Breaking News

ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಪತಿ ಸೇರಿ ನಾಲ್ವರ ಹೀನಾಯ ಕೃತ್ಯ


ಬೆಂಗಳೂರು : ನಗರದಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದ ಬಗ್ಗೆ ವರದಿಯಾಗಿದ್ದು, ಅತ್ಯಾಚಾರ ಕೃತ್ಯದಿಂದ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.

ಪತಿ ಸೇರಿ ಆತನ ಮೂವರು ಸ್ನೇಹಿತರು ಜೊತೆಗೂಡಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ೩೫ ವರ್ಷ ವಯಸ್ಸಿನ ಮಹಿಳೆ ದೂರಿದ್ದಾರೆ. ಆದರೆ ಆಕೆಯ ಮೇಲೆ ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿ ಅಟ್ಟಹಾಸ ಮೆರೆದು ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಂಜಾನ್ ಮಾಸದ ಸಂದರ್ಭದಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದ್ದರೂ ಸಂತ್ರಸ್ತ ಮಹಿಳೆ ಅದನ್ನು ಮುಚ್ಚಿಟ್ಟು ದೂರು ನೀಡಲು ಹಿಂದೇಟು ಹಾಕಿರುವುದು ಅತ್ಯಾಚಾರ ಯಾರು ನಡೆಸಿದ್ದಾರೆ ಎನ್ನುವ ಬಗ್ಗೆ ಗೊಂದಲ ಉಂಟಾಗಿದೆ.

ಬಂಬೂಬಜಾರ್ ಬಳಿ ವಾಸಿಸುತ್ತಿದ್ದ ೩೫ ವರ್ಷದ ಮಹಿಳೆಯ ಮೇಲೆ ಆತನ ಪತಿ ಸೇರಿ ನಾಲ್ವರು ದುಷ್ಕರ್ಮಿಗಳು ಕಳೆದ ಜೂ.೧೧ರಂದು ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಆಘಾತಗೊಂಡ ಮಹಿಳೆಯು ಬೌರಿಂಗ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೃತ್ಯ ನಡೆದ ನಾಲ್ಕೈದು ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಮಹಿಳೆ ರಂಜಾನ್ ಉಪವಾಸ ಇರುವ ಕಾರಣ ದೂರು ನೀಡಲು ಹಿಂದೇಟು ಹಾಕಿರುವುದಾಗಿ ತಿಳಿಸಿದ್ದಾರೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ ಇಂತಹ ಹೀನಕೃತ್ಯ ನಡೆಸಿದ್ದಾನೆ ಎನ್ನಲಾಗಿದ್ದು, ಮಹಿಳೆ ನೀಡಿರುವ ದೂರು ಸಂಶಯಾಸ್ಪದವಾಗಿದೆ. ಒಂದು ಬಾರಿ ಬಂಬೂಬಜಾರ್ ಬಳಿ ಕೃತ್ಯ ನಡೆದಿದೆ ಎಂದುಹೇಳಿದರೆ ಮತ್ತೊಂದು ಬಾರಿ ಕೆ.ಆರ್. ಪುರಂ ಬಳಿ ನಡೆದಿದೆ ಎನ್ನುತ್ತಿದ್ದು, ಕೂಲಂಕಷ ತನಿಖೆ ಕೈಗೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ನಿಂಬಾಳ್ಕರ್ ತಿಳಿಸಿದ್ದಾರೆ.

ಸಂತ್ರಸ್ತ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆಘಾತಕ್ಕೊಳಗಾಗಿರುವ ಆಕೆ ಪೂರ್ಣಪ್ರಮಾಣದಲ್ಲಿ ಚೇತರಿಸಿಕೊಂಡ ಬಳಿಕ ಹೆಚ್ಚಿನ ಮಾಹಿತಿ ಪಡೆಯಲಾಗುವುದು ಎಂದು ಪೂರ್ವ ವಿಭಾಗದ ಪೊಲೀಸರು ತಿಳಿಸಿದ್ದಾರೆ.

No comments