯಾಗಿ ಆಡ್ರಿನಲಿನ್‌ ಉತ್ಪಾದನೆಯಾಗುವುದನ್ನು ಕಡಿಮೆ ಮಾಡಿಕೊಳ್ಳಬಹುದು. ಜೊತೆಗೆ, ಈ ವಿಶ್ರಾಂತಿ ಕೊಡುವ ತಂತ್ರಗಳು  ಬಹಳ ಸುರಕ್ಷಿತ. ಹೆಚ್ಚಿನ ಅಪಾಯದ  ಭೀತಿಯುಳ್ಳ  ಜನರಿಗೆ ಇವು ಅತ್ಯುತ್ತಮ .

ನಿರಂತರ  ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು, ವ್ಯಾಯಾಮ ಒಂದು ಆತ್ಯಂತ ಉಪಯೋಗಿ ವಿಧಾನ . ಇದು ನೆರವಾಗುತ್ತದೆ, ಹೃದಯಾಘಾತದ ಸಂಭವವನ್ನು ಕಡಿಮೆ ಮಾಡುತ್ತದೆ  ಮತ್ತು ಬೊಜ್ಜನ್ನು ನಿಯಂತ್ರಿಸುತ್ತದೆ.

No comments