ಪರಿಸರ ಮಾಲಿನ್ಯ ನಿಯಂತ್ರಿಸಲು : ಸಿದ್ದು ಮನವಿ
ಬೆಂಗಳೂರು : ಪರಿಸರ ಸಂರಕ್ಷಣೆಗೆ ಸ್ವಚ್ಛತೆ ಕಸ ವಿಂಗಡಣೆ ಸೇರಿದಂತೆ, ಸರ್ಕಾರ ಹತ್ತು ಹಲವು ಕಠಿಣ ಕಾನೂನುಗಳನ್ನು ಜಾರಿಗೊಳಿಸಿದೆಯಾದರೂ, ನಾಗರೀಕರು ಇವುಗಳನ್ನು ಪಾಲಿಸದಿರುವುದು ವಿಷಾದದ ಸಂಗತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ನಾಗರೀಕರು ತಮ್ಮ ಹಕ್ಕುಗಳ ಬಗ್ಗೆ ಪ್ರತಿಪಾದಿಸುವುದರ ಜೊತೆಗೆ ತಮ್ಮ ಜವಾಬ್ದಾರಿ ಹಾಗೂ ಕರ್ತವ್ಯಗಳ ಬಗ್ಗೆ ಅರಿತುಕೊಳ್ಳಬೇಕಾದುದು ಅಗತ್ಯ ಎಂದು ತಿಳಿಸಿದರು. ನಗರದ ಜಿಕೆವಿಕೆ ಆವರಣದ ಬಾಬು ರಾಜೇಂದ್ರ ಪ್ರಸಾದ್ ಸಭಾಂಗಣದಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಗರೀಕರಣದ ಪ್ರಭಾವದಿಂದಾಗಿ ಜನದಟ್ಟಣೆ ಮತ್ತು ವಾಹನ ದಟ್ಟಣೆ ಹೆಚ್ಚುತ್ತಿದ್ದು, ತ್ಯಾಜ್ಯ ನೀರನ್ನು ಕೆರೆಗಳಿಗೆ ಬಿಡುತ್ತಿರುವುದರಿಂದ ವರ್ತೂರು ಹಾಗೂ ಬೆಳ್ಳಂದೂರು ಕೆರೆಯ ನೀರು ಕಲುಷಿತಗೊಂಡು ನೊರೆ ಹಾಗೂ ಬೆಂಕಿ ಕಾಣಿಸಿಕೊಂಡು ಜನಜೀವನದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದ ಅವರು, ಪರಿಸರ ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಇವುಗಳನ್ನು ಅನುಷ್ಠಾನಗೊಳಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದರು.
ಪರಿಸರ ಸಂರಕ್ಷಣೆಯ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದ್ದು, ಶಾಲೆಗಳಲ್ಲಿ ಹಸಿರು ವಾತಾವರಣ ನಿರ್ಮಿಸಬೇಕೆಂದು ಸಲಹೆ ನೀಡಿದರು.
ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆ ವಿಚಾರದಲ್ಲಿ ಮಕ್ಕಳು ಹೆಚ್ಚು ಗಮನ ಹರಿಸಬೇಕೆಂದು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಾವು ವಿದ್ಯಾರ್ಥಿಯಾಗಿದ್ದಾಗ ಕೆರೆಗಳಿಂದ ನೀರು ತಂದು ಶಾಲಾ ಅಂಗಳದಲ್ಲಿ ಸಸಿಗಳನ್ನು ನೆಡುತ್ತಿದ್ದುದ್ದನ್ನು ಮುಖ್ಯಮಂತ್ರಿಯವರು ಸ್ಮರಿಸಿದರು.
ಸರ್ಕಾರದ ವತಿಯಿಂದ ಕಳೆದ ವರ್ಷ 8 ಕೋಟಿ ಹಾಗೂ ಪ್ರಸಕ್ತ ವರ್ಷದಲ್ಲಿ 6 ಕೋಟಿ ಗಿಡ ನೆಟ್ಟಿದ್ದೇವೆ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ. ಆದರೆ ಅರಣ್ಯ ನಾಳಗೊಂಡು ಮರಗಳ ಸಂಖ್ಯೆ ಪ್ರಮಾಣ ಕ್ಷೀಣಿಸುತ್ತಲೇ ಇದೆ. ಇವರು ನೆಟ್ಟ ಸಸಿಗಳು ಏನಾಗುತ್ತಿವೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಇದೇ ಸಂದರ್ಭದಲ್ಲಿ ನಗೆ ಚಟಾಕಿ ಹಾರಿಸಿದರು.
ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳ ಕೆರೆಗಳು ಒತ್ತುವರಿಯಾಗಿರುವುದರಿಂದ ಕೆರೆಗೆ ನೀರು ಬರುವ ಮಾರ್ಗಗಳನ್ನೇ ಮುಚ್ಚಿ ಕಟ್ಟಡ ನಿರ್ಮಾಣ ಮಾಡಿ ಅತಿಕ್ರಮಿಸಿರುವುದರಿಂದ ನೀರಿನ ಲಭ್ಯತೆಯಾಗದೆ, ಸಮಸ್ಯೆ ತಲೆದೋರುತ್ತಿದೆ ಎಂದರು.
No comments