ಬಾಳಿಗಾ ಹತ್ಯೆ ಪ್ರಕರಣ ಕಾಶಿಮಠದ ಸ್ವಾಮೀಜಿ ವಿಚಾರಣೆಗೆ ಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ
ಮಂಗಳೂರು : ಆರ್‌ಟಿಐ ಕಾರ್ಯಕರ್ತ ವಿನಾಯಕ್ ಬಾಳಿಗಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಸೋದರಿ ಅನುರಾಧಾ ಬಾಳಿಗಾ ಮಂಗಳೂರಿನ ಕಾಶಿಮಠದ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರನ್ನೂ ತನಿಖೆಗೊಳಪಡಿಸಬೇಕೆಂದು ಕೋರಿ ಇಲ್ಲಿನ ಮೂರನೇ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.
ಶ್ರೀಯುತ ಉಮೇಶ್ ಮಲ್ಯ ಉರುಫ್ ಸಂಯಮೀಂದ್ರ ತೀರ್ಥ ಸ್ವಾಮೀಜಿಗಳೇ ಇನ್ನಾದರೂ ನನ್ನ ಪತ್ರಕ್ಕೆ ಉತ್ತರಿಸಿ...’‘ಈ ರೀತಿಯ ಸಂಬೋಧನೆಯೇ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗಾ ಹತ್ಯೆಗೆ ಕಾರಣವಾಯ್ತು. ಇವನನ್ನು ಹೀಗೇ ಬಿಟ್ಟರೆ ಮಠದ ಒಳಗಿನ ವ್ಯವಹಾರಗಳನ್ನು ಬಯಲಿಗೆ ಎಳೆಯುತ್ತಾನೆ ಎಂಬ ಭೀತಿಯಿಂದ ನನ್ನ ತಮ್ಮನನ್ನು ಸ್ವಾಮೀಜಿ ಮತ್ತು ಅವರ ಗುಂಪು ನರೇಶ್ ಶೆಣೈಗೆ ₹ 30 ಲಕ್ಷ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದೆ’ ಎಂದು ವಿನಾಯಕ ಬಾಳಿಗಾ ಅವರ ತಂಗಿ ಅನೂರಾಧಾ ಬಾಳಿಗಾ ಆರೋಪಿಸಿದ್ದಾರೆ.
ಜೊತೆಗೆ ಅರ್ಜಿಯಲ್ಲಿ ಇನ್ನೂ ೧೪ ಮಂದಿಗಳಾದ ಜಗನ್ನಾಥ್ ಕಾಮತ್ (ಲೆಕ್ಕ ಪರಿಶೋಧಕ), ವಿಘ್ನೇಶ್ ನಾಯಕ್ ಮತ್ತು ಚೇತನಾ ಕಾಮತ್, ಸುರೇಶ್ ಕಾಮತ್, ಜಿ.ವಿ. ಕಾಮತ್ (ಉದ್ಯಮಿಗಳು), ಸಿ.ಎಲ್. ಶೆಣೈ (ನಿವೃತ್ತ ಬ್ಯಾಂಕ್ ಉದ್ಯೋಗಿ), ರವೀಂದ್ರ ನಿಕ್ಕಂ (ಚಿನ್ನದ ವ್ಯಾಪಾರಿ), ವೇದವ್ಯಾಸ ಕಾಮತ್, ಹನುಮಂತ ಕಾಮತ್, ವಿಶ್ವನಾಥ್ ಭಟ್, ಕಾರ್ಕಳದ ರಾಧಾಮಾಧವ ಶೆಣೈ, ಬೆಂಗಳೂರಿನ ಕೆ.ನಾರಾಯಣ ಶೆಣೈ ಹಾಗೂ ಬಂಟ್ವಾಳದ ವಿಜಯಾನಂದ ಶೆಣೈ (ಸ್ವಾಮೀಜಿ ಕಾರು ಚಾಲಕ) ಅವರನ್ನು ವಿಚಾರಣೆಗೊಳಪಡಿಸಬೇಕೆಂದು ಕೋರಿದ್ದಾರೆ. ಕಾಶಿಮಠದ ಸಂಸ್ಥಾನಕ್ಕೆ ಸೇರಿದ ಮಂಗಳೂರಿನ ವೆಂಕಟರಮಣ ದೇವಸ್ಥಾನದ ಪುನರುಜ್ಜೀವನ ಕಾಮಗಾರಿಯಲ್ಲಿ ಕೋಟ್ಯಂತರ ಮೊತ್ತದ ಅವ್ಯವಹಾರ ನಡೆದಿದೆ. ಇದರ ಲೆಕ್ಕ ಪರಿಶೋಧನೆ ಮಾಡಬೇಕೆಂಬ ವಿನಾಯಕ್ ಬಾಳಿಗಾ ಆಗ್ರಹವೇ ಅವರ ಕೊಲೆಗೆ ಕಾರಣವೆಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಈ ತಿಂಗಳ ೨೬ರಂದು ಅರ್ಜಿ ವಿಚಾರಣೆಗೆ ಬರಲಿದೆ.
No comments